ರಾಷ್ಟ್ರೀಯ

2035ರ ವೇಳೆಗೆ ದೇಶದ ಕಡಲು ವಲಯದ ವಿವಿಧ ಯೋಜನೆಗಳಲ್ಲಿ 82 ಬಿಲಿಯನ್ ಡಾಲರ್ ಹೂಡಿಕೆ: ಪ್ರಧಾನಿ ಮೋದಿ

Pinterest LinkedIn Tumblr

ನವದೆಹಲಿ: 2035 ರ ವೇಳೆಗೆ ದೇಶದ ಕಡಲು ವಲಯದ (ಬಂದರು ಯೋಜನೆ) ಅಭಿವೃದ್ಧಿಗಾಗಿ ವಿವಿಧ ಯೋಜನೆಗಳಲ್ಲಿ 82 ಬಿಲಿಯನ್ ಡಾಲರ್ ಹೂಡಿಕೆ ಮಾಡಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ಕಡಲ ಹಡಗು ಕ್ಷೇತ್ರದಲ್ಲಿ ಆಯೋಜಿಸಲಾದ ಶೃಂಗಸಭೆಯನ್ನು ಉದ್ಘಾಟಿಸಿ ಮಾತನಾಡಿದ ಪ್ರಧಾನಿ ಮೋದಿ ಅವರು, ಭಾರತೀಯ ಬಂದರುಗಳು, ಹಡಗುಕಟ್ಟೆಗಳು ಮತ್ತು ಜಲಮಾರ್ಗಗಳಲ್ಲಿ ಹೂಡಿಕೆ ಮಾಡಲು ಜಾಗತಿಕ ಹೂಡಿಕೆದಾರರನ್ನು ಆಹ್ವಾನಿಸಿದರು. ‘ಭಾರತದ ಸುದೀರ್ಘ ಕರಾವಳಿಯು ನಿಮಗಾಗಿ ಕಾಯುತ್ತಿದೆ. ಭಾರತದ ಕಷ್ಟಪಟ್ಟು ದುಡಿಯುವ ಜನರು ನಿಮಗಾಗಿ ಕಾಯುತ್ತಿದ್ದಾರೆ. ನಮ್ಮ ಬಂದರುಗಳಲ್ಲಿ ಹೂಡಿಕೆ ಮಾಡಿ. ನಮ್ಮ ಜನರಲ್ಲಿ ಹೂಡಿಕೆ ಮಾಡಿ. ಭಾರತವು ನಿಮ್ಮ ಆದ್ಯತೆಯ ವ್ಯಾಪಾರ ತಾಣವಾಗಲಿ. ಭಾರತೀಯ ಬಂದರುಗಳು ವ್ಯಾಪಾರ ಮತ್ತು ವಾಣಿಜ್ಯಕ್ಕಾಗಿ ನಿಮ್ಮ ಕರೆ ಬಂದರು ಆಗಿರಲಿ ಎಂದು ಹೇಳಿದರು.

ಅಂತೆಯೇ ‘ಬಂದರುಗಳ ಅಭಿವೃದ್ಧಿಯ ಜೊತೆಗೆ, ಜಲಮಾರ್ಗಗಳನ್ನು ಅಭಿವೃದ್ಧಿಪಡಿಸಲು ಮತ್ತು ದೀಪಸ್ತಂಭ (ಲೈಟ್ ಹೌಸ್)ದ ಸುತ್ತ ಪ್ರವಾಸೋದ್ಯಮವನ್ನು ಉತ್ತೇಜಿಸಲು ಕ್ರಮ ಕೈಗೊಳ್ಳಲಾಗುವುದು. ಸಾಗರಮಾಲಾ ಯೋಜನೆಯಡಿ 574 ಕ್ಕೂ ಹೆಚ್ಚು ಯೋಜನೆಗಳನ್ನು ಗುರುತಿಸಲಾಗಿದೆ. ಇವುಗಳಿಗೆ 82 ಬಿಲಿಯನ್ ಡಾಲರ್ ಅಥವಾ ಆರು ಲಕ್ಷ ಕೋಟಿ ರೂಪಾಯಿ ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ. ಈ ಯೋಜನೆಗಳ ಕಾಮಗಾರಿ 2015 ಮತ್ತು 2035 ರ ನಡುವೆ ಪೂರ್ಣಗೊಳ್ಳಬೇಕಿದೆ. ಮುಂದಿನ ಹತ್ತು ವರ್ಷಗಳಲ್ಲಿ ದೇಶದಲ್ಲಿ 23 ಜಲಮಾರ್ಗಗಳನ್ನು ಕಾರ್ಯರೂಪಕ್ಕೆ ತರಲು ಸರ್ಕಾರ ಕೆಲಸ ಮಾಡುತ್ತಿದೆ ಎಂದು ಮೋದಿ ಹೇಳಿದರು.

