ಕರಾವಳಿ

ಸ್ತ್ರೀ ಶಕ್ತಿ ಯೋಜನೆಯಿಂದ ಮಹಿಳೆಯರು ಸಂಘಟಿತರಾಗುತ್ತಿದ್ದಾರೆ- ನ್ಯಾಯಾಧೀಶೆ ಕಾವೇರಿ

Pinterest LinkedIn Tumblr

ಉಡುಪಿ: ಕೌಶಲ್ಯ ಅಭಿವೃದ್ಧಿಯ ಮೂಲಕ ತರಬೇತಿಯನ್ನು ನೀಡಿ ಮಹಿಳೆಯರು ಉನ್ನತ ಸ್ಥಾನಕ್ಕೆ ಬಂದು, ಮಹಿಳೆಯರನ್ನು ಸಂಘಟಿಸಿಕೊಳ್ಳುವಲ್ಲಿ ಸ್ತ್ರೀ ಯೋಜನೆ ಸಹಕಾರಿಯಾಗಿದೆ ಎಂದು ಹಿರಿಯ ನ್ಯಾಯಾಧೀಶೆ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಕಾವೇರಿ ಹೇಳಿದರು.

ಅವರು ಇಂದು ಶಿಶು ಅಭಿವೃದ್ಧಿ ಯೋಜನೆ ಉಡುಪಿ ಕಚೇರಿ ಸಭಾಂಗಣದಲ್ಲಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಶು ಅಭಿವೃದ್ಧಿ ಯೋಜನೆ ಉಡುಪಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಉಡುಪಿ, ತಾಲೂಕು ಸ್ತ್ರೀ ಶಕ್ತಿ ಒಕ್ಕೂಟ ಉಡುಪಿ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಪರಿಶಿಷ್ಟ ಪಂಗಡಗಳ ಸ್ತ್ರೀ ಶಕ್ತಿ ಗುಂಪುಗಳ ಸದಸ್ಯರಿಗೆ ಕೌಶಲ್ಯಾಭಿವೃದ್ಧಿ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.

ಮಹಿಳೆಯರು ಕೌಶಲ್ಯ ತರಬೇತಿ ಪಡೆದು ಡಿಜಿಟಲ್ ಮಾರ್ಕೆಟಿಂಗ್ ಮೂಲಕ ಆನ್‌ಲೈನ್ ಖರೀದಿ ಮಾಡುವುದನ್ನು ತಿಳಿಯಬೇಕು. ಜಾಲತಾಣದಲ್ಲಿರುವ ಡಿಜಿಟಲ್ ಮಾರುಕಟ್ಟೆ ವ್ಯಾಪಕವಾಗಿ ಹರಡುತ್ತಿದ್ದು, ಮೊಬೈಲ್ ಮೂಲಕ ಮನೆಯಲ್ಲಿಯೇ ಕುಳಿತು ಕೆಲಸ ಮಾಡಿ ಆದಾಯ ಗಳಿಸಬಹುದಾಗಿದ್ದು, ಆನ್‌ಲೈನ್ ಮೂಲಕ ವ್ಯವಹಾರ ಮಾಡುವಾಗ ಜಾಗರೂಕತೆಯಿಂದ ಮಾಡಬೇಕು. ಉತ್ತಮ ಗುಣಮಟ್ಟದ ಉತ್ಪನ್ನಗಳನ್ನು ತಯಾರಿಸಿ, ವ್ಯವಹಾರ ಮಾಡಬೇಕು ಎಂದರು.
ನಗರ ಸಭೆ ಅಧ್ಯಕ್ಷೆ ಸುಮಿತ್ರಾ ನಾಯಕ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಹೆಣ್ಣು ಮನಸ್ಸು ಮಾಡಿದರೆ ಪ್ರಪಂಚದಲ್ಲಿ ಏನನ್ನು ಬೇಕಾದರೂ ಸಾಧಿಸಬಹುದು. ಮಹಿಳೆಯರು ನಿಂತ ನೀರಾಗದೇ ಕೌಶಲ್ಯ ತರಬೇತಿಯಿಂದ ಹೊಸ ಹೊಸ ವಿಷಯಗಳನ್ನು ಕಲಿತು ಜೀವನದಲ್ಲಿ ತೊಡಗಿಸಿಕೊಂಡು ವಿಶೇಷ ಸಾಧನೆ ಮಾಡಬೇಕು ಎಂದರು. ಪರಿಶಿಷ್ಟ ಜಾತಿ-ಪಂಗಡದ ಮಹಿಳೆಯರು ಹಿಂಜರಿಕೆಯನ್ನು ಬಿಟ್ಟು ಜೀವನದಲ್ಲಿ ಮುಂದೆ ಬಂದು ಉಜ್ವಲ ಭವಿಷ್ಯ ರೂಪಿಸಿಕೊಳ್ಳಬೇಕು ಎಂದರು.

ಉಡುಪಿಯ ಶಿಶು ಅಭಿವೃದ್ಧಿ ಯೋಜನಾಧಿಕಾರಿ ವೀಣಾ ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದರು.

ಕಾರ್ಯಾಗಾರದಲ್ಲಿ ತಾಲೂಕು ಸ್ತ್ರೀ ಶಕ್ತಿ ಒಕ್ಕೂಟದ ಅಧ್ಯಕ್ಷೆ ಜಯಂತಿ ಹಾಗೂ ಸಂಪನ್ಮೂಲ ವ್ಯಕ್ತಿಗಳು, ಶಿಬಿರಾರ್ಥಿಗಳು ಮತ್ತಿತರರು ಉಪಸ್ಥಿತರಿದ್ದರು. ಶಿಶು ಅಭಿವೃದ್ಧಿ ಯೋಜನೆ ಮೇಲ್ವಿಚಾರಕಿ ಪೂರ್ಣಿಮಾ ನಿರೂಪಿಸಿ, ಮೇಲ್ವಿಚಾರಕಿ ಶೈಲಾ ವಂದಿಸಿದರು.

Comments are closed.