ಕರಾವಳಿ

ಕಮಲಶಿಲೆ ಬ್ರಾಹ್ಮಿ ಶ್ರೀ ದುರ್ಗಾಪರಮೇಶ್ವರಿ ದೇವಳದಲ್ಲಿ ನವರಾತ್ರಿ ಸಂಭ್ರಮ, ವೈಭವದ ರಥೋತ್ಸವ

Pinterest LinkedIn Tumblr

ಕುಂದಾಪುರ: ಕಮಲಶಿಲೆಯ ಶ್ರೀ ಬ್ರಾಹ್ಮಿ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಕಳೆದ ಒಂಭತ್ತು ದಿನಗಳಿಂದ ನಡೆಯುತ್ತಿದ್ದ ವೈಭವದ ನವರಾತ್ರಿ ಉತ್ಸವದ ಅಂಗವಾಗಿ ಭಾನುವಾರ ರಾತ್ರಿ ನಡೆದ ಮಹಾ ನವರಾತ್ರಿ ಉತ್ಸವದಲ್ಲಿ ಬೆಳ್ಳಿಯ ರಥದಲ್ಲಿ ಶ್ರೀ ದೇವಿಯ ರಥೋತ್ಸವ ಸಂಪನ್ನಗೊಂಡಿದೆ.

ಅ.17 ರಿಂದ 25 ರವರೆಗೆ ಪ್ರತಿ ದಿನ ತ್ರಿಕಾಲ ಪೂಜೆ, ನವರಾತ್ರಿ ವಿಶೇಷ, ಮಹಾಪೂಜೆ, ಸುತ್ತುಬಲಿಗಳನ್ನು ನಡೆಸಲಾಗಿತ್ತು. ಭಾನುವಾರ ಮಧ್ಯಾಹ್ನ ಚಂಡಿಕಾ ಹವನ, ಅನ್ನ ಸಂತರ್ಪಣೆ, ಸಂಜೆ ರಂಗಪೂಜೆ, ರಾತ್ರಿ ರಥ ಬೀದಿ ಹಾಗೂ ರಾಜ ಬೀದಿಯಲ್ಲಿ ಬೆಳ್ಳಿ ರಥೋತ್ಸವ ನಂತರ ರಾಜಬೀದಿಯಲ್ಲಿ ಲಾಲ್ಕಿ ಉತ್ಸವ ನಡೆಯಿತು. ಅ.26 ರಂದು ಕದಿರು ಮಹೂರ್ತ, ಕಣಜ ತುಂಬಿಸುವುದು, ದಶಮಿ ಪೂಜೆ, ವಿಜಯೋತ್ಸವ ಹಾಗೂ ಸಂಜೆ ದಶಮಿ ಉತ್ಸವ ನಡೆಯಿತು.

ಅನುವಂಶೀಕ ಆಡಳಿತ ಮೊಕ್ತೇಸರ ಶೆಟ್ಟಿಪಾಲ್‌ ಸಚ್ಚಿದಾನಂದ ಚಾತ್ರ, ಅನುವಂಶಿಕ ಟ್ರಸ್ಟಿಗಳಾದ ಬರೆಗುಂಡೆ ಶ್ರೀನಿವಾಸ ಚಾತ್ರ, ಆಜ್ರಿ ಚಂದ್ರಶೇಖ ಶೆಟ್ಟಿ, ವ್ಯವಸ್ಥಾಪಕ ಗುರುರಾಜ್‌ ಭಟ್‌ ಇದ್ದರು. ದೇವಸ್ಥಾನದ ಪ್ರಧಾನ ಅರ್ಚಕ ಕೃಷ್ಣಮೂರ್ತಿಅಡಿಗ ಅವರ ನೇತ್ರತ್ವದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ನಡೆದಿದ್ದವು.

