ಕರ್ನಾಟಕ

ಮನೆ ಮುಂದೆ ಇಸ್ಪೀಟ್ ಆಡುವವರು ಜೂಜುಗಾರರಲ್ಲ: ಹೈಕೋರ್ಟ್

Pinterest LinkedIn Tumblr

Karnataka High Courtcourt

ಬೆಂಗಳೂರು, ಸೆ. 22: ಸಮಯ ಕಳೆಯುವುದಕ್ಕಾಗಿ ಮನೆ ಮುಂದೆ ಕುಳಿತು ಇಸ್ಪೀಟ್ ಆಡುವವರನ್ನು ಜೂಜುಗಾರ ಎಂದು ಪರಿಗಣಿಸಿ ಬಂಧಿಸಲು ಸಾಧ್ಯವಿಲ್ಲ ಎಂದು ಹೈಕೋರ್ಟ್ ಅಭಿಪ್ರಾಯ ಪಟ್ಟಿದೆ.ಮನೆಯಲ್ಲಿ ಕುಳಿತು ಜೂಜಾಡುತ್ತಿದ್ದವರನ್ನು ಬಂಧಿಸಿದ್ದ ಕ್ರಮವನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾ.ಕೆ.ಎನ್.ಫಣೀಂದ್ರ ಅವರಿದ್ದ ನ್ಯಾಯಪೀಠ, 1971 ಹಾಗೂ 1977ರಲ್ಲಿ ನಡೆದ ಪ್ರಕರಣಗಳಲ್ಲಿಯೂ ಹೈಕೋರ್ಟ್ ಇದೇ ರೀತಿಯ ತೀರ್ಪು ನೀಡಿದ್ದು, ಅಲ್ಲದೆ, ಕರ್ನಾಟಕ ಪೊಲೀಸ್ ಕಾಯ್ದೆ-1980ರ ಪ್ರಕಾರ ಅಂದರ್-ಬಾಹರ್ ಆಟವು ಜೂಜಾಟ ವ್ಯಾಪ್ತಿಗೆ ಬರುವುದಿಲ್ಲ ಮತ್ತು ಅದೊಂದು ಶಿಕ್ಷಾರ್ಹ ಅಪರಾಧ ಕೃತ್ಯವಲ್ಲ ಎಂದು ಅಭಿಪ್ರಾಯಪಟ್ಟ ನ್ಯಾಯಪೀಠ, ಬಂಧಿತರನ್ನು ಬಿಡುಗಡೆ ಮಾಡುವುದಕ್ಕೆ ಆದೇಶಿಸಿದೆ.

ಧಾರ್ಮಿಕ ಸಮಾರಂಭ, ಮದುವೆ ಸೇರಿದಂತೆ ವಿವಿಧ ಸಂದರ್ಭಗಳಲ್ಲಿ ಮನೆ ಮಂದಿಯೆಲ್ಲ ಕುಳಿತು ಇಸ್ಪೀಟ್ ಆಡುತ್ತಾರೆ. ಅವರೆನ್ನೆಲ್ಲ ಜೂಜಾಡುತ್ತಿದ್ದಾರೆ ಎಂದು ಆರೋಪಿಸಿ ಬಂಧಿಸಲು ಸಾಧ್ಯವಿಲ್ಲ ಎಂದು ನ್ಯಾಯಪೀಠ ತನ್ನ ಆದೇಶದಲ್ಲಿ ತಿಳಿಸಿದೆ.

ಪ್ರಕರಣದ ಹಿನ್ನೆಲೆ: ಶಿವಮೊಗ್ಗ ಜಿಲ್ಲೆಯ ಅಂಶಿ ಗ್ರಾಮ ಎಂಬಲ್ಲಿ ಜೂ.24ರಂದು ವಿಶ್ವನಾಥ್ ಎಂಬವರು ಸೇರಿದಂತೆ ಇತರರು ಮನೆಯ ಮುಂದಿನ ಜಗಲಿಯ ಮೇಲೆ ಕುಳಿತು ಇಸ್ಪೀಟ್ ಆಡುತ್ತಿದ್ದರು. ಈ ವೇಳೆ ದಾಳಿ ಮಾಡಿದ ಸಾಗರ ಗ್ರಾಮಾಂತರ ಠಾಣೆಯ ಪೊಲೀಸರು ನಾಲ್ಕು ಜನ ಆರೋಪಿಗಳನ್ನು ಬಂಧಿಸಿ 930 ರೂ., ಮೂರು ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಂಡು ಎಫ್‌ಐಆರ್ ದಾಖಲಿಸಿದ್ದರು.

ತಾವು ಯಾವುದೇ ರೀತಿಯ ಜೂಜು ಆಡುತ್ತಿರಲಿಲ್ಲ. ಕೇವಲ ಸಮಯ ಕಳೆಯುವುದಕ್ಕಾಗಿ ಕುಳಿತಿದ್ದೆವು, ಈ ವೇಳೆ ದಾಳಿ ನಡೆಸಿದ ಪೊಲೀಸರು ನಮ್ಮ ವಿರುದ್ಧ ವಿನಾಕಾರಣ ಪ್ರಕರಣ ದಾಖಲಿಸಿದ್ದಾರೆ. ತಮ್ಮ ವಿರುದ್ಧದ ಪ್ರಕರಣವನ್ನು ರದ್ದುಪಡಿಸಬೇಕು ಎಂದು ವಿಶ್ವನಾಥ್ ಮತ್ತಿತರರು ಹೈಕೋರ್ಟ್ ಮೆಟ್ಟಿಲೇರಿದ್ದರು.

Write A Comment