ಕರಾವಳಿ

ಪುತ್ರಿಯರಿಗೆ ಲೈಂಗಿಕ ಹಲ್ಲೆ ನಡೆಸಿದ ತಂದೆಯ ಮೇಲಿನ ಆರೋಪ ಸಾಬೀತು: ನ. 30ಕ್ಕೆ ಶಿಕ್ಷೆ ಪ್ರಕಟ

Pinterest LinkedIn Tumblr

ಉಡುಪಿ: ಪುತ್ರಿಯರಿಬ್ಬರ ಮೇಲೆ ಲೈಂಗಿಕ ಹಲ್ಲೆ ನಡೆಸಿದ ಆರೋಪ ಹೊತ್ತಿದ್ದ ತಂದೆಯ ಮೇಲಿನ ದೋಷಾರೋಪಣೆಗಳು ಸಾಬೀತಾಗಿದ್ದು ಅಪರಾಧಿಗೆ ನ.30 ರಂದು ಶಿಕ್ಷೆ ಪ್ರಮಾಣ ಪ್ರಕಟಿಸುವುದಾಗಿ ಉಡುಪಿ ಜಿಲ್ಲಾ ಹೆಚ್ಚುವರಿ ಮತ್ತು ಸತ್ರ ನ್ಯಾಯಾಲಯದ ಪೋಕ್ಸೋ ತ್ವರಿತ ವಿಶೇಷ ನ್ಯಾಯಾಲಯದ (FTSC-1) ನ್ಯಾಯಾಧೀಶರಾದ ಯಾದವ್ ವನಮಾಲಾ ಆನಂದರಾವ್ ಆದೇಶಿಸಿದ್ದಾರೆ.

(ಸಾಂದರ್ಭಿಕ ಚಿತ್ರ)

ಆರೋಪಿ ಪತ್ನಿ ಮಾನಸಿಕ ಖಿನ್ನರಾಗಿದ್ದು ಕಿರಿಯ ಮಗಳಿಗೆ ಲೈಂಗಿಕ ಹಲ್ಲೆ ನಡೆಸುತ್ತಿದ್ದ. ಹಿರಿಯ ಮಗಳು ಇದಕ್ಕೆ ವಿರೋಧಿಸಿದ್ದಳು. ನಂತರದಲ್ಲಿ ಪತ್ನಿ ಮೃತಳಾಗಿದ್ದು ಆರೋಪಿ ಮಾತ್ರ ಈ ಚಾಳಿ ಬಿಟ್ಟಿರಲಿಲ್ಲ. ಸ್ವಂತ ತಂದೆಯೇ 14 ವರ್ಷದ ಮಗಳ ಮೇಲೆ ಲೈಂಗಿಕ ಹಲ್ಲೆ ನಡೆಸಿ, 16 ವರ್ಷದ ಹಿರಿಯ ಮಗಳಿಗೆ ಲೈಂಗಿಕ ದೌರ್ಜನ್ಯವೆಸಗಿದ್ದರ ಬಗ್ಗೆ ಸ್ಥಳೀಯ ಅಂಗನವಾಡಿ ಕಾರ್ಯಕರ್ತೆ ಉಡುಪಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಗಮನಕ್ಕೆ ತಂದಿದ್ದು ಕಾನೂನು ಪರಿವೀಕ್ಷಣಾಧಿಕಾರಿ ಪ್ರಭಾಕರ ಆಚಾರ್ಯ ಅವರು ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದರು. 2019 ಅಕ್ಟೋಬರ್ ತಿಂಗಳಿನಲ್ಲಿ ಕಾರ್ಕಳ ವೃತ್ತ ಕಚೇರಿ ವ್ಯಾಪ್ತಿಯಲ್ಲಿ ಈ ಪ್ರಕರಣ ದಾಖಲಾಗಿತ್ತು. ಮೊದಲಿಗೆ ಸರ್ಕಲ್ ಇನ್ಸ್‌ಪೆಕ್ಟರ್ ಮಹೇಶ್‌ ಪ್ರಸಾದ್ ತನಿಖೆ ನಡೆಸಿದ್ದು ಬಳಿಕ ಸಿಪಿಐ ಸಂಪತ್ ಕುಮಾರ್ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಿದ್ದರು. ಒಟ್ಟು 26 ಮಂದಿ ಸಾಕ್ಷಿಗಳ ಪೈಕಿ ಸಂತ್ರಸ್ತ ಸಹೋದರಿಯರು ಹಾಗೂ ದೂರುದಾರರು ಸೇರಿದಂತೆ 8 ಮಂದಿ ವಿಚಾರಣೆ ನಡೆಸಿದ ನ್ಯಾಯಾಲಯ ಆರೋಪಿ ತಂದೆ ನಡೆಸಿದ ಕೃತ್ಯ ಸಾಬೀತಾಗಿದೆ ಎಂದು ಆದೇಶಿಸಿದೆ.

ಉಡುಪಿಯ ವಿಶೇಷ ಪೋಕ್ಸೋ ನ್ಯಾಯಾಲಯದ ವಿಶೇಷ ಸರಕಾರಿ ಅಭಿಯೋಜಕ ವೈ.ಟಿ ರಾಘವೇಂದ್ರ ಅವರು ಪ್ರಾಸಿಕ್ಯೂಶನ್ ಪರ ವಾದ ಮಂಡಿಸಿದ್ದಾರೆ.

Comments are closed.