ಕರಾವಳಿ

ರವಿ ಬಸ್ರೂರು ಹುಟ್ಟೂರಿನಲ್ಲಿ ‘ಡಾಲ್ಬಿ ಆಟೋಮಾಸ್ ಸ್ಟುಡಿಯೋ’

Pinterest LinkedIn Tumblr

ಕುಂದಾಪುರ: ಹುಟ್ಟೂರಿನ ಮೇಲಿನ ಅಭಿಮಾನದಿಂದ ಒಂದಲ್ಲ, ಒಂದು ರೀತಿಯಲ್ಲಿ ಹೊಸತನವನ್ನು ಪರಿಚಯಿಸುತ್ತಾ ಬಂದಿರುವ ಚಲನಚಿತ್ರ ರಂಗದ ಪ್ರಸಿದ್ಧ ಸಂಗೀತ ನಿರ್ದೇಶಕ ರವಿ ಬಸ್ರೂರು 2021 ನೇ ವರ್ಷದ ಮೊದಲ ದಿನವೇ ನೂತನ ತಂತ್ರಜ್ಞಾನದ ರಾಜ್ಯದ 2ನೇ ಡಾಲ್ಬಿ ಆಟೋಮಾಸ್ ಸ್ಟುಡಿಯೋವನ್ನು ಹುಟ್ಟೂರಿಗಾಗಿ ಅವಿಸ್ಮರಣೀಯ ಕೊಡುಗೆಯಾಗಿ ನೀಡಿದ್ದಾರೆ.

ರಾಜ್ಯದ ರಾಜಧಾನಿ ಬೆಂಗಳೂರು ಹಾಗೂ ಇತರ ಮಹಾನಗರಗಳಲ್ಲಿ ಹಲವು ರೆಕಾರ್ಡಿಂಗ್ ಸ್ಟುಡಿಯೋಗಳು ಇದ್ದರು. ಆಧುನೀಕ ತಂತ್ರಜ್ಞಾನದ ಡಾಲ್ಬಿ ಆಟೋಮಾಸ್ ಸ್ಟುಡಿಯೋ ಸದ್ಯಕ್ಕೆ ಬೆಂಗಳೂರಿನಲ್ಲಿ ಮಾತ್ರ ಇದೆ. ಬಸ್ರೂರಿನಲ್ಲಿ ಪ್ರಾರಂಭವಾಗಿರುವ ಡಾಲ್ಬಿ ಆಟೋಮಾಸ್ ಸ್ಟುಡಿಯೋ ರಾಜ್ಯದಲ್ಲಿಯೇ 2ನೇಯದು ಎನ್ನುವ ಹೆಗ್ಗಳಿಕೆಯನ್ನು ಹೊಂದಿದೆ.

ಡಿಜಿಟಲ್ ತಂತ್ರಜ್ಞಾನದಲ್ಲಿ ನಡೆಯುತ್ತಿರುವ ಆಧುನೀಕತೆಯ ಪರ್ವಗಳನ್ನು ಸದುಪಯೋಗಪಡಿಸಿಕೊಂಡು ನಿರ್ಮಾಣವಾಗುತ್ತಿರುವ ದೊಡ್ಡ ವೆಚ್ಚದ ಡಾಲ್ಬಿ ಆಟೋಮಾಸ್ ಸ್ಟುಡಿಯೋಗಳಲ್ಲಿ ಶೂಟಿಂಗ್ ಹೊರತು ಪಡಿಸಿ ಸಿನೀಮಾಗಳಿಗೆ ಅಗತ್ಯವಾಗಿರುವ ಎಲ್ಲ ರೀತಿಯ ರೆಕಾರ್ಡಿಂಗ್ ಗಳನ್ನು ಮಾಡಲಾಗುತ್ತದೆ.

