ಕರಾವಳಿ

ಸಹಕಾರಿ ಕ್ಷೇತ್ರದಲ್ಲಿ ‘ಸಹಕಾರ ರತ್ನ’ ಡಾ| ಎಂ. ಎನ್.ಆರ್ ಅವರ ಸಾಧನೆ ಅನನ್ಯ : ಪದ್ಮಶ್ರೀ ಡಾ. ಡಿ. ವೀರೇಂದ್ರ ಹೆಗ್ಗಡೆ

Pinterest LinkedIn Tumblr

‘ಸಹಕಾರ ರತ್ನ’ ಡಾ| ಎಂ. ಎನ್. ರಾಜೇಂದ್ರ ಕುಮಾರ್ ಅವರಿಗೆ ಗೌರವ ಸಮರ್ಪಣೆ

ಮಂಗಳೂರು: ಮಂಗಳೂರು : ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಸಹಕಾರ ರಂಗದ ಅಗ್ರಮಾನ್ಯ ನಾಯಕರಾಗಿ ರಾಜ್ಯ-ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡಿರುವ ಸಹಕಾರ ರತ್ನ ಡಾ| ಎಂ.ಎನ್. ರಾಜೇಂದ್ರ ಕುಮಾರ್ ಅವರು ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳ ನಿ., ಬೆಂಗಳೂರು ಇದರ ಅಧ್ಯಕ್ಷರಾಗಿ ಎರಡನೇ ಬಾರಿ ಅವಿರೋಧವಾಗಿ ಆಯ್ಕೆಗೊಂಡಿರುವ ಹಿನ್ನೆಲೆಯಲ್ಲಿ ‘ಸಹಕಾರ ರತ್ನ’ ಡಾ| ಎಂ. ಎನ್. ರಾಜೇಂದ್ರ ಕುಮಾರ್ ಅಭಿನಂದನಾ ಸಮಿತಿ ಅಶ್ರಯದಲ್ಲಿ ಡಾ| ಎಂ. ಎನ್. ರಾಜೇಂದ್ರ ಕುಮಾರ್ ರಿಗೆ ಗೌರವ ಸಮರ್ಪಣೆ ಕಾರ್ಯಕ್ರಮ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ರಾಜರ್ಷಿ ಡಾ| ಡಿ. ವೀರೇಂದ್ರ ಹೆಗ್ಗಡೆ ಅವರ ಅಧ್ಯಕ್ಷತೆಯಲ್ಲಿ ಶನಿವಾರ ಎಸ್ ಸಿಡಿಸಿಸಿ ಬ್ಯಾಂಕ್ ಸಭಾಂಗಣದಲ್ಲಿ ಜರುಗಿತು.

ಆಶೀರ್ವಚನದ ನುಡಿಗಳನ್ನಾಡಿದ ಡಾ.ಡಿ. ವೀರೇಂದ್ರ ಹೆಗ್ಗಡೆ ಅವರು, “ನಾನು ಹಿಂದಿನಿಂದಲೂ ಮಹಾತ್ಮ ಗಾಂಧಿಯವರ ಅನೇಕ ಪುಸ್ತಕಗಳನ್ನು ಓದುತ್ತಾ ಬಂದವನು. ಗಾಂಧಿ ಅವರು ದೇಶ ಉದ್ಧಾರವಾಗಲು ಸಹಕಾರ ತತ್ವದ ಮೂಲಕ ಜೊತೆಯಾಗಿ ಸಾಗೋಣ, ಜೊತೆಯಾಗಿ ಬೆಳೆಯೋಣ ಎಂದರು. ಇದೇ ತತ್ವದಡಿಯಲ್ಲಿ ಬೆಳೆದ ರಾಜೇಂದ್ರ ಕುಮಾರ್ ಅವರು ಸಹಕಾರಿ ಕ್ಷೇತ್ರದಲ್ಲಿ ಸಾಧನೆ ಮಾಡಿದ್ದಾರೆ. ಅವರ ಈ ಸಾಧನೆ ಅನನ್ಯ. ಎಲ್ಲರೂ ಸಹಕಾರಿ ತತ್ವದಲ್ಲಿ ನಂಬಿಕೆಯಿಟ್ಟರೆ ಅಭಿವೃದ್ಧಿ ಸಾಧ್ಯ ಎಂದರು.

