ಕರಾವಳಿ

ಕಷ್ಟದ ಕಾಲದಲ್ಲಿ ಬಂಟ ಸಮಾಜದ ಸಾಮಾಜಿಕ ಕಾಳಜಿ ಸದಾ ಸ್ಮರಣೀಯ : ಪದ್ಮಶ್ರೀ ಡಾ. ಡಿ. ವೀರೇಂದ್ರ ಹೆಗ್ಗಡೆ

Pinterest LinkedIn Tumblr

ರಾಮಕೃಷ್ಣ ವಿದ್ಯಾರ್ಥಿನಿ ಭವನದ ಅಮೃತ ಮಹೋತ್ಸವ ಕಾರ್ಯಕ್ರಮ ಉದ್ಘಾಟನಾ ಸಮಾರಂಭ

ಮಂಗಳೂರು: ಬಂಟರ ಯಾನೆ ನಾಡವರ ಮಾತೃ ಸಂಘದ ಆಶ್ರಯದಲ್ಲಿ ಶ್ರೀ ರಾಮಕೃಷ್ಣ ವಿದ್ಯಾರ್ಥಿನಿ ಭವನದ ಅಮೃತ ಮಹೋತ್ಸವ ಕಾರ್ಯಕ್ರಮದ ಉದ್ಘಾಟನಾ ಸಮಾರಂಭ ಶನಿವಾರ ಬೆಳಗ್ಗೆ ನಗರದ ಬಂಟ್ಸ್ ಹಾಸ್ಟೆಲ್ ಆವರಣದಲ್ಲಿ ಜರುಗಿತು.

ಬಂಟರ ಯಾನೆ ನಾಡವರ ಮಾತೃಸಂಘದ ಅಧ್ಯಕ್ಷ ಮಾಲಾಡಿ ಅಜಿತ್ ಕುಮಾರ್ ರೈ ಅವರು ಪ್ರಸ್ತಾವಿಕ ಮಾತನ್ನಾಡಿ ಅತಿಥಿಗಳನ್ನು ಸ್ವಾಗತಿಸಿದರು.

ಕಾರ್ಯಕ್ರಮವನ್ನು ಧರ್ಮಸ್ಥಳದ ಧರ್ಮಾಧಿಕಾರಿ ಪದ್ಮಶ್ರೀ ಡಾ. ವೀರೇಂದ್ರ ಹೆಗ್ಗಡೆ ಅವರು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು.

ಬಳಿಕ ಆಶೀರ್ವಚನದ ನುಡಿಗಳನ್ನಾಡಿದ ಅವರು, “ನಮಗೆ ಎಷ್ಟೇ ಸಂಪತ್ತು ಬಂದರೂ ನಮ್ಮ ಅನನ್ಯ ಸಂಸ್ಕೃತಿಯನ್ನು ಮರೆಯದಿರೋಣ. ನಮ್ಮ ಆಚಾರ ವಿಚಾರ, ಪದ್ಧತಿಯನ್ನು ಮಕ್ಕಳಿಗೂ ತಿಳಿಸುವ ಮೂಲಕ ಅವರನ್ನು ಬೆಳೆಸೋಣ. 100 ವರ್ಷಗಳ ಹಿಂದೆ ದೇಶದಲ್ಲಿ ಬಡತನ, ಅನಕ್ಷರತೆ, ನಿರುದ್ಯೋಗ ತಾಂಡವವಾಡುತ್ತಿತ್ತು. ಇಂತಹ ವೇಳೆಯಲ್ಲಿ ನಮ್ಮ ಸಮಾಜದ ಹಿರಿಯರು ಯೋಚನೆ ಮಾಡಿ ಸ್ಥಾಪಿಸಿರುವ ವಿದ್ಯಾರ್ಥಿನಿ ನಿಲಯ ಇಂದು ಮಾತ್ರವಲ್ಲ ಮುಂದಿನ ಪೀಳಿಗೆಗೂ ದಾರಿದೀಪವಾಗಿದೆ.

