ಕರಾವಳಿ

‘ಅಬ್ದುಲ್ ಕಲಾಂ ಸೋಶಿಯಲ್ ಡೆವಲಪ್ಮೆಂಟ್ ಫೌಂಡೇಶನ್”ನಿಂದ ಸಾಮಾಜಿಕ ಕಾರ್ಯಕರ್ತ ರಫೀಕ್ ಮಾಸ್ಟರ್’ಗೆ ಸನ್ಮಾನ

Pinterest LinkedIn Tumblr

ಮಂಗಳೂರು: ಭಾರತರತ್ನ ಡಾ. APJ ಅಬ್ದುಲ್ ಕಲಾಂ ಸೋಶಿಯಲ್ ಡೆವಲಪ್ಮೆಂಟ್ ಫೌಂಡೇಶನ್ ವತಿಯಿಂದ ಶೈಕ್ಷಣಿಕ ಹಾಗು ಸಾಮಾಜಿಕ ಕ್ಷೇತ್ರಗಳಲ್ಲಿ ಸೇವೆಸಲ್ಲಿಸುತ್ತಿರುವ ಸಾಮಾಜಿಕ ಕಾರ್ಯಕರ್ತ ರಫೀಕ್ ಮಾಸ್ಟರ್ ಅವರಿಗೆ ಇತ್ತೀಚೆಗೆ ಸನ್ಮಾನ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಗಣ್ಯ ಅತಿಥಿಗಳು ರಫೀಕ್ ಮಾಸ್ಟರ್ ಅವರಿಗೆ ಶಾಲು ಹೊದಿಸಿ, ಹಾರ ಹಾಕಿ, ಸ್ಮರಣಿಕೆ, ಫಲಪುಷ್ಪ, ಪೇಟ ತೊಡಿಸಿ ಸನ್ಮಾನಿಸಿದರು.

ಮಂಗಳೂರಿನ ಬದ್ರಿಯಾ ಕಾಲೇಜಿನ ಪ್ರಾಂಶುಪಾಲರಾದ ರಹ್ಮಾತಾಲಿ, ಕಣ್ಣೂರು ಎಜುಕೇಷನಲ್ ಟ್ರಸ್ಟಿನ, ಸುನ್ನಿ ಸಂದೇಶ ಪತ್ರಿಕೆಯ ಸಂಪಾದಕ ಸಿತಾರ್ ಮಜೀದ್ ಹಾಜಿ, ಭಾರತರತ್ನ ಡಾ. APJ ಅಬ್ದುಲ್ ಕಲಾಂ ಸೋಶಿಯಲ್ ಡೆವಲಪ್ಮೆಂಟ್ ಫೌಂಡೇಶನ್ ಅಧ್ಯಕ್ಷ, ತಲಪಾಡಿಯ ಫಲಾಹ್ ಪಿಯು ಕಾಲೇಜಿನ ಪ್ರಾಂಶುಪಾಲರಾದ ಅಬ್ದುಲ್ ಖಾದರ್, ಫೌಂಡೇಶನ್’ನ ಉಪಾಧ್ಯಕ್ಷ, ಬೆಳ್ತಂಗಡಿಯ ಮಂಶರ್ ಪ್ಯಾರಾಮೆಡಿಕಲ್ ಕಾಲೇಜಿನ ಉಪನ್ಯಾಸಕ ಅಬೂಬಕ್ಕರ್, ಪತ್ರಕರ್ತ ಇಕ್ಬಾಲ್ ಉಚ್ಚಿಲ ಈ ಸಂದರ್ಭದಲ್ಲಿ ಹಾಜರಿದ್ದರು.