ಅಭಿನಂದನಾ ಭಾಷಣ ಮಾಡಿದ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಅವರು, “ರಾಜೇಂದ್ರ ಕುಮಾರ್ ಅವರು ಸಹಕಾರಿ ಕ್ಷೇತ್ರದ ರಾಜನಂತಿದ್ದಾರೆ. ಸಣ್ಣ ಊರಿನಲ್ಲಿ ಹುಟ್ಟಿ ಬೆಳೆದ ಅವರು ಇಂದು ಕೀರ್ತಿ ಪತಾಕೆಯನ್ನು ಜಗದಗಲ ಹಾರಿಸಿದ್ದಾರೆ. ಇವರಿಂದ ಬ್ಯಾಂಕಿಂಗ್ ಕ್ಷೇತ್ರ ಇನ್ನಷ್ಟು ಯಶಸ್ಸು ಸಾಧಿಸಲಿ” ಎಂದರು.

ಬಳಿಕ ಮಾತಾಡಿದ ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್ ಅವರು, “ಸಹಕಾರ ಕ್ಷೇತ್ರದಲ್ಲಿ ನಿರಂತರ ಉತ್ಸಾಹದಿಂದ ಇಡೀ ದೇಶದಲ್ಲಿ ಕೀರ್ತಿಯನ್ನು ಮೆರೆಯಿಸಿದವರು ರಾಜೇಂದ್ರ ಕುಮಾರ್ ಅವರು. ಕರಾವಳಿ ಭಾಗದಲ್ಲಿ ಯಶಸ್ವಿಯಾಗಿ ಬ್ಯಾಂಕ್ ಅನ್ನು ಸ್ಥಾಪನೆ ಮಾಡುತ್ತಾ ಸಾವಿರಾರು ಮಂದಿಗೆ ಉದ್ಯೋಗ ನೀಡಿದ್ದಾರೆ. ಕೊರೋನಾ ಸಂಕಷ್ಟದ ಕಾಲದಲ್ಲಿಯೂ ಅವರು ನೊಂದವರ ಪರ ನಿಂತಿದ್ದಲ್ಲದೆ ಎರಡು ಆಂಬುಲೆನ್ಸ್ ಸೇವೆಯನ್ನು ಒದಗಿಸಿದ್ದರು. ವಿದೇಶದಿಂದ ಬಂದವರಿಗೆ ಕ್ವಾರಂಟೈನ್ ಗಾಗಿ ದೊಡ್ಡ ಕಟ್ಟಡವನ್ನು ಜಿಲ್ಲಾಡಳಿತಕ್ಕೆ ಒದಗಿಸುವ ಮೂಲಕ ನೆರವು ನೀಡಿದರು. ಅವರ ಸಾಮಾಜಿಕ ಕಳಕಳಿ ಮುಂದೆಯೂ ಇದೇ ರೀತಿ ಮುಂದುವರಿಯಲಿ” ಎಂದು ಶುಭ ಹಾರೈಸಿದರು.