ಉತ್ಸವದ ದಿನಗಳಲ್ಲಿ ಪ್ರತಿ ದಿನ ಸಂಜೆ ವಿವಿಧ ಕಲಾ ಹಾಗೂ ಭಜನಾ ತಂಡಗಳಿಂದ ಸಾಂಸ್ಕೃತಿಕ ಹಾಗೂ ಭಜನಾ ಕಾರ್ಯಕ್ರಮ ನಡೆಯಿತು. ಭಾನುವಾರ ರಾತ್ರಿ ರಾಜ್ಯದ ವಿವಿಧ ಭಾಗಗಳಿಂದ ಬಂದಿದ್ದ ಭಕ್ತರ ಉಪಸ್ಥಿತಿಯಲ್ಲಿ ಶ್ರೀದೇವಿಗೆ ರಂಗ ಪೂಜೆಯನ್ನು ನೆರವೇರಿಸಲಾಯಿತು. ಬಳಿಕ ದೇವಸ್ಥಾನದ ಮೂರ್ತಿಧಾರಕರು ಶ್ರೀ ದೇವಿಯ ಉತ್ಸವ ಮೂರ್ತಿಯನ್ನು ಗರ್ಭಗುಡಿಯಿಂದ ಹೊರ ತಂದರು. ಜಯಘೋಷಗಳ ಹಾಗೂ ಮಂತ್ರಘೋಷಗಳ ನಡುವೆ ದೇವಿಯ ಪಲ್ಲಕ್ಕಿ ಉತ್ಸವ, ಬೆಳ್ಳಿಯ ರಥೋತ್ಸವ ಹಾಗೂ ಲಾಲ್ಕಿ ಉತ್ಸವಗಳು ನಡೆಯಿತು. ಈ ವೇಳೆ ಉತ್ಸವದ ಸೇವಾಕರ್ತ ಭಕ್ತರಿಗೆ ದೇವಸ್ಥಾನದ ಪರವಾಗಿ ಅನುವಂಶೀಕ ಆಡಳಿತ ಮೊಕ್ತೇಸರ ಶೆಟ್ಟಿಪಾಲ್‌ ಸಚ್ಚಿದಾನಂದ ಚಾತ್ರ ಪ್ರಸಾದ ವಿತರಿಸಿ ಗೌರವಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅನುವಂಶೀಕ ಆಡಳಿತ ಮೊಕ್ತೇಸರ ಶೆಟ್ಟಿಪಾಲ್‌ ಸಚ್ಚಿದಾನಂದ ಚಾತ್ರ ಅವರು, ದೇವಳದ ಭಕ್ತರ, ಅರ್ಚಕರ, ನೌಕರರ ಹಾಗೂ ಸ್ವಯಂ ಸೇವಕರ ಸಹಕಾರದೊಂದಿಗೆ ಈ ಬಾರಿಯ ನವರಾತ್ರಿಯ ಉತ್ಸವ ಯಶಸ್ವಿಯಾಗಿ ಸಂಪನ್ನಗೊಂಡಿದೆ. ಕೊರೊನಾ ಕಾರಣದಿಂದ ಕ್ಷೇತ್ರದ ಪಾರಂಪರಿಕ ಭಕ್ತರಾದ ಬೆಂಗಳೂರಿನ ಭಕ್ತರ ಸಂಖ್ಯೆಯಲ್ಲಿ ಕೊರತೆಯಾಗಿತ್ತು. ಮುಂದಿನ ದಿನಗಳಲ್ಲಿ ಶ್ರೀದೇವಿಯ ಆಶೀರ್ವಾದದಿಂದ ಬೆಂಗಳೂರು ಹಾಗೂ ಇತರ ಭಾಗದ ಭಕ್ತರ ಸಂಕಷ್ಟಗಳು ದೂರಾಗುತ್ತದೆ ಎನ್ನುವ ನಂಬಿಕೆ ಇದೆ. ನವರಾತ್ರಿಯ 9 ದಿನಗಳ ಕಾಲ ತಮ್ಮ ಅಂತಸ್ತು, ಸಾಮಾಜಿಕ ಸ್ಥಾನ–ಮಾನಗಳನ್ನು ಮರೆತು ಅನೇಕ ಭಕ್ತರು ದೇವಿ ಸನ್ನಿಧಿಯಲ್ಲಿ ಎಲ್ಲ ರೀತಿಯ ಸೇವೆ ಸಲ್ಲಿಸಿರುವುದು ಅಭಿನಂದನೀಯ. ಸರ್ಕಾರ ಹೇಳಿರುವ ಕೊರೊನಾ ನಿಯಮಾವಳಿಗಳನ್ನು ಪಾಲಿಸಿಕೊಂಡು ಈ ಬಾರಿಯ ಉತ್ಸವಗಳನ್ನು ನೆರವೇರಿಸಲಾಗಿದೆ ಎಂದರು.

ಕೊರೊನಾ ನಿಯಮಾವಳಿಗಳ ಕಾರಣದಿಂದ ಸರಳವಾಗಿ ಉತ್ಸವ ಆಚರಣೆ ಮಾಡಲಾಗಿದೆ. ಸಂತರ್ಪಣೆ, ಉತ್ಸವ ಹಾಗೂ ಇತರ ಧಾರ್ಮಿಕ ಆಚರಣೆಯ ಸಂದರ್ಭದಲ್ಲಿ ಭಕ್ತರು ನೀಡಿದ ಸಹಕಾರಕ್ಕೆ ನಾವು ಚಿರಋಣಿಯಾಗಿದ್ದೇವೆ. ವಿಶ್ವವನ್ನೆ ಕಾಡುತ್ತಿರುವ ಕೊರೊನಾ ಮಹಾಮಾರಿಯನ್ನು ಶ್ರೀದೇವಿ ದೂರ ಮಾಡಲಿ.
– ಎಸ್‌.ಸಚ್ಚಿದಾನಂದ ಚಾತ್ರ. ಆಡಳಿತ ಧರ್ಮದರ್ಶಿ, ಶ್ರೀ ಕ್ಷೇತ್ರ ಕಮಲಶಿಲೆ.

Comments are closed.