ಕರಾವಳಿ

ಕ್ರಿಸ್ಮಸ್, ಹೊಸವರ್ಷ ಬಹಳ ಸರಳವಾಗಿ ಆಚರಣೆ: ಬಿಷಪ್ ಜೆರಾಲ್ಡ್ ಐಸಾಕ್ ಲೋಬೊ

Pinterest LinkedIn Tumblr

ಉಡುಪಿ: ಉಡುಪಿ ಕೆಥೊಲಿಕ್ ಧರ್ಮಪ್ರಾಂತ್ಯದ ವತಿಯಿಂದ ಶನಿವಾರ ನಗರದಲ್ಲಿನ ಮಾಧ್ಯಮ ಮಿತ್ರರೊಂದಿಗೆ ಧರ್ಮಾಧ್ಯಕ್ಷ ಅತಿ ವಂ|ಡಾ|ಜೆರಾಲ್ಡ್ ಐಸಾಕ್ ಲೋಬೊ ಅವರು ಕ್ರಿಸ್ಮಸ್ ಸ್ನೇಹ ಕೂಟವನ್ನು ಆಚರಿಸಿದರು.

ಕಾರ್ಯಕ್ರಮವನ್ನು ಕೇಕ್ ಕತ್ತರಿಸುವುದರ ಮೂಲಕ ಉದ್ಘಾಟಿಸಿ ಮಾತನಾಡಿದ ಧರ್ಮಾಧ್ಯಕ್ಷ ಅತಿ ವಂ|ಡಾ|ಜೆರಾಲ್ಡ್ ಐಸಾಕ್ ಲೋಬೊ, ಜಗತ್ತು ಎಂಬ ಕುಟುಂಬದಲ್ಲಿ ನಾವೆಲ್ಲರೂ ವಾಸಿಸುತ್ತಿರುವಾಗ ನಮ್ಮ ಧರ್ಮ, ಸಂಸ್ಕೃತಿ, ಆಚಾರ-ವಿಚಾರ, ರೀತಿ-ರಿವಾಜುಗಳನ್ನು ದಾಟಿ ಮಾನವೀಯ ಮೌಲ್ಯಗಳನ್ನು ಪಸರಿಸಬೇಕು. ಈ ಕಾಲಘಟ್ಟದಲ್ಲಿ ಹೊಸ ಚಿಂತನೆ, ಹೊಸ ಪ್ರಪಂಚದ ದೃಷ್ಠಿಕೋನ ಅಗತ್ಯವಿದೆ. ನಾವೆಲ್ಲರೂ ಒಂದೇ ಕುಟಂಬಕ್ಕೆ ಸೇರಿದವರು ಎಂದು ಉಡುಪಿ ಧರ್ಮ ಪ್ರಾಂತ್ಯದ ಬಿಷಪ್ ಫಾದರ್ ಜೆರಾಲ್ಡ್ ಐಸಾಕ್ ಲೋಬೊ ಹೇಳಿದರು.

ಅವರು ಶನಿವಾರ ಉಡುಪಿಯ ಬಿಷಪ್ ಹೌಸ್ ನ ಸಭಾಂಗಣದಲ್ಲಿ ಉಡುಪಿ ಧರ್ಮಪ್ರಾಂತ್ಯದ ವತಿಯಿಂದ ಜರುಗಿದ ಮಾಧ್ಯಮ ಮಿತ್ರರೊಂದಿಗೆ ಕ್ರಿಸ್ಮಸ್ ಸ್ನೇಹ ಕೂಟದ ಸಮಾರಂಭದಲ್ಲಿ ಮಾತನಾಡಿದರು.

ಕೋವಿಡ್ ಸಾಂಕ್ರಾಮಿಕ ರೋಗದಿಂದಾಗಿ ಲಾಕ್ ಡೌನ್ ನಿಂದ ಬಹಳಷ್ಟು ಮಂದಿ ಬೀದಿಪಾಲು, ಅನೇಕ ಮಂದಿ ಉದ್ಯೋಗ ಕಳೆದುಕೊಂಡರು. ಆ ಸಂದರ್ಭದಲ್ಲಿ ಕಷ್ಟಕ್ಕೆ ಸಿಲುಕಿದವರಿಗೆ ಸಮಾಧಾನ, ಸಾಂತ್ವಾನ ಅಗತ್ಯವಾಗಿ ಬೇಕಿತ್ತು. ಉಡುಪಿ ಧರ್ಮ ಪ್ರಾಂತ್ಯ ಎಲ್ಲಾ ರೀತಿಯಲ್ಲೂ ಸಂತ್ರಸ್ತರಿಗೆ ಸಹಾಯಾಸ್ತ ಚಾಚಿದೆ. ಒಂಭತ್ತು ಸಾವಿರಕ್ಕೂ ಹೆಚ್ಚು ಕುಟುಂಬಗಳಿಗೆ ಆಹಾರ, ಮೂಲಭೂತ ಸೌಕರ್ಯ ಒದಗಿಸಲು ಸಾಧ್ಯವಾಗಿದೆ. ನೂರಾರು ಬಡಜನರಿಗೆ ನಮ್ಮ ವಿದ್ಯಾ ಸಂಸ್ಥೆಗಳಲ್ಲಿ ವಸತಿ ಕಲ್ಪಿಸಿ ಉಚಿತವಾಗಿ ಬೇಕಾದಂತಹ ಮೂಲಭೂತ ಅವಶ್ಯಕತೆಗಳನ್ನು ಪೂರೈಸಿದ್ದೇವೆ. ಈ ಸಮಯದಲ್ಲಿ ಮಾನವೀಯತೆಯಿಂದ ಜಾತಿ, ಮತ, ಭೇದವಿಲ್ಲದೆ ಜನರ ಸಂಕಷ್ಟಗಳನ್ನು ಹಗುರಗೊಳಿಸಲು ಪ್ರಯತ್ನಿಸಿದ್ದೇವೆ ಎಂದರು.

