ಕರಾವಳಿ

ಕೊಡೇರಿ ಕಿರುಬಂದರಿನ ಸಮಸ್ಯೆ ನಿವಾರಣೆಗೆ ಉಪ್ಪುಂದ ರಾಣಿಬಲೆ ಮೀನುಗಾರರ ಒಕ್ಕೂಟ ಆಗ್ರಹ..!

Pinterest LinkedIn Tumblr

ಉಡುಪಿ: ಕೊಡೇರಿ ಕಿರು ಬಂದರಿನ ಮಂಜೂರಾತಿ ಆದ ಅಭಿವೃದ್ಧಿ ಕಾಮಗಾರಿಗಳನ್ನು ನಡೆಸಲು ಅಧಿಕಾರಿಗಳು ವಿಳಂಬ ಧೋರಣೆ ಹಾಗೂ ಮೀನುಗಾರರ ಬೇಡಿಕೆಯ ಬಗ್ಗೆ ನಿರ್ಲಕ್ಷ್ಯ ವಹಿಸಿರುವುದನ್ನು ಖಂಡಿಸಿ ಜ.17ರಂದು ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿತ್ತು. ಆದರೆ ಕೋವಿಡ್ ನಿಯಮಾವಳಿ ಕಾರಣದಿಂದ ಅದನ್ನು ಕೈಬಿಟ್ಟು ಬೈಂದೂರು ತಹಶೀಲ್ದಾರ್‌ ಕಚೇರಿ ಮುಂದೆ ಸಾಂಕೇತಿಕವಾಗಿ ತಹಶೀಲ್ದಾರ್‌ ಶೋಭಾಲಕ್ಷ್ಮೀ ಎಚ್.ಎಸ್ ಅವರಿಗೆ ಉಪ್ಪುಂದ ರಾಣಿಬಲೆ ಮೀನುಗಾರರ ಒಕ್ಕೂಟ ವತಿಯಿಂದ ಮನವಿ ನೀಡಲಾಯಿತು.

ಉಪ್ಪುಂದ ರಾಣಿಬಲೆ ಮೀನುಗಾರರ ಒಕ್ಕೂಟದ ಅಧ್ಯಕ್ಷ ವೆಂಕಟರಮಣ ಖಾರ್ವಿ ಮಾತನಾಡಿ, ಸರಕಾರದ ಕೋವಿಡ್ ನಿಯಮಾವಳಿಗೆ ಗೌರವ ನೀಡಿ ಮೀನುಗಾರರು ಸಾಂಕೇತಿಕವಾಗಿ ಮನವಿ ನೀಡಿದ್ದೇವೆ. ಕಾಮಗಾರಿಗಳು ಆರಂಭಿಸದೆ ಇರುವುದರಿಂದ ಮೀನುಗಾರರ ಜೀವಕ್ಕೆ ಹಾನಿ ಸಂಭವಿಸುತ್ತಿದೆ. ಇದನ್ನು ಗಂಭೀರವಾಗಿ ಪರಿಗಣಿಸದೆ ಒಂದು ವೇಳೆ ಕಾಮಗಾರಿಗಳು ತ್ವರಿತಗತಿಯಲ್ಲಿ ಪ್ರಾರಂಭವಾಗದಿದ್ದರೆ ನಮ್ಮ ಹಕ್ಕನ್ನು ಕೇಳುವ ಸಲುವಾಗಿ ಉಪ್ಪುಂದ ಗ್ರಾಮದ ಕರ್ಕಿಕಳಿ, ಮಡಿಕಲ್, ಅಮ್ಮನವರತೊಪ್ಪು ಓಲಗ ಮಂಟಪ ಹಾಗೂ ಪಡುವರಿ ಗ್ರಾಮದತಾರಾಪತಿ, ಅಳಿವೆಕೋಡಿಭಾಗದ ಸುಮಾರು 5 ಸಾವಿರಕ್ಕೂ ಹೆಚ್ಚು ಮೀನುಗಾರರು ಸೇರಿ ತಹಶೀಲ್ದಾರ್ ಕಚೇರಿಯ ಮುಂಭಾಗದಲ್ಲಿ ಧರಣಿ ಕೈಗೊಳ್ಳುವ ಬಗ್ಗೆ ಎಚ್ಚರಿಕೆ ನೀಡಿದರು.

ತಹಶೀಲ್ದಾರ್ ಮನವಿ ಸ್ವೀಕರಿಸಿ, ಮೀನುಗಾರರ ಸಮಸ್ಯೆಗಳನ್ನು ಸಂಬಂಧಪಟ್ಟ ಇಲಾಖೆ ಹಾಗೂ ಜನಪ್ರತಿನಿಧಿಗಳ ಗಮನಕ್ಕೆ ತರಲಾಗುವುದು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಉಪ್ಪುಂದ ರಾಣಿಬಲೆ ಮೀನುಗಾರರ ಒಕ್ಕೂಟದ ಕಾರ್ಯದರ್ಶಿ ಡಿ. ಸುರೇಶ್ ಖಾರ್ವಿ, ಒಕ್ಕೂಟದ ಪದಾಧಿಕಾರಿಗಳು ಹಾಗೂ ರಾಣಿಬಲೆಯ ಸದಸ್ಯರು ಉಪಸ್ಥಿತರಿದ್ದರು.

Comments are closed.