ಕರಾವಳಿ

ಕಾಲಿಗೆ ಸರಪಳಿ ಸುತ್ತಿ ಪದ್ಮಾಸನ ಭಂಗಿಯಲ್ಲಿ ಸಮುದ್ರದಲ್ಲಿ ಈಜಿ ಇಂಡಿಯ ಬುಕ್ ಆಫ್ ರೆಕಾರ್ಡ್ಸ್ ಇತಿಹಾಸ ನಿರ್ಮಿಸಿದ ಗಂಗಾಧರ್

Pinterest LinkedIn Tumblr

ಉಡುಪಿ: ಉಡುಪಿಯ ರಾಷ್ಟ್ರಪ್ರಶಸ್ತಿ ವಿಜೇತ ಈಜುಪಟು ಗಂಗಾಧರ ಜಿ. ಅವರು ಪದ್ಮಾಸನ ಭಂಗಿಯಲ್ಲಿ ಕಾಲಿಗೆ ಸರಪಳಿ ಸುತ್ತಿ ಕೇವಲ ಒಂದು ಗಂಟೆ 13 ನಿಮಿಷ ,7 ಸೆಕೆಂಡಲ್ಲಿ ಬರೋಬ್ಬರಿ 1.4 ಕಿಲೋಮೀಟರು ಈಜಿ ಇಂಡಿಯ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ತಮ್ಮ ಹೆಸರನ್ನು ದಾಖಲಿಸಿದರು.

ಭಾನುವಾರ ಬೆಳಿಗ್ಗೆ 8.36 ಸಮುದ್ರಕ್ಕೆ ಧುಮ್ಮಕಿ ಈಜು ಆರಂಭಿಸಿದ 65 ವರ್ಷದ ಗಂಗಾಧರ್ 9.40 ಕ್ಕೆ ದಡ ಸೇರಿದ್ದು ಒಂದು ಗಂಟೆ 13 ನಿಮಿಷ ,7 ಸೆಕೆಂಡಲ್ಲಿ ಬರೋಬ್ಬರಿ 1.4 ಕಿಲೋಮೀಟರು ಈಜಿ ಇಂಡಿಯ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ತಮ್ಮ ದಾಖಲೆ ಬರೆದಿದ್ದು, ಈ ಹಿಂದೆ ಪದ್ಮಾಸನ ಭಂಗಿಯಲ್ಲಿ 800 ಮೀಟರ್ ಈಜಿದ ದಾಖಲೆ ಇಂಡಿಯ ಬುಕ್ ಆಫ್ ರೆಕಾರ್ಡ್ಸ್ ನಲ್ಲಿತ್ತು.ಆ ದಾಖಲೆಯನ್ನು ಗಂಗಾಧರ್ ಅಳಿಸಿ ಹಾಕಿದ್ದಾರೆ.

ಬ್ರೆಸ್ಟ್ ಸ್ಟ್ರೋಕ್ ಶೈಲಿಯಲ್ಲಿ ಸಮುದ್ರದಲ್ಲಿ ಇವರು ಈಜುವಾಗ ಇಂಡಿಯ ಬುಕ್ ಆಫ್ ರೆಕಾರ್ಡ್ಸ್ ನ ಅಧಿಕಾರಿಗಳು ಖುದ್ದು ವೀಕ್ಷಿಸಿದರು.ಈಜುವಾಗ ಚಿತ್ರೀಕರಣ ಮಾಡುವ ವ್ಯವಸ್ಥೆಯನ್ನೂ ಮಾಡಲಾಗಿತ್ತು. ಕಾರ್ಯಕ್ರಮಕ್ಕೆ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಚಾಲನೆ ನೀಡಿದರು.

