ಕರಾವಳಿ

ನಾಳೆ ಆಂಟನಿ ವೇಸ್ಟ್‌ನ ಕಾರ್ಮಿಕರಿಂದ ಮುಷ್ಕರ :ಮಂಗಳೂರಿನಲ್ಲಿ ಕಸ ವಿಲೇವಾರಿ ಬಂದ್

Pinterest LinkedIn Tumblr

 

File Photo

ಮಂಗಳೂರು, ಜನವರಿ.01: ಮಂಗಳೂರು ಮಹಾನಗರದ ಕಸ ತೆಗೆಯುವ ಗುತ್ತಿಗೆ ಪಡೆದ ಆಂಟನಿ ವೇಸ್ಟ್‌ನ ಕಾರ್ಮಿಕರು ಮತ್ತೆ ನಾಳೆ ಮುಷ್ಕರ ನಡೆಸಲಿದ್ದಾರೆ. ನಾಳೆ ಮತ್ತೆ ಮಂಗಳೂರಿನ ಕಸ ತೆಗೆಯುವ ಪ್ರಕ್ರೀಯೆ ನಡೆಯುವುದಿಲ್ಲ.

ಡಿಸೆಂಬರ್ 17ರಂದು ಕಾರ್ಮಿಕರ ಪ್ರತಿಭಟನೆ ವೇಳೆ ಸಲ್ಲಿಸಿದ್ದ ಒಟ್ಟು 12 ಬೇಡಿಕೆಗಳಲ್ಲಿ ಕೇವಲ ಒಂದನ್ನು ಮಾತ್ರ ಈಡೇರಿಸಲಾಗಿದೆ. ಉಳಿದವುಗಳ ಬಗ್ಗೆ ಪೂರ್ಣ ನಿರ್ಲಕ್ಷ್ಯ ವಹಿಸಲಾಗಿದೆ. ಈ ಹಿನ್ನೆಲೆಯಲ್ಲಿ ಮತ್ತೆ ಕೆಲಸ ನಿಲ್ಲಿಸಿ ಪ್ರತಿಭಟನೆ ನಡೆಸಲು ಉದ್ದೇಶಿಸಲಾಗಿದೆ ಎಂದು ಸಂಘದ ಅಧ್ಯಕ್ಷ ನಾರಾಯಣ ಶೆಟ್ಟಿ ತಿಳಿಸಿದ್ದಾರೆ.

ದಿನದ ಕೆಲಸದ ಅವಧಿಯಲ್ಲಿ ಎಂಟು ಗಂಟೆಗೆ ನಿಗಧಿಪಡಿಸಬೇಕು. ಹೆಚ್ಚುವರಿ ಕೆಲಸ ಮಾಡಿದರೆ ಸರಕಾರದ ನಿಯಮದ ಪ್ರಕಾರ ಓಟಿ ನೀಡಬೇಕು. ಕಾರ್ಮಿಕರ ವಿರುದ್ಧ ದಬ್ಬಾಳಿಕೆ ಮಾಡಿದ ಸೂಪರ್‌ವೈಸರ್ ಅವರ ಮೇಲೆ ವಿಚಾರಣೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಬೇಕು. ಹಣಕಾಸು ದುರ್ಬಳಕೆ ಮಾಡಿದ ಸೂಪರ್‌ವೈಸರ್ ಅವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು. ಕಾರ್ಮಿಕರಿಗೆ ಇಎಲ್ ವ್ಯವಸ್ಥೆಯನ್ನು ಜಾರಿಗೊಳಿಸಬೇಕು. ಭವಿಷ್ಯ ನಿಧಿ ಮತ್ತು ಇಎಸ್‌ಐಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ಎಲ್ಲ ಕಾರ್ಮಿಕರಿಗೆ ನೀಡಬೇಕು. ವೇತನದ ಪೂರ್ಣ ವಿವರ (ಪೇಸ್ಲಿಪ್ ಅನ್ನು) ಎಲ್ಲರಿಗೂ ನೀಡಬೇಕು. ವೇತನದ ವಿಚಾರದಲ್ಲಿ ಸಂಪೂರ್ಣ ಪಾರದರ್ಶಕತೆಯನ್ನು ಜಾರಿಗೆ ತರಬೇಕು.

ಕೋವಿಡ್ 19ರ ಲಾಕ್‌ಡೌನ್ ಅವಧಿಯಲ್ಲಿ ಊರಿಗೆ ಹೋಗಿ ಸಿಲುಕಿ ಹಾಕಿಕೊಂಡ ಕಾರ್ಮಿಕರಿಗೆ ಅವರ ಕಡತವನ್ನು ಪರಿಶೀಲಿಸಿ ವೇತನ ನೀಡಬೇಕು. ವಾಹನಗಳ ದುರಸ್ತಿಯನ್ನು ಅತಿ ಶೀಘ್ರದಲ್ಲಿ ಮಾಡಬೇಕು. ಪ್ರತಿ ತಿಂಗಳು ಕೆಲಸಗಾರರು ಹಾಗೂ ಆಡಳಿತ ವಿಭಾಗದ ಸಭೆಯನ್ನು ನಡೆಸಬೇಕು. ಈ ಸಭೆಯಲ್ಲಿ ಕುಂದು ಕೊರತೆಯನ್ನು ಪರಿಶೀಲಿಸಿ ಕ್ರಮ ಕೈಗೊಳ್ಳಬೇಕು ಎಂಬ ಬೇಡಿಕೆಯನ್ನು ಮಂಡಿಸಲಾಗಿತ್ತು.

ಈ ಬೇಡಿಕೆಯನ್ನು ತಕ್ಷಣವೇ ಈಡೇರಿಸುವುದಾಗಿ ಸಂಸ್ಥೆಯು ಲಿಖಿತವಾಗಿ ಕಾರ್ಮಿಕ ಇಲಾಖೆಯ ಅಧಿಕಾರಿಗಳ ಸಮಕ್ಷಮದಲ್ಲಿ ಬರೆದುಕೊಟ್ಟಿದ್ದರು. ಆದರೆ ಇದೀಗ ಕಂಪನಿಯು ನೀಡಿರುವ ಭರವಸೆಯನ್ನು ಈಡೇರಿಸದೆ ಕಾರ್ಮಿಕರನ್ನು ಸತಾಯಿಸುತ್ತಿದೆ.

ಬೈಕಂಪಾಡಿಯಲ್ಲಿರುವ ಆಂಟನಿ ವೇಸ್ಟ್‌ನ ಕಚೇರಿಯ (ಹಿಂದಿನ ಮುಂಗಾರು ಕಚೇರಿಯ ಬಳಿ) ಬಳಿಕ ಎಲ್ಲ ಸಿಬ್ಬಂದಿಗಳು ಮುಷ್ಕರ ನಡೆಸಲು ಉದ್ದೇಶಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಸಂಘಟನೆಯ ಅಧ್ಯಕ್ಷರಾದ ನಾರಾಯಣ ಶೆಟ್ಟಿ ಅವರನ್ನು ದೂರವಾಣಿ ಸಂಖ್ಯೆ: 9481763385 ಸಂಪರ್ಕಿಸಬಹುದಾಗಿದೆ.

Comments are closed.