ನಮ್ಮ ಜಿಲ್ಲೆ ಬ್ಯಾಂಕಿಂಗ್ ಕ್ಷೇತ್ರದ ತವರು ಆಗಿದೆ. ನಮ್ಮದು ಕೃಷಿ ಪ್ರಧಾನ ಜಿಲ್ಲೆಯಾಗಿದ್ದು ಇಲ್ಲಿ ಕೃಷಿಕರು, ಭೂ ಹಿಡುವಳಿಗಾರರು ಇಬ್ಬರೂ ಇದ್ದರು. ಬಡತನದಿಂದ ಬೆಳೆದವರು ದೂರಾದೂರಿಗೆ ಹೋಗಿ ಸಾಧನೆ ಮಾಡುವ ಮೂಲಕ ನಮ್ಮ ತುಳುನಾಡಿಗೆ ಒಳ್ಳೆಯ ಹೆಸರು ತಂದರು. ಮಹಿಳಾ ಸಬಲೀಕರಣ, ಸ್ತ್ರೀ ಸಮಾನತೆ ಬಗ್ಗೆ ನಾವಿಂದು ಮಾತಾಡುತ್ತಿದ್ದೇವೆ. ಆದರೆ ಈ ಬಗ್ಗೆ ಹಲವು ವರ್ಷಗಳ ಹಿಂದೆಯೇ ಬಂಟ ಸಮಾಜ ಯೋಚನೆ ಮಾಡಿದ್ದು ವಿದ್ಯಾರ್ಥಿನಿ ನಿಲಯಗಳನ್ನು ಸ್ಥಾಪಿಸುವ ಮೂಲಕ ಸಮಾಜಕ್ಕೆ ನೆರವು ನೀಡಿದೆ. ಅಂತಹ ಕಷ್ಟದ ಕಾಲದಲ್ಲೂ ಅವರ ಸಾಮಾಜಿಕ ಕಾಳಜಿ ಸದಾ ಸ್ಮರಣೀಯ” ಎಂದರು.

ಅದಮ್ಯ ಚೇತನ ಫೌಂಡೇಶನ್ ಮೂಲಕ ಲಕ್ಷಾಂತರ ಬಡ ವಿದ್ಯಾರ್ಥಿಗಳಿಗೆ ಬಿಸಿಯೂಟ ನೀಡುತ್ತಿರುವ ತೇಜಸ್ವಿನಿ ಅನಂತ ಕುಮಾರ್ ಅವರನ್ನು ವೇದಿಕೆಯಲ್ಲಿ ಅತಿಥಿಗಳ ಸಮ್ಮುಖದಲ್ಲಿ ಗೌರವಿಸಲಾಯಿತು.

ಸನ್ಮಾನ ಸ್ವೀಕರಿಸಿ ಮಾತಾಡಿದ ಅವರು, “75 ವರ್ಷಗಳ ಹಿಂದೆ ಉದ್ಯೋಗ, ಶಿಕ್ಷಣ ಪಡೆಯಲು ನಗರಕ್ಕೆ ಬರುವ ಹೆಣ್ಣುಮಕ್ಕಳಿಗೆ ದಾರಿದೀಪವಾಗಿದ್ದ ಶ್ರೀ ರಾಮಕೃಷ್ಣ ವಿದ್ಯಾರ್ಥಿನಿ ಭವನ ಇಂದು ಸಾಕಷ್ಟು ಬೆಳೆದಿದೆ. ಇಷ್ಟು ಸುದೀರ್ಘ ವರ್ಷಗಳಲ್ಲಿ ಅದೆಷ್ಟೋ ಹೆಣ್ಣುಮಕ್ಕಳು ವಿದ್ಯಾರ್ಥಿನಿ ನಿಲಯದಲ್ಲಿ ಕಲಿತು ಸಮಾಜದಲ್ಲಿ ಸಾಧನೆ ಮಾಡಿದ್ದಾರೆ. ಬಂಟರ ಸಂಘದ ಇಂತಹ ಸಾಮಾಜಿಕ ಕಳಕಳಿ ಪ್ರಶಂಸನೀಯವಾದುದು. ಇಂತಹ ಸಾಮಾಜಿಕ ಕಳಕಳಿ ಇನ್ನು ಮುಂದೆಯೂ ನಿರಂತರವಾಗಿ ಮುಂದುವರಿಯಲಿ’ ಎಂದು ಹಾರೈಸಿದರು.

