
ಬೆಂಗಳೂರು, ಫೆಬ್ರವರಿ 24: ಪೊಲೀಸರ ಸಕಾಲಿಕ ಕ್ರಮದಿಂದ ರಾಜಧಾನಿ ಬೆಂಗಳೂರಿನಲ್ಲಿ ನಡೆಯಬೇಕಿದ್ದ ರೌಡಿಗಳ ಗುಂಪಿನ ನಡುವಿನ ಬೃಹತ್ ಕಾಳಗವೊಂದು ತಪ್ಪಿದೆ. ಭಾರೀ ಕಾಳಗಕ್ಕೆ ಸ್ಕಚ್ ಹಾಕಿದ್ದ ರೌಡಿಗಳು ಈಗ ಕಂಬಿ ಎಣಿಸುತ್ತಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರು ಮಾರಕಾಸ್ತ್ರಗಳ ಸಮೇತ ಹನ್ನೊಂದು ರೌಡಿಗಳನ್ನು ಬಂಧಿಸಿದ್ದಾರೆ. ಇದೇ ವೇಳೆ ಬೆಂಗಳೂರಿನ ಲೋಕಲ್ ರೌಡಿಗಳಿಬ್ಬರ ನಡುವಿನ ವಾರ್ ಗೆ ಮಂಗಳೂರಿನಿಂದ ಇಬ್ಬರು ರೌಡಿಗಳನ್ನು ಕರೆಸಿರುವ ಸಂಗತಿ ಹೊರ ಬಿದ್ದಿದೆ.
ಡಿ.ಜೆ ಹಳ್ಳಿ, ರಾಮಮೂರ್ತಿ ನಗರ ಮತ್ತು ಮಾರತ್ ಹಳ್ಳಿಯಲ್ಲಿ ಕಾರ್ಯಾಚರಣೆ ನಡೆಸಲಾಗಿದೆ. ರೌಡಿಗಳ ತಂಡವೊಂದು ಎದುರಾಳಿಯನ್ನು ಮುಗಿಸಲು ಮಂಗಳೂರಿನ ಇಬ್ಬರು ಕುಖ್ಯಾತ ರೌಡಿಗಳ ಸಹಾಯ ಪಡೆದಿತ್ತು ಎಂಬ ಅಂಶ ಬೆಳಕಿಗೆ ಬಂದಿದೆ.
ಮಾರಕಾಸ್ತ್ರಗಳನ್ನು ಹಿಡಿದು ಕಳೆದ ಇಪ್ಪತ್ತು ದಿನಗಳಿಂದ ಹೊಂಚು ಹಾಕಿದ್ದ ಹನ್ನೊಂದು ಪಾತಕಿಗಳು ಮಾರತಹಳ್ಳಿ ಸಮೀಪ ಸಾರ್ವಜನಿಕರಿಗೆ ಹೆದರಿಸಿ ಸುಲಿಗೆಗೆ ಮುಂದಾಗಿದ್ದರು.
ಖಚಿತ ಮಾಹಿತಿ ಮೇರೆಗೆ ಸಿಸಿಬಿ ಸಂಘಟಿತ ಅಪರಾಧ ದಳದ ಪೊಲೀಸರು ಕಾರ್ಯಾಚರಣೆ ನಡೆಸಿ ಮಂಗಳೂರು ಮೂಲದ ಕಿರಣ್ ಗೌಡ, ಉಲ್ಲಾಳ ರೌಡಿ ಶೀಟರ್ ವಿಶ್ವನಾಥ್ ಭಂಡಾರಿ, ಆನೇಕಲ್ ರೌಡಿ ಹರೀಶ್, ಸರ್ಜಾಪುರ ರೌಡಿ ವೆಂಕಟೇಶ್ ಸೇರಿದಂತೆ ಹನ್ನೊಂದು ಮಂದಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕಾಡುಬಿಸನಹಳ್ಳಿಯ ಸೋಮ ಮತ್ತು ರೋಹಿತ್ ಗ್ಯಾಂಗ್ ನಡುವೆ ಹಳೇ ವೈಷಮ್ಯ ಇತ್ತು. ಸೋಮ ಮತ್ತು ಸೋಮನ ಸಹಚರರನ್ನು ಮುಗಿಸಲು ಸಂಚು ರೂಪಿಸಿರುವ ರೋಹಿತ್, ಗ್ಯಾಂಗ್ ವಾರ್ ಮಾಸ್ಟರ್ ಪ್ಲಾನ್ ರೂಪಿಸಿದ್ದ. ಸೋಮ ಮತ್ತು ಆತನ ಸಹಚರರನ್ನು ಮುಗಿಸಲು ಮಂಗಳೂರು ಮೂಲದ ಕಿರಣ್ ಗೌಡ ಮತ್ತು ವಿಶ್ವನಾಥ್ ಭಂಡಾರಿಯನ್ನು ಕರೆಸಿದ್ದ. ಮಾರತಹಳ್ಳಿ ಸಮೀಪ ಮನೆ ಮಾಡಿಕೊಟ್ಟಿದ್ದ.
ಮಚ್ಚು, ಲಾಂಗು ಹಿಡಿದು ಕಾಡುಬಿಸನಹಳ್ಳಿಯ ಸೋಮನಗಾಗಿ ಕಾಯುತ್ತಿದ್ದರು. ಇನ್ನು ಮಂಗಳೂರು ರೌಡಿಗಳ ಜತೆಗೆ ಸ್ಥಳೀಯರ ರೌಡಿ ಶೀಟರ್ ಗಳನ್ನು ಒಟ್ಟು ಗೂಡಿಸಿದ್ದ ರೋಹಿತ್ ಕರಿಯಮ್ಮನ ಅಗ್ರಹಾರದಲ್ಲಿ ಮನೆ ಮಾಡಿಕೊಟ್ಟಿದ್ದ. ಹತ್ಯೆಗೆ ಸಂಚು ರೂಪಿಸಿ ಗ್ಯಾಂಗ್ ವಾರ್ ತಯಾರಿಯಲ್ಲಿದ್ದ ಹನ್ನೊಂದು ಮಂದಿ ಜೈಲು ಸೇರಿದ್ದಾರೆ.
ಬಂಧಿತರಿಂದ ಹದಿನೆಂಟು ಮಚ್ಚು, ಲಾಂಗು ಹಾಗೂ ಕಾರು ವಶಪಡಿಸಿಕೊಳ್ಳಲಾಗಿದೆ ಎಂದು ಸಿಸಿಬಿ ಮುಖ್ಯಸ್ಥ ಸಂದೀಪ್ ಪಾಟೀಲ್ ತಿಳಿಸಿದ್ದಾರೆ ಎಂದು ವರದಿಯಾಗಿದೆ.
Comments are closed.