ಭಾರತದ ಕರಾವಳಿ ಗಡಿಯಲ್ಲಿ 189 ಲೈಟ್‌ ಹೌಸ್‌ಗಳಿವೆ, ಅದರಲ್ಲಿ 78 ಲೈಟ್‌ ಹೌಸ್‌ಗಳ ಸುತ್ತ ಪ್ರವಾಸೋದ್ಯಮವನ್ನು ಅಭಿವೃದ್ಧಿಪಡಿಸುವ ಯೋಜನೆಯಲ್ಲಿ ಸರ್ಕಾರ ಕಾರ್ಯನಿರ್ವಹಿಸುತ್ತಿದೆ. ಬಂದರು ಕ್ಷೇತ್ರದಲ್ಲಿ ಶುದ್ಧ ನವೀಕರಿಸಬಹುದಾದ ಇಂಧನ ಬಳಕೆಯನ್ನು ಸರ್ಕಾರ ಉತ್ತೇಜಿಸುತ್ತಿದೆ. ನಾವು ದೇಶದಾದ್ಯಂತದ ಎಲ್ಲಾ ಪ್ರಮುಖ ಬಂದರುಗಳಲ್ಲಿ ಸೌರ ಮತ್ತು ಪವನ ವಿದ್ಯುತ್ ಆಧಾರಿತ ವಿದ್ಯುತ್ ವ್ಯವಸ್ಥೆಯನ್ನು ಸ್ಥಾಪಿಸುವ ಪ್ರಕ್ರಿಯೆಯಲ್ಲಿದ್ದೇವೆ. 2030 ರ ವೇಳೆಗೆ ನವೀಕರಿಸಬಹುದಾದ ಶಕ್ತಿಯಿಂದ ಎಲ್ಲಾ ಬಂದರುಗಳಲ್ಲಿ ಬಳಸಲಾಗುವ ಒಟ್ಟು ವಿದ್ಯುಚ್ಛಕ್ತಿಯ ಶೇ.60 ರಷ್ಟಿಗಿಂತ ಹೆಚ್ಚಿನದನ್ನು ಬಳಸುವ ಉದ್ದೇಶದಿಂದ ನಾವು ಮುಂದುವರಿಯುತ್ತಿದ್ದೇವೆ ಎಂದು ಹೇಳಿದರು.

ಅಂತೆಯೇ ಭಾರತೀಯ ಬಂದರುಗಳಿಗೆ ಮತ್ತು ಅಲ್ಲಿಂದ ಸರಕುಗಳನ್ನು ಸಾಗಿಸುವ ಹಡಗುಗಳು ಇನ್ನು ಮುಂದೆ ಕಾಯಬೇಕಾಗಿಲ್ಲ. ಕಡಲ ಸಾಗಣೆ ಕ್ಷೇತ್ರದ ಅಭಿವೃದ್ಧಿಯ ಬಗ್ಗೆ ಭಾರತವು ತುಂಬಾ ಗಂಭೀರವಾಗಿದೆ, ಇದರೊಂದಿಗೆ ಭಾರತವು ಈಗ ವಿಶ್ವದ ಕಡಲ ಆರ್ಥಿಕ ಕ್ಷೇತ್ರದಲ್ಲಿ ಪ್ರಮುಖ ಶಕ್ತಿಯಾಗಿ ಹೊರಹೊಮ್ಮುತ್ತಿದೆ ಎಂದು ಅವರು ಹೇಳಿದರು.

ಅಲ್ಲದೆ ದೇಶೀಯ ಹಡಗು ನಿರ್ಮಾಣ ಮತ್ತು ಹಡಗು ದುರಸ್ತಿ ಮಾರುಕಟ್ಟೆಯ ಬಗ್ಗೆಯೂ ಭಾರತ ಸರ್ಕಾರ ಗಮನ ಹರಿಸುತ್ತಿದೆ. ಕೇಂದ್ರ ಸರ್ಕಾರ ದೇಶೀಯ ಹಡಗು ನಿರ್ಮಾಣವನ್ನು ಉತ್ತೇಜಿಸಲು ಸಾಕಷ್ಟು ಯೋಜನೆಗಳನ್ನು ಕೈಗೊಂಡಿದೆ. ಭಾರತೀಯ ಶಿಪ್‌ಯಾರ್ಡ್‌ಗಳಿಗೆ ಹಡಗು ನಿರ್ಮಾಣ ಹಣಕಾಸು ನೆರವು ನೀತಿಯನ್ನು ಅನುಮೋದಿಸಲಾಗಿದೆ.

Comments are closed.