ಕರಾವಳಿ

9 ವರ್ಷದ ಬಾಲಕಿಗೆ ಲೈಂಗಿಕ ದೌರ್ಜನ್ಯ: ಆರೋಪಿ ದೋಷಿಯೆಂದು ಉಡುಪಿ ಪೋಕ್ಸೋ ಕೋರ್ಟ್ ತೀರ್ಪು

Pinterest LinkedIn Tumblr

ಉಡುಪಿ: ಮನೆಯಲ್ಲಿ ಒಂಟಿಯಾಗಿದ್ದ 9 ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ್ದ ಆರೋಪಿ ದೋಷಿ ಎಂದು ಡಿ.18ರಂದು ಉಡುಪಿ ಜಿಲ್ಲಾ ಹೆಚ್ಚುವರಿ ಮತ್ತು ಸತ್ರ ನ್ಯಾಯಾಲಯದ ಪೋಕ್ಸೋ ತ್ವರಿತ ವಿಶೇಷ ನ್ಯಾಯಾಲಯದ (FTSC-1) ನ್ಯಾಯಾಧೀಶರಾದ ಯಾದವ್ ವನಮಾಲಾ ಆನಂದರಾವ್ ಆದೇಶಿಸಿದ್ದಾರೆ.

ಕುಂದಾಪುರ ಪೊಲೀಸ್ ಠಾಣೆಯ ಕುಂಭಾಸಿ ವ್ಯಾಪ್ತಿಯಲ್ಲಿ 2014 ಎಪ್ರಿಲ್ 27 ರಂದು ಈ ಘಟನೆ ನಡೆದಿತ್ತು. ಆರೋಪಿ ಗಣೇಶ್ (35) ಎನ್ನುವಾತ ಮನೆ ಸಮೀಪದ 9 ವರ್ಷ ಪ್ರಾಯದ ಬಾಲಕಿಯ ಮನೆಗೆ ಅಕ್ರಮ ಪ್ರವೇಶ ಮಾಡಿ ಆಕೆಗೆ ತನ್ನ ಮೊಬೈಲ್ ಫೋನಿನಲ್ಲಿದ್ದ ಅಶ್ಲೀಲ ಸಿನೆಮಾ ವಿಡಿಯೋ ತೋರಿಸಿ ಲೈಂಗಿಕ ದೌರ್ಜನ್ಯವೆಸಗಿದ್ದ. ಆತನ ವಿರುದ್ಧ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಕಾಯ್ದೆ ಹಾಗೂ ಮನೆಗೆ ಅಕ್ರಮ ಪ್ರವೇಶ ಮಾಡಿದ್ದಕ್ಕಾಗಿ ಐಪಿಸಿ ಸೆಕ್ಷನ್ 448 ಅಡಿ ಪ್ರಕರಣ ದಾಖಲಾಗಿತ್ತು.

ಕುಂದಾಪುರದ ಅಂದಿನ ಸಿಪಿಐ ದಿವಾಕರ ಪಿಎಂ ಅವರು ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದು ಒಟ್ಟು 13 ಮಂದಿ ಸಾಕ್ಷಿಗಳ ಪೈಕಿ 8 ಮಂದಿ ವಿಚಾರಣೆ ನಡೆಸಲಾಗಿತ್ತು. ಸಂತ್ರಸ್ತ ಬಾಲಕಿ ಅಭಿಯೋಜನೆಗೆ ಪೂರಕವಾಗಿ ಸಾಕ್ಷ್ಯ ನುಡಿದಿದ್ದು ಆರೋಪಿ ದೋಷಿ ಎಂದು ತೀರ್ಪು ನೀಡಿದಲ್ಲದೆ ಡಿ.21ಕ್ಕೆ ಶಿಕ್ಷೆ ಪ್ರಮಾಣ ಪ್ರಕಟಿಸುವುದಾಗಿ ನ್ಯಾಯಾಲಯ ಆದೇಶಿಸಿದೆ.

ಉಡುಪಿಯ ವಿಶೇಷ ಪೋಕ್ಸೋ ನ್ಯಾಯಾಲಯದ ವಿಶೇಷ ಸರಕಾರಿ ಅಭಿಯೋಜಕ ವೈ.ಟಿ ರಾಘವೇಂದ್ರ ಅವರು ಪ್ರಾಸಿಕ್ಯೂಶನ್ ಪರ ವಾದ ಮಂಡಿಸಿದ್ದರು.

Comments are closed.