ಕರಾವಳಿ

ಕೋಟೇಶ್ವರದ ಅಂಗಡಿಯಲ್ಲಿದ್ದ ಇಬ್ಬರು ಮಕ್ಕಳನ್ನು ರಕ್ಷಿಸಿದ ಜಿಲ್ಲಾ ಮಕ್ಕಳ ರಕ್ಷಣಾ ಘಟಕ

Pinterest LinkedIn Tumblr

ಉಡುಪಿ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮತ್ತು ಪೊಲೀಸ್ ಇಲಾಖೆ ಜಂಟಿ ಕಾರ್ಯಾಚರಣೆ ನಡೆಸಿ ಕೋಟೇಶ್ವರದ ಕೋಡಿ ಬೀಚ್ ರಸ್ತೆಯ ಕಾಂಪ್ಲೆಕ್ಸ್ ನಲ್ಲಿ ಬಿಜಾಪುರ ಮೂಲದ ಕುಟುಂಬವೊಂದರ ಇಬ್ಬರು ಅಪ್ರಾಪ್ತ ಮಕ್ಕಳು ತರಕಾರಿ ಅಂಗಡಿ ನಡೆಸುತ್ತಿದ್ದುದನ್ನು ಪತ್ತೆ ಹಚ್ಚಿ ಅವರನ್ನು ರಕ್ಷಣೆ ಮಾಡಿದೆ.

ಶಾಲೆಯಿಂದ ಹೊರಗುಳಿದ 14 ವರ್ಷದ ಬಾಲಕಿ ಹಾಗೂ 3 ವರ್ಷದ ಮಗು ಮಾತ್ರ ಅಂಗಡಿಯಲ್ಲಿದ್ದು, ಅಂಗಡಿ ನೋಡಿಕೊಳ್ಳುತ್ತಿದ್ದರು. ಬಾಲಕಿಯನ್ನು ವಿಚಾರಿಸಿದಾಗ ತಂದೆ ಮತ್ತು ತಾಯಿ ಮಕ್ಕಳನ್ನು ಬಿಟ್ಟು ಹೋದ ವಿಷಯ ಬೆಳಕಿಗೆ ಬಂದಿದೆ. ಕೋಟೇಶ್ವರದ ಕರ್ನಾಟಕ ಪಬ್ಲಿಕ್ ಸ್ಕೂಲ್ ನಲ್ಲಿ ಬಾಲಕಿ 7ನೇ ತರಗತಿ ಕಲಿಯುತ್ತಿದ್ದಾಳೆ. ಆದರೆ, ಇತ್ತೀಚೆಗೆ ಬಾಲಕಿ ಶಾಲೆಗೇ ಹೋಗಿಲ್ಲ. ಈಕೆ ಶಾಲೆಯಿಂದ ಹೊರಗುಳಿದ ಬಾಲಕಿಯಾಗಿದ್ದು, ಪೋಷಕರ ಬೇಜವಾಬ್ದಾರಿಯಿಂದಾಗಿ ಬಾಲಕಿಯ ಶಿಕ್ಷಣಕ್ಕೆ ಸಮಸ್ಯೆ ಆಗುತ್ತಿತ್ತು. ಇನ್ನೊಬ್ಬಳು 3 ವರ್ಷದ ಬಾಲಕಿಯನ್ನು ತರಕಾರಿ ಬುಟ್ಟಿಯ ಮೇಲೆ ಮಲಗಿಸಿದ್ದುದು ಕಂಡು ಬಂದಿದೆ. ಮಕ್ಕಳನ್ನು ಪುನರ್ವಸತಿಗಾಗಿ ನಿಟ್ಟೂರಿನ ಮಕ್ಕಳ ಕಲ್ಯಾಣ ಸಮಿತಿಗೆ ಹಾಜರು ಪಡಿಸಲಾಗಿದೆ.

ಕಾರ್ಯಾಚರಣೆಯಲ್ಲಿ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಸದಾನಂದ ನಾಯಕ್ , ಕಾನೂನು ಪರಿವೀಕ್ಷಣಾಧಿಕಾರಿ ಪ್ರಭಾಕರ ಆಚಾರ್ , ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶ್ವೇತಾ, ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶೋಭಾ ಶೆಟ್ಟಿ, ಮಕ್ಕಳ ರಕ್ಷಣಾಧಿಕಾರಿ ಮಹೇಶ್ ದೇವಾಡಿಗ ಮತ್ತು ಕಪಿಲಾ, ಆಪ್ತ ಸಮಾಲೋಚಕಿ ಅಂಬಿಕಾ, ಸಮಾಜ‌ ಕಾರ್ಯಕರ್ತೆ ಸುರಕ್ಷಾ, ಔಟ್ ರೀಚ್ ವರ್ಕರ್ ಸುನಂದಾ, ಹಾಗೂ ಕುಂದಾಪುರ ಪೊಲೀಸ್ ಠಾಣೆ ಸಿಬ್ಬಂದಿ ಬೇಬಿ ಭಾಗವಹಿಸಿದ್ದರು .

Comments are closed.