ಕರಾವಳಿ

ಕೇಂದ್ರ, ರಾಜ್ಯ ಸರ್ಕಾರಗಳ‌ ವಿರುದ್ದ ಜನಧ್ವನಿ‌ ಪಾದಯಾತ್ರೆ, ಬೈಂದೂರಿನಲ್ಲಿ ಫೆ.27 ಸಮಾರೋಪ: ಕೆ. ಗೋಪಾಲ ಪೂಜಾರಿ

Pinterest LinkedIn Tumblr

ಕುಂದಾಪುರ: ಕೇಂದ್ರ ಹಾಗೂ ರಾಜ್ಯ ಸರ್ಕಾರದ ಜನವಿರೋಧಿ ನೀತಿ, ಕೃಷಿ ಮುಸೂದೆ ತಿದ್ದುಪಡಿ, ಬೆಲೆ ಏರಿಕೆಯ ವಿರುದ್ದ ಕಾಂಗ್ರೆಸ್ ನೇತೃತ್ವದಲ್ಲಿ ಆರಂಭಗೊಂಡ ಜನಧ್ವನಿ ಪಾದಯಾತ್ರೆ ಫೆಬ್ರವರಿ 27 ರಂದು ಬೈಂದೂರಿನಲ್ಲಿ ಸಮಾಪ್ತಿಗೊಳ್ಳಿಲಿದೆ ಎಂದು ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ ಹೇಳಿದರು.

ಬುಧವಾರ ಮಧ್ಯಾಹ್ನ ಗೋಪಾಲ ಪೂಜಾರಿಯವರ ಕಟ್ ಬೇಲ್ತೂರು ನಿವಾಸದಲ್ಲಿ ಕರೆಯಲಾದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾಹಿತಿ ನೀಡಿದರು.

ನಿರಂತರವಾಗಿ ದಿನಬಳಕೆ ವಸ್ತುಗಳ ಬೆಲೆ ಏರಿಕೆ ಹಾಗೂ ಕರಾವಳಿ ತೀರದ ಜ್ವಲಂತ ಸಮಸ್ಯೆಗಳ ವಿರುದ್ದ ಜನಧ್ವನಿ ಪಾದಯಾತ್ರೆ ನಡೆಯಲಿದೆ. ಫೆ.26ರ ಬೆಳಗ್ಗೆ ತಲ್ಲೂರಿಗೆ ಆಗಮಿಸಲಿರುವ ಪಾದಯಾತ್ರೆಯನ್ನು ಬೈಂದೂರು ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಸಾರ್ವಜನಿಕರು ಒಗ್ಗೂಡಿ ಸ್ವಾಗತಿಸಲಿದ್ದಾರೆ. ಅಲ್ಲಿಂದ ಸಂಜೆ ನಾವುಂದದಲ್ಲಿ ವಾಸ್ತವ್ಯ ಹೂಡಿ, ಫೆ.27ರ ಬೆಳಗ್ಗೆ 9 ಗಂಟೆಗೆ ನಾವುಂದಿಂದ ಪಾದಯಾತ್ರೆ ಹೊರಡಲಿದ್ದು, ಮಧ್ಯಹ್ನ 2ಕ್ಕೆ ಬೈಂದೂರು ಸೇರಲಿದೆ. ಬಳಿಕ ಅಲ್ಲಿ ಸಮಾರೋಪ‌ ಸಮಾರಂಭ ಜರುಗಲಿದ್ದು ಕೆಪಿಸಿಸಿಯ ರಾಜ್ಯಾಧ್ಯಕ್ಷರಾದ ಡಿಕೆ ಶಿವಕುಮಾರ್ ಅವರು ಭಾಗವಹಿಸಿ ಮಾತನಾಡಲಿದ್ದಾರೆ ಎಂದರು.

ಇಂಧನ ಬೆಲೆ ಹಾಗೂ ನಿತ್ಯಬಳಿಕೆ ವಸ್ತುಗಳು ಬೆಲೆ ಏರಿಕೆ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವೈಫಲ್ಯಗಳ ಜನರಿಗೆ ತಲುಪಿಸಿ, ಜನಜಾಗೃತಿ ಮೂಡಿಸುವುದು ಪಾದಯಾತ್ರೆ ಉದ್ದೇಶವಾಗಿದ್ದು, ಪಾದಯಾತ್ರೆಯಲ್ಲಿ ರಾಜ್ಯ ಹಾಗೂ ಜಿಲ್ಲಾ ಮುಖಂಡರು ಪಾಲ್ಗೊಳ್ಳಲಿದ್ದಾರೆ ಎಂದರು.

ಪರೇಶ ಮೇಸ್ತ ಸಾವು ಮುಂದಿಟ್ಟುಕೊಂಡು ಚುನಾವಣೆ ಗೆಲುವು….
ಪಾದಯಾತ್ರೆಯಲ್ಲಿ ಕರಾವಳಿ ಸಮಸ್ಯೆಗಳ ಮೇಲೂ ಬೆಳಕು ಚೆಲ್ಲಲಾಗುತ್ತದೆ. ಕಳೆದ ಮೂರು ತಿಂಗಳಿಂದ ಮೀನುಗಾರರಿಗೆ ಸೀಮೆ ಎಣ್ಣೆ ಸಿಕ್ಕಿಲ್ಲ, ಆಶ್ರಯ ಮನೆಗಳಿಗೆ ಹಣ ಬಿಡುಗಡೆ ಆಗಿಲ್ಲ. ಪರೇಶ್ ಮೇಸ್ತ ಸಾವು ಮುಂದಿಟ್ಟುಕೊಂಡು ಚುನಾವಣೆ ಎದುರಿಸಿ ಗೆದ್ದ ನಂತರವೂ ಸಿಬಿಐ ತನಿಖೆ ಆರಂಭವಾಗಿಲ್ಲ. ರಾಜ್ಯ ಬಿಜೆಪಿ ಸರ್ಕಾರಕ್ಕೆ ಆಡಳಿತವೇ ಗೊತ್ತಿಲ್ಲ ಎಂದು ಕೆ. ಗೋಪಾಲ ಪೂಜಾರಿ ಆರೋಪಿಸಿದರು.

ಬಿಜೆಪಿ ಆಡಳಿತ ವೈಫಲ್ಯಕ್ಕೆ ಸಾಕ್ಷಿ…
ಬಿಜೆಪಿ ಆಡಳಿತ ವೈಫಲ್ಯಕ್ಕೆ ಕೊಲ್ಲೂರು ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರ ಆಯ್ಕೆಯಾಗದಿರುವುದು ನಮ್ಮ ಕಣ್ಣ ಮುಂದಿರುವ ಸ್ಪಷ್ಟ ಸಾಕ್ಷಿಯಾಗಿದ್ದು, ದೇವಸ್ಥಾನದ ಆಡಳಿತ ಮಂಡಳಿ ಮುಖ್ಯಸ್ಥರ ನೇಮಕ ಮಾಡಲಾಗದವರು ಜನರಿಗೆ ಇನ್ನೆಷ್ಟು ಒಳ್ಳೆಯ ಆಡಳಿತ ನೀಡಲು ಸಾಧ್ಯ ಎಂದು ಪ್ರಶ್ನಿಸಿದರು.

ಬೈಂದೂರು ಕಾಂಗ್ರೆಸ್ ಅಧ್ಯಕ್ಷ ಮದನ್ ಕುಮಾರ್, ವಂಡ್ಸೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರದೀಪ್ ಕುಮಾರ್ ಶೆಟ್ಟಿ ಗುಡಿಬೆಟ್ಟು ಇದ್ದರು.

Comments are closed.