ವೇದಿಕೆಯಲ್ಲಿ ಸದಾಶಿವ ಶೆಟ್ಟಿ ಕನ್ಯಾನ, ಸುಜಾತ ಎಸ್. ಶೆಟ್ಟಿ, ಕತಾರ್ ಬಂಟ್ಸ್ ಸಂಘದ ಅಧ್ಯಕ್ಷ ಡಾ.ಪದ್ಮಶ್ರೀ ಆರ್. ಶೆಟ್ಟಿ, ಪ್ರಗತಿ ಯು. ಶೆಟ್ಟಿ, ಉಪೇಂದ್ರ ಶೆಟ್ಟಿ, ಬಂಟರ ಯಾನೆ ನಾಡವರ ಮಾತೃ ಸಂಘದ ಉಪಾಧ್ಯಕ್ಷ ಕಾವು ಹೇಮನಾಥ್ ಶೆಟ್ಟಿ, ಕಾರ್ಯದರ್ಶಿ ಗೋಪಾಲಕೃಷ್ಣ ಶೆಟ್ಟಿ, ಕೋಶಾಧಿಕಾರಿ ಕೃಷ್ಣಪ್ರಸಾದ್ ರೈ, ಜೊತೆ ಕಾರ್ಯದರ್ಶಿ ಸಂಪಿಗೇಡಿ ಸಂಜೀವ ಶೆಟ್ಟಿ, ಶ್ರೀ ರಾಮಕೃಷ್ಣ ವಿದ್ಯಾರ್ಥಿನಿ ಭವನದ ಅಧ್ಯಕ್ಷೆ ವೀಣಾ ಟಿ. ಶೆಟ್ಟಿ, ಸಂಚಾಲಕಿ ಶಾಲಿನಿ ಶೆಟ್ಟಿ ಉಪಸ್ಥಿತರಿದ್ದರು.

ಶ್ರೀ ರಾಮಕೃಷ್ಣ ವಿದ್ಯಾರ್ಥಿನಿ ಭವನಕ್ಕೆ ಸೇವೆ ಸಲ್ಲಿಸಿದ ಮಾಲತಿ ಎಸ್. ಶೆಟ್ಟಿ, ವಿಲಾಸ ಜೆ. ಶೆಟ್ಟಿ, ಚಂದ್ರಲೇಖ ಎ.ಶೆಟ್ಟಿ, ಶಾಲಿನಿ ಡಿ. ಶೆಟ್ಟಿ, ಶಬರಿ ವಿ. ಶೆಟ್ಟಿ, ಜ್ಯೋತಿ ಎ. ಆಳ್ವ ಅವರಿಗೆ ಗೌರವ ಸಮರ್ಪಿಸಲಾಯಿತು.

ವಿಧಾನ ಪರಿಷತ್ ಸದಸ್ಯ ಭಾರತಿ ಶೆಟ್ಟಿ, ಮಾಜಿ ಶಾಸಕಿ ಶಕುಂತಲಾ ಶೆಟ್ಟಿ, ಇನ್ ಡೈರೆಕ್ಟ್ ಟ್ಯಾಕ್ಸಸ್ ಕಮಿಷನರ್ ರೀನಾ ಶೆಟ್ಟಿ, ಮೆಡಲ್ ಆಫ್ ದಿ ಆರ್ಡರ್ ಆಫ್ ಆಸ್ಟ್ರೇಲಿಯಾ ಪ್ರಶಸ್ತಿ ಪುರಸ್ಕೃತೆ ಮಲ್ಲಿಕಾ ಚೌಟ, ಅಸಿಸ್ಟೆಂಟ್ ಕನ್ಸರ್ ವೇಟರ್ ಆಫ್ ಫಾರೆಸ್ಟ್ ಹಸ್ತಾ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು.
ಮಂಜುಳಾ ಶೆಟ್ಟಿ ಮತ್ತು ನಯನಾ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.

Comments are closed.