ಅಭಿನಂದನೆ ಸ್ವೀಕರಿಸಿ ಮಾತಾಡಿದ ಎಂ.ಎನ್. ರಾಜೇಂದ್ರ ಕುಮಾರ್ ಅವರು, “ನಾನು ಜೀವನದಲ್ಲಿ ಇಷ್ಟು ಎತ್ತರಕ್ಕೆ ಬೆಳೆಯಲು ಕಾರಣ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರು. ನಾನು ಎನ್ನುವ ಬದಲು ನಾವು ಎನ್ನುವ ಚಿಂತನೆ ನಮ್ಮದಾದರೆ ಇಡೀ ಸಮಾಜ ಅಭಿವೃದ್ಧಿಯಾಗುತ್ತದೆ. ಯಾವುದೇ ಜಾತಿ, ಪಕ್ಷ ಬೇಧವಿಲ್ಲದೆ ಎಲ್ಲರನ್ನೂ ಸೇರಿಸಿಕೊಂಡು ಗುಂಪು ಮಾಡಿದ ಕಾರಣ ಮಹಾಮಂಡಲ ಚುನಾವಣೆಯಲ್ಲಿ ಗೆಲ್ಲಲು ಸಾಧ್ಯವಾಯಿತು. ಅಣ್ಣತಮ್ಮಂದಿರ ಹಾಗೇ ಎಲ್ಲರನ್ನೂ ಸೇರಿಸಿಕೊಂಡು ಮುನ್ನಡೆದಾಗ ಅಭಿವೃದ್ಧಿ ಸಾಧ್ಯವಾಗುತ್ತದೆ” ಎಂದರು.

ವೇದಿಕೆಯಲ್ಲಿ ಶ್ರೀಮತಿ ಅರುಣಾ ರಾಜೇಂದ್ರ ಕುಮಾರ್, ಮಂಗಳೂರು ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್, ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳ ನಿ. ಇದರ ಅಧ್ಯಕ್ಷ ಐಕಳಬಾವ ದೇವಿಪ್ರಸಾದ್ ಶೆಟ್ಟಿ ಬೆಳಪು, ಅದಾನಿ ಗ್ರೂಪ್ ನ ಕಿಶೋರ್ ಆಳ್ವ, ಆಳ್ವಾಸ್ ಪ್ರತಿಷ್ಠಾನದ ಮೋಹನ್ ಆಳ್ವ, ಮಾಜಿ ಸಚಿವ ನಾಗರಾಜ್ ಶೆಟ್ಟಿ, ಮೂಲ್ಕಿ-ಮೂಡಬಿದ್ರೆ ಕ್ಷೇತ್ರ ಶಾಸಕ ಉಮಾನಾಥ್ ಕೋಟ್ಯಾನ್, ಮಾಜಿ ಶಾಸಕ ಅಭಯಚಂದ್ರ ಜೈನ್, ದಿನೇಶ್ ಕೊಪ್ಪ, ಡಿಸಿಸಿ ಬ್ಯಾಂಕಿನ ಉಪಾಧ್ಯಕ್ಷ ವಿನಯ ಕುಮಾರ್ ಸೂರಿಂಜೆ, ವಿನಯ್ ಕುಮಾರ್ ಸೂರಿಂಜೆ, ಅಭಿನಂದನಾ ಸಮಿತಿ ಅಧ್ಯಕ್ಷ ಶಶಿಕುಮಾರ್ ರೈ ಬಾಲ್ಗೊಟ್ಟು, ಉಪಾಧ್ಯಕ್ಷ ಜಯಕರ್ ಶೆಟ್ಟಿ ಇಂದ್ರಾಳಿ, ಪ್ರಸಾದ್ ಕೌಶಲ್ ಶೆಟ್ಟಿ, ಕಾರ್ಯಾಧ್ಯಕ್ಷ ಭಾಸ್ಕರ್ ಎಸ್. ಕೋಟ್ಯಾನ್, ಪ್ರಧಾನ ಕಾರ್ಯದರ್ಶಿ ರಾಜು ಎಸ್. ಪೂಜಾರಿ, ಬ್ಯಾಂಕಿನ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಗೋಪಾಲಕೃಷ್ಣ ಭಟ್ ಮುಂತಾದವರು ಉಪಸ್ಥಿತರಿದ್ದರು.

Comments are closed.