ಗಂಗಾಧರ ಜಿ. ಈಗಾಗಲೇ ರಾಜ್ಯ ಮತ್ತು ರಾಷ್ಟ್ರಮಟ್ಟದ ಹಲವು ಪ್ರಶಸ್ತಿಗಳನ್ನು ಗಳಿಸಿದ್ದಾರೆ. 2009ರಿಂದ 2019ರವರೆಗೆ ರಾಜ್ಯ ಮಟ್ಟದ ಈಜು ಸ್ಪರ್ಧೆಯಲ್ಲಿ 31 ಚಿನ್ನ, 16 ಬೆಳ್ಳಿ, ಎಂಟು ಕಂಚಿನ ಪದಕ ಗಳಿಸಿದ್ದಾರೆ. ಗುಜರಾತ್, ಮಧ್ಯಪ್ರದೇಶ, ಆಂಧ್ರಪ್ರದೇಶ ಮತ್ತು ಉತ್ತರ ಪ್ರದೇಶದಲ್ಲಿ ನಡೆದ ರಾಷ್ಟ್ರ ಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸಿ ಉತ್ತಮ ಸಾಧನೆ ಮಾಡಿರುವ ಹೆಗ್ಗಳಿಕೆ ಇವರದು. ಮಾಸ್ಟರ್ ಗೇಮ್ಸ್ ಫೆಡರೇಶನ್ ಆಫ್ ಇಂಡಿಯಾ ನಡೆಸಿದ ರಾಷ್ಟ್ರಮಟ್ಟದ ಈಜು ಸ್ಪರ್ಧೆಯಲ್ಲಿ ಮೂರು ಚಿನ್ನದ ಪದಕ ಪಡೆದು ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ.

ಕಾಲಿಗೆ ಸರಪಳಿಸುತ್ತಿ ಬೀಗ ಹಾಕಿ ಬ್ರೆಸ್ಟ್ ಸ್ಟ್ರೋಕ್ ಶೈಲಿಯಲ್ಲಿ ಸಮುದ್ರದಲ್ಲಿ 1.4 ಕಿಲೋಮೀಟರು ಈಜಿ ಹೊಸ ದಾಖಲೆ ಬರೆದ ಗಂಗಾಧರ್ ಅವರಿಗೆ ಉಡುಪಿ ಶಾಸಕ ರಘುಪತಿ ಭಟ್ ಅಭಿನಂದನೆ ಸಲ್ಲಿಸಿದರು. ಈ ಸಂದರ್ಭದಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಸಹಕಾರಿ ಮೀನುಗಾರಿಕಾ ಫೇಡರೇಶನ್ ಅಧ್ಯಕ್ಷರಾದ ಯಶ್ ಪಾಲ್ ಸುವರ್ಣ, ಕಾರ್ತಿಕ್ ಗ್ರೂಪ್ ಮಲ್ಪೆ ಮ್ಯಾನೇಜಿಂಗ್ ಡೈರೆಕ್ಟರ್ ಹರಿಯಪ್ಪ ಕೋಟ್ಯಾನ್, ಅಪರ ಜಿಲ್ಲಾಧಿಕಾರಿಗಳಾದ ಸದಾಶಿವ ಪ್ರಭು, ಕರಾವಳಿ ಕಾವಲುಪಡೆ ಪೊಲೀಸ್ ಅಧೀಕ್ಷಕರಾದ ಚೇತನ್ ಆರ್, ತೀರ್ಪುಗಾರರಾದ ಹರೀಶ ಆರ್ ಮತ್ತು ಜೈ ದುರ್ಗಾ ಸ್ವಿಮ್ಮಿಂಗ್ ಕ್ಲಬ್ (ರಿ.) ಕಡೆಕಾರ್ ಇದರ ಉಪಾಧ್ಯಕ್ಷರಾದ ಚಂದ್ರ ಎಂ ಕುಂದರ್, ಹರ್ಷ ಮೆಂಡನ್, ಜನಾರ್ದನ ಕೋಟ್ಯಾನ್ ಮತ್ತು ಸರ್ವ ಸದಸ್ಯರು ಹಾಗೂ ಸ್ಥಳೀಯರು ಉಪಸ್ಥಿತರಿದ್ದರು.

 

Comments are closed.