ಕೊರೋನಾ ಸೋಂಕಿನ ಅಪಾಯ ಇನ್ನೂ ನಮ್ಮನ್ನು ಬಿಟ್ಟು ಹೋಗಿಲ್ಲ. ಈ ಸಾಂಕ್ರಾಮಿಕ ರೋಗದಿಂದ ಎಲ್ಲರೂ ಜಾಗರೂಕರಾಗಬೇಕು. ಕ್ರಿಸ್ಮಸ್ ಹಾಗೂ ಹೊಸವರ್ಷ ಆಚರಣೆಯನ್ನು ಬಹಳ ಸರಳವಾಗಿ ಆಚರಿಸಲು ನಿರ್ಧರಿಸಿದ್ದೇವೆ. ಧರ್ಮ ಪ್ರಾಂತ್ಯದ ಕ್ರೈಸ್ತ ಕುಟುಂಬಗಳು ಇದೇ ಆದೇಶವನ್ನು ಪಾಲಿಸಲು ಈಗಾಗಲೇ ಕರೆ ಕೊಟ್ಟಿದ್ದೇವೆ. ಈ ವರ್ಷದ ಕ್ರಿಸ್ಮಸ್ ಹೆಚ್ಚು ಆಡಂಬರವಿಲ್ಲದೇ ಅದರಿಂದ ಉಳಿತಾಯವಾದ ಹಣವನ್ನು ಬಡವರಿಗೆ ಕೊಡಲಿದ್ದೇವೆ ಎಂದರು.

ಪತ್ರಕರ್ತರೂ ಕೋವಿಡ್ ಸೇನಾನಿಗಳು:
ಲಾಕ್ ಡೌನ್ ನಂತಹ ಸಂದಿಗ್ಧ ಸ್ಥಿತಿಯಲ್ಲಿ ವೈದ್ಯರು, ದಾದಿಯರು, ಪೊಲೀಸರು ಕೋವಿಡ್ ಸೇನಾನಿಗಳಾಗಿ ತಮ್ಮ ಕರ್ತವ್ಯವನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ಅಂತೆಯೇ ಪತ್ರಕರ್ತರೂ ಕೂಡ ಯಾರೂ ಕೂಡ ಮನೆಯಿಂದ ಹೊರಗಡೆ ಬಾರದ ಕಠಿಣ ದಿನಗಳಲ್ಲಿ ವಸ್ತುನಿಷ್ಠ ವರದಿ ಭಿತ್ತರಿಸಿದ್ದಾರೆ. ಪತ್ರಕರ್ತರೂ ಕೂಡ ಕೋವಿಡ್ ಸೇನಾನಿಗಳಂತೆ ಕೆಲಸ ಮಾಡಿದ್ದಾರೆ ಎಂದರು.

ಕಾರ್ಯಕ್ರಮದಲ್ಲಿ ಉಡುಪಿ ಧರ್ಮಪ್ರಾಂತ್ಯದ ಸಾರ್ವಜನಿಕ ಸಂಪರ್ಕಾಧಿಕಾರಿ ವಂ. ಚೇತನ್ ಲೋಬೊ ಅವರ ಬರಹಗಳ ಸಂಗ್ರಹ ಚೇತನ ಚಿಂತನ ಪುಸ್ತಕ ಬಿಡುಗಡೆ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪತ್ರಕರ್ತರಾದ ಶ್ರೀಪತಿ ಹೆಗ್ಡೆ ಹಕ್ಲಾಡಿ, ಉದಯ್ ಪಡಿಯಾರ್, ಬ್ಯಾರಿ ಅಕಾಡೆಮಿ ಸದಸ್ಯ ನಝೀರ್ ಪೊಲ್ಯ ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಉಡುಪಿ ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಗಣೇಶ್ ಪ್ರಸಾದ್ ಪಾಂಡೇಲು, ಉಡುಪಿ ಶೋಕ ಮಾತಾ ಇಗರ್ಜಿ ಧರ್ಮಗುರು ವಂ ಚಾರ್ಲ್ಸ್ ಮಿನೇಜಸ್, ಹಾಗೂ ಇತರರು ಉಪಸ್ಥಿತರಿದ್ದರು.

ಉಡುಪಿ ಧರ್ಮಪ್ರಾಂತ್ಯದ ಸಾರ್ವಜನಿಕ ಸಂಪರ್ಕಾಧಿಕಾರಿ ವಂ ಚೇತನ್ ಲೋಬೊ ಸ್ವಾಗತಿಸಿ, ಮಾಧ್ಯಮ ಸಮನ್ವಯಕಾರ ಮೈಕಲ್ ರೊಡ್ರಿಗಸ್ ವಂದಿಸಿ, ವಂ|ರೊಯ್ಸನ್ ಫೆರ್ನಾಂಡಿಸ್ ಕಾರ್ಯಕ್ರಮ ನಿರೂಪಿಸಿದರು.

Comments are closed.