ಕರ್ನಾಟಕ

ಸರಕಾರಿ ಆಸ್ತಿಯನ್ನು ಉಳಿಸಲು ಸರಕಾರ ಮುಂದಾಗಲಿ: ಎಂ.ವಿ.ರಾಜಶೇಖರನ್

Pinterest LinkedIn Tumblr

horata

ಬೆಂಗಳೂರು, ಸೆ. 22: ಎಚ್.ಎಸ್. ದೊರೆಸ್ವಾಮಿ ಮತ್ತು ಎ.ಟಿ.ರಾಮಸ್ವಾಮಿ ಯವರ ನೇತೃತ್ವದಲ್ಲಿ ಭೂಕಬಳಿಕೆ ವಿರೋಧಿ ಹೋರಾಟ ಸಮಿತಿ ನಗರದ ಪುರಭವನದ ಎದುರು ಸೆಪ್ಟಂಬರ್ 8 ರಿಂದ ಆರಂಭಿಸಿರುವ ಧರಣಿ ಮುಷ್ಕರ ಇಂದು ಹದಿನೈದನೇ ದಿನವನ್ನು ಪೂರ್ಣಗೊಳಿಸಿತು. ಬೆಂಗಳೂರು ನಗರ ಮತ್ತು ನಗರ ಜಿಲ್ಲೆಯೊಂದರಲ್ಲಿಯೇ ಸುಮಾರು 20,000 ಎಕರೆಗೂ ಮೀರಿದ ಸಾರ್ವ ಜನಿಕ ಆಸ್ತಿಯನ್ನು ನಕಲಿ ದಾಖಲೆಗಳನ್ನು ಸೃಷ್ಟಿಸಿಕೊಂಡು ಭೂಗಳ್ಳರು ಲಪಟಾಯಿ ಸಿದ್ದಾರೆ, ಇವರ ವಿರುದ್ಧ ಕೂಡಲೇ ಗೂಂಡಾ ಕಾಯ್ದೆಯಡಿಯಲ್ಲಿ ಕಾನೂನು ಕ್ರಮಕ್ಕೆ ಮುಂದಾಗಬೇಕು, ಎ.ಟಿ.ರಾಮಸ್ವಾಮಿ ವರದಿ ಜಾರಿಯಾಗಬೇಕು, ಮತ್ತು ವಿಶೇಷ ನ್ಯಾಯಾ ಲಯಗಳ ಸ್ಥಾಪನೆ ಮೂಲಕ ಎಲ್ಲ ಪ್ರಕರಣಗಳನ್ನು ತ್ವರಿತವಾಗಿ ವಿಲೇವಾರಿ ಮಾಡಬೇಕೆಂಬ ಬೇಡಿಕೆಯೊಂದಿಗೆ ಈ ಧರಣಿ ಸತ್ಯಾಗ್ರಹ ಆರಂಭವಾಗಿದೆ.