ಈ ವೇಳೆ ಮಾತನಾಡಿದ ಪ್ರಾಂಶುಪಾಲರಾದ ರಹ್ಮಾತಾಲಿ, ಸಾಮಾಜಿಕ ಹಾಗು ಶೈಕ್ಷಣಿಕ ಕ್ಷೇತ್ರದಲ್ಲಿ ರಫೀಕ್ ಮಾಸ್ಟರ್ ನೀಡುತ್ತಿರುವ ಸೇವೆ ನಮಗೆಲ್ಲ ಮಾದರಿ. ಸಮಾಜದಲ್ಲಿ ಇಂಥ ವ್ಯಕ್ತಿಗಳು ಹಾಕಿಕೊಟ್ಟ ಹಾದಿಯಲ್ಲಿ ನಾವೆಲ್ಲಾ ಸಾಗಬೇಕಿರುವುದು ನಮ್ಮ ಜವಾಬ್ದಾರಿ ಹಾಗು ಕರ್ತವ್ಯ ಕೂಡ ಎಂದರು.

ಸಿತಾರ್ ಮಜೀದ್ ಹಾಜಿ ಮಾತನಾಡಿ, ವೃತ್ತಿನಿರತ ಬದುಕಿಗೆ ತಿಲಾಂಜಲಿಯಿಟ್ಟು ಜನಸೇವೆಗೆ ಬಂದು ಸರಕಾರಿ ಸೇವೆಗೆ ರಾಜೀನಾಮೆ ಕೊಟ್ಟು ಸ್ವೇಚ್ಛೆ ಇಂದಲೇ ಬಡತನವನ್ನು ಸ್ವೀಕರಿಸುವ ಮೂಲಕ ಸಮಾಜದ ಶಕ್ತಿಯನ್ನು ಒಗ್ಗೂಡಿಸುವ ಸಾಮಾಜಿಕ ಚಿಂತನೆಯ ವೇದಿಕೆಯನ್ನು ರಫೀಕ್ ಮಾಸ್ಟರ್ ಹಾಕಿಕೊಟ್ಟಿದ್ದಾರೆ ಎಂದರು.

ಮುಸ್ಲಿಂ ಸಾಮುದಾಯಕ ಬದುಕಿನ ನಾಡಿಮಿಡಿತವನ್ನು ಅರಿತು ಸಮುದಾಯದ ಗುಣಾತ್ಮಕ ಬದುಕಿಗೆ ಸಂಚಲನ ಮೂಡಿಸುವ ಕೆಲಸ ಆರಂಭಿಸಿದ್ದಾರೆ ರಫೀಕ್ ಮಾಸ್ಟರ್. ಅಬ್ಬರದ ಪ್ರಚಾರಕ್ಕೆ ಸೀಮಿತವಾದ ಸಮಾಜಸೇವೆಯ ಸೋಗಲಾಡಿತನ ಸತ್ಯಾಸತ್ಯತೆಯನ್ನು ಅನಾವರಣಗೊಳಿಸಿದ್ದು, ಇವರು ಸಮಾಜಕ್ಕೆ ಸಲ್ಲಿಸುತ್ತಿರುವ ಸೇವೆ ಅನನ್ಯ. ಶೈಕ್ಷಣಿಕ ಹಾಗು ಸಾಮಾಜಿಕ ಕ್ಷೇತ್ರಗಳಲ್ಲಿ ತನ್ನನ್ನು ತೊಡಗಿಸಿಕೊಂಡಿರುವ ರಫೀಕ್ ಮಾಸ್ಟರ್, ಎಂದಿಗೆ ಅದರಿಂದ ಫಲಾಪೇಕ್ಷೆ ನಿರೀಕ್ಷಿಸಿಲ್ಲ. ಇತರರಿಗೆ ಮಾದರಿಯಾಗಿರುವ ಅವರ ಸೇವೆ ಕೇವಲ ಮುಸ್ಲಿಂ ಸಮುದಾಯಕ್ಕೆ ಮಾತ್ರವಲ್ಲ ಸಮಾಜದಲ್ಲಿರುವ ಕಟ್ಟಕಡೆಯ ವ್ಯಕ್ತಿಗೂ ಸಿಗಬೇಕೆಂಬುದನ್ನು ಅವರು ತೋರಿಸಿಕೊಟ್ಟಿದ್ದಾರೆ ಎಂದು ಫೌಂಡೇಶನ್ ಅಧ್ಯಕ್ಷ ಅಬ್ದುಲ್ ಖಾದರ್ ಹೇಳಿದರು.

Comments are closed.