ಉಗ್ರಂ, ಕೆಜಿಎಫ್, ಮಫ್ತಿ, ಮೃಗಶೀರಾ, ವೈರ್, ಬಜಾರ್, ರಿಂಗ್ ಮಾಸ್ಟರ್, ರಾಜಣ್ಣನ ಮಗ, ಸಂಹಾರ, ಕೀಟ್ಲೇ ಕೃಷ್ಣ, ಟೈಸನ್, ಲಕ್ಕಿ, ಬಿಲ್ಡರ್, ಅಂಜಲಿ ಪುತ್ರ, ಭೂತಯ್ಯನ ಮೊಮ್ಮಗ ಅಯ್ಯು, ಕರ್ವಾ, ದ್ಯಾವ್ರೇ, ಗರಗರ್ ಮಂಡಲ,ಬಿಲಿಂಡರ್, ಗಿರ್ಮಿಟ್, ಕಟಕ, ಎಕ್ಕ ಸಕಾ, ಅಪ್ಪೆ ಟೀಚರ್, ಉಮಿಲ್ ಮುಂತಾದ ಚಿತ್ರಗಳಿಗೆ ಸಂಗೀತದ ಕಂಪನ್ನು ಉಣಿಸಿ ಕನ್ನಡಿಗರ ಮನ ಗೆದ್ದಿರುವ ರವಿ ಬಸ್ರೂರು ಈ ಹಿಂದೆ ಹುಟ್ಟೂರು ಭಾಷೆಯಾದ ‘ಕುಂದಾಪ್ರ’ ಕನ್ನಡದ ಅಭಿಮಾನದಲ್ಲಿ ಸಂಗೀತ ಹಾಗೂ ಸಿನೀಮಾ ನಿರ್ಮಾಣದ ಸಾಹಸಕ್ಕೂ ಕೈ ಹಾಕಿದ್ದರು. ಇದೀಗ ಗ್ರಾಮೀಣ ಭಾಗದಲ್ಲಿ ಡಾಲ್ಬಿ ಆಟೋಮಾಸ್ ಸ್ಟುಡಿಯೋ ನಿರ್ಮಾಣ ಮಾಡುವ ಮೂಲಕ ರಾಜ್ಯದ ಭೂಪಟದಲ್ಲಿ ‘ಬಸ್ರೂರು’ ಪ್ರಕಾಶಿಸುವಂತೆ ಮಾಡಿದ್ದಾರೆ.

ಸ್ಟುಡಿಯೋ ಬಗ್ಗೆ ಮಾತನಾಡಿದ ಅವರು, ಹುಟ್ಟೂರಿನಲ್ಲಿ ನೆನಪಿನಲ್ಲಿ ಉಳಿಯುವಂತಹ ಏನನ್ನಾದರೂ ಮಾಡಬೇಕು ಎನ್ನುವ ಚಿಂತನೆಯಲ್ಲಿ ನನ್ನ ಮಹತ್ವಾಕಾಂಕ್ಷೆಯ ಡಾಲ್ಬಿ ಆಟೋಮಾಸ್ ಸ್ಟುಡಿಯೋ ನಿರ್ಮಾಣಕ್ಕೆ ಕೈ ಹಾಕಿದ್ದೆ. ನನ್ನ ಮಾರ್ಗದರ್ಶಕರಾಗಿರುವ ಪ್ರಶಾಂತ್ ನೀಲ್ ಅವರ ಮೂಲಕ ಇದು ಉದ್ಘಾಟನೆಗೊಂಡಿರುವುದು ಇನ್ನಷ್ಟು ಸಂತಸ ತಂದಿದೆ. ಒಂದು ಸಿನೀಮಾಗಳಿಗೆ ಕನಿಷ್ಟ 25 ದಿನಗಳ ಕಾಲ ರೆಕಾರ್ಡಿಂಗ್ ಸ್ಟುಡಿಯೋಗಳಲ್ಲಿ ಕೆಲಸವಿರುತ್ತೆ. ಈ ಕೆಲಸದ ಕಾರಣದಿಂದ ಊರಿನಲ್ಲಿ ಇರಬಹುದಲ್ಲ ಎನ್ನುವ ಆಲೋಚನೆ ಇದೆ ಎಂದು ತಿಳಿಸಿದರು

Comments are closed.