ಮಾಜಿ ಕೇಂದ್ರ ಸಚಿವ ಮತ್ತು ಹಿರಿಯ ಕಾಂಗ್ರೆಸ್ ಮುಖಂಡ ಎಂ.ವಿ.ರಾಜಶೇಖರನ್ ರವರು ಇಂದು ಧರಣಿಯ ಸ್ಥಳಕ್ಕೆ ಆಗಮಿಸಿ ಬೆಂಬಲ ಸೂಚಿಸಿದರು. ಅವರು ಮಾತನಾಡುತ್ತ, ಎಲ್ಲಿ ಅನ್ಯಾಯ, ಅಕ್ರಮಗಳು ನಡೆಯುತ್ತವೆಯೋ ಅದನ್ನು ಪ್ರತಿಭಟಿಸುವುದು ನಮ್ಮ ಜವಾಬ್ದಾರಿ; ಇಲ್ಲದಿದ್ದರೆ ನಾವೂ ಅದರಲ್ಲಿ ಪಾಲುದಾರರು ಎಂದು ಮಹಾತ್ಮ ಗಾಂಧಿ ಹೇಳಿದ್ದಾರೆ. ಆ ಮಾತಿನಂತೆ ಈ ಹೋರಾಟ ದೊರೆಸ್ವಾಮಿಯವರ ಮುಂದಾಳತ್ವದಲ್ಲಿ ನಡೆಯುತ್ತಿದೆ. ರಾಜ್ಯದಲ್ಲಿ 4 ಲಕ್ಷ ಎಕರೆಗೂ ಮೀರಿದ ಸರಕಾರಿ ಭೂಮಿ ಕಳ್ಳತನವಾಗಿದೆ. ಸರಕಾರ ಕ್ರಮ ಜರಗಿಸಿ ಸರಕಾರಿ ಆಸ್ತಿಯನ್ನು ಉಳಿಸಲು ಮುಂದಾಗಬೇಕು. ಮುಖ್ಯಮಂತ್ರಿ ಪ್ರಾಮಾಣಿಕರಿದ್ದಾರೆ.

ಅವರು ಇದನ್ನು ಮಾಡುತ್ತಾರೆ ಎನ್ನುವ ವಿಶ್ವಾಸ ಇದೆ. ಈಗಾಗಲೇ ದೊರೆಸ್ವಾಮಿಯವರೂ ಮುಖ್ಯ ಮಂತ್ರಿಗೆ ಪತ್ರ ಬರೆದಿದ್ದಾರೆ. ನಾನೂ ಸಹ ಕಾನೂನು ಮಂತ್ರಿಯ ಜೊತೆ ಮಾತನಾಡಿದ್ದೇನೆ. ಮುಖ್ಯಮಂತ್ರಿಗಳು ಪ್ರತಿದಿನವೂ ಈ ವಿಚಾರದ ಬಗ್ಗೆ ಆಸ್ಥೆವಹಿಸಿ ಗಮನಿಸುತ್ತಿದ್ದಾರೆ. ನಾನೂ ಅವರೊಂದಿಗೆ ಮಾತನಾಡಿ, ಶೀಘ್ರ ಕ್ರಮಕ್ಕೆ ಒತ್ತಾಯಿಸುತ್ತೇನೆ. ಈ ಆಂದೋಳನಕ್ಕೆ ನನ್ನ ಪೂರ್ಣಬೆಂಬಲ ಇದೆ ಎಂದು ಘೋಷಿಸಿದರು

ಹೋರಾಟದ ನೇತೃತ್ವ ವಹಿಸಿರುವ ದೊರೆ ಸ್ವಾಮಿಯವರು ಮಾತನಾಡುತ್ತ, ನಾನು ಈಗಾ ಗಲೇ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದೇನೆ. ಇದು ಮಾಡು ಇಲ್ಲವೇ ಮಡಿ ಹೋರಾಟ. ಅಕ್ಟೋಬರ್ ಎರಡರ ತನಕ ಸರಕಾರಕ್ಕೆ ಸಮಯ ಕೊಟ್ಟಿದ್ದೇವೆ. ಅಷ್ಟರೊಳಗೆ ಮಸೂದೆ ಮಂಜೂ ರಾಗಿ, ವಿಶೇಷ ನ್ಯಾಯಾಲಯ ಸ್ಥಾಪನೆಯಾಗ ಬೇಕು, ಮತ್ತು ಅಕ್ರಮ ಎಸಗಿರುವವರ ವಿರುದ್ಧ ಕ್ರಮಕ್ಕೆ ಮುಂದಾಗಬೇಕು. ಇಲ್ಲದಿದ್ದರೆ ಹೋರಾಟ ತೀವ್ರಸ್ವರೂಪ ಪಡೆದುಕೊಳ್ಳುತ್ತದೆ ಎಂದು ಸರಕಾರಕ್ಕೆ ತೀವ್ರ ಎಚ್ಚರಿಕೆ ಕೊಟ್ಟರು.

ಮಾಜಿ ಶಾಸಕ ಎ.ಟಿ.ರಾಮಸ್ವಾಮಿಯವರು ಮಾತನಾಡುತ್ತ, ತಾವು ಮುಖ್ಯಮಂತ್ರಿ ಗಳಿಗೆ ಬರೆದಿರುವ ಪತ್ರ ಮತ್ತು ಆ ವಿಚಾರದ ಬಗ್ಗೆ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ್ದನ್ನು ಪ್ರಸ್ತಾಪಿಸಿ ದರು. ಪಕ್ಷಾತೀತವಾಗಿ ನಡೆಯುತ್ತಿರುವ ಈ ಹೋರಾಟಕ್ಕೆ ಎಲ್ಲಾ ಪಕ್ಷಗಳ ಪ್ರಾಮಾಣಿಕ ರಾಜಕಾರಣಿಗಳು, ಸಾಮಾ ಜಿಕ ಹೋರಾಟಗಾರರು, ಮತ್ತು ಎಲ್ಲಾ ಸಂಘಸಂಸ್ಥೆಗಳು ಸ್ವಯಂಸ್ಫೂರ್ತಿಯಿಂದ ಭಾಗವಹಿಸಬೇಕೆಂದು ವಿನಂತಿಸಿದರು. ಗುರಿಮುಟ್ಟುವ ತನಕ ಈ ಹೋರಾಟ ನಡೆಯುತ್ತದೆ ಎಂದು ಘೋಷಿಸಿದರು.

ಆಮ್ ಆದ್ಮಿ ಪಕ್ಷದ ಮುಖಂಡ ರವಿ ಕೃಷ್ಣಾರೆಡ್ಡಿಯವರು ಮಾತನಾಡುತ್ತ, ಸಚಿವ ಜಯಚಂದ್ರರಿಗೆ ಕಾಳಜಿ ಇದ್ದ ಹಾಗೆ ಇದೆ. ಆದರೆ ಸರಕಾರ ನಡೆಸುವ ಅಧಿಕಾರಿಗಳಿಗೆ ಈ ವಿಷಯದಲ್ಲಿ ಇಚ್ಛಾ ಶಕ್ತಿಯಾಗಲಿ ಆಸಕ್ತಿಯಾಗಲಿ ಇಲ್ಲ. ಅಧಿಕಾರಿ ಗಳೂ ಈ ಹಗರಣದಲ್ಲಿ ಶಾಮೀಲು ಆಗಿದ್ದಾರೆ ಎಂದು ಸಚಿವರೇ ಇಲ್ಲಿ ಹೇಳಿದರು. ಕಾನೂನು ಮಂತ್ರಿ ಮತ್ತು ಮುಖ್ಯಮಂತ್ರಿಗಳು ರಾಜಕೀಯ ಇಚ್ಛಾಶಕ್ತಿಯನ್ನು ಪ್ರದರ್ಶಿಸಬೇಕು ಎಂದರು.

ರೈತ ಹೋರಾಟಗಾರ ಹೇಮಂತ್ ಕುಮಾರ್, ಸಿಪಿಐ ಮುಖಂಡ ಸಿದ್ಧನಗೌಡ ಪಾಟೀಲ, ಗಾಯಕ ಬಾನಂದೂರು ಕೆಂಪಯ್ಯ ಆದಿಯಾಗಿ ಅನೇಕರು ಇಂದಿನ ಧರಣಿಯಲ್ಲಿ ಪಾಲ್ಗೊಂಡಿ ದ್ದರು. ಹಲವು ಜನಪರ ಸಂಘಟನೆಗಳು ಈ ಹೋರಾಟಕ್ಕೆ ಬೆಂಬಲ ಸೂಚಿಸಿ ಪಾಲ್ಗೊಳ್ಳುತ್ತಿರುವುದು ಕಂಡು ಬಂದಿತು.

Write A Comment