ಕರಾವಳಿ

ಮನೆಗೆ ಸೋಡಾ ಬಾಟಲಿ ಎಸೆದ ಮೂವರು ಕಿಡಿಗೇಡಿಗಳನ್ನು ಬಂಧಿಸಿದ ಗಂಗೊಳ್ಳಿ ಪೊಲೀಸರು..!

Pinterest LinkedIn Tumblr

ಕುಂದಾಪುರ: ಮನೆಯೊಂದಕ್ಕೆ ಸೋಡಾ ಬಾಟಲಿ ಎಸೆದ ಮೂರು ಪುಂಡರನ್ನು ಗಂಗೊಳ್ಳಿ ಪೊಲೀಸರು ಬಂಧಿಸಿದ್ದಾರೆ. ಭಾನುವಾರ ರಾತ್ರಿ ಈ ಕಿಡಿಗೇಡಿಗಳು ಉಡುಪಿ ಜಿಲ್ಲೆ ಗಂಗೊಳ್ಳಿ ಜಾಮೀಯಾ ಮಸೀದಿ ಸಮೀಪದ ಮನೆಗೆ ಬಾಟಲಿ ಎಸೆದು ಕಿಟಕಿ ಗಾಜುಗಳಿಗೆ ಹಾನಿ ಮಾಡಿದ್ದಾರೆ. ಪ್ರಕರಣದ ಸಂಬಂಧ ಗಂಗೊಳ್ಳಿಯ ನಿವಾಸಿಗಳಾದ ಧನುಷ್ (22), ಕಿರಣ್ (23) ಹಾಗೂ ನಿಖಿಲ್ ಬಂಧಿತ ಆರೋಪಿಗಳಾಗಿದ್ದಾರೆ. ಈ ಆರೋಪಿಗಳು ಕುಕ್ರತ್ಯ ನಡೆಸಲು ಆಗಮಿಸಿದ ಬಗ್ಗೆ ಪ್ರಾಥಮಿಕ ತನಿಖೆ ವೇಳೆ ತಿಳಿದುಬಂದಿದೆ ಎಂದು ಪೊಲೀಸ್ ಉನ್ನತ ಮೂಲಗಳು ತಿಳಿಸಿದೆ.

ಭಾನುವಾರ ರಾತ್ರಿ ವೇಳೆ ಬೈಕುಗಳಲ್ಲಿ ಬಂದ ಈ ಯುವಕರು ಇಫ್ತಿಕಾರ್ ಅಹಮ್ಮದ್ ಎನ್ನುವರ ಮನೆ ಕಿಟಕಿ ಗಾಜುಗಳಿಗೆ ಬಾಟಲಿಯಿಂದ ಹಾನಿ ಮಾಡಿದ್ದಾರೆ. ಕೂಡಲೇ ಮನೆಯಿಂದ ಹೊರಗೆ ಬಂದ ಇಪ್ತಿಕಾರ್ ಮನೆಯವರು ಆರೋಪಿಗಳನ್ನು ಗುರುತಿಸಿ ಗಂಗೊಳ್ಳಿ ಪೊಲೀಸರಿಗೆ ದೂರು ನೀಡಿದ್ದು ತಕ್ಷಣ ಕಾರ್ಯೋನ್ಮುಖರಾದ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.

ಕುಂದಾಪುರ ಎಎಸ್ಪಿ ಹರಿರಾಂ ಶಂಕರ್ ಹಾಗೂ ಗಂಗೊಳ್ಳಿ ಪಿಎಸ್ಐ ಭೀಮಾಶಂಕರ್ ಹಾಗೂ ಪೊಲೀಸ್ ಸಿಬ್ಬಂದಿಗಳು ಭೇಟಿ ನೀಡಿ ಪರಿಸ್ಥಿತಿ ತಿಳಿಗೊಳಿಸಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ಸ್ಥಳದಲ್ಲಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.

ಪೊಲೀಸರ ಖಡಕ್ ಎಚ್ಚರಿಕೆ…
ಗಂಗೊಳ್ಳಿಯಲ್ಲಿ ನಿನ್ನೆ ರಾತ್ರಿ ಮನೆಯೊಂದಕ್ಕೆ ಬಾಟಲಿ ಎಸೆದು ಕಿಟಕಿ ಗಾಜು ಪುಡಿಗೈದ ಪ್ರಕರಣವನ್ನು ಪೊಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸಿದ್ದು, ಈಗಾಗಲೇ ಆರೋಪಿಗಳ ಬಂಧನವಾಗಿದೆ. ಇಂದಿನಿಂದ ರಾತ್ರಿ 10 ಗಂಟೆಯ ನಂತರ ವಿನಾಕಾರಣ ತಿರುಗಾಡುವವರ ಮೇಲೆ ನಿರ್ದಾಕ್ಷಿಣ್ಯ ಕ್ರಮಕೈಗೊಳ್ಳಲಾಗುವುದು ಎಂದು ಗಂಗೊಳ್ಳಿ ಠಾಣಾಧಿಕಾರಿ ಇಂದು ಠಾಣೆಯಲ್ಲಿ ನಡೆದ ಸಾರ್ವಜನಿಕ ಶಾಂತಿ ಸಭೆಯಲ್ಲಿ ತಿಳಿಸಿದ್ದು, ಸಾರ್ವಜನಿಕರು ವದಂತಿಗಳಿಗೆ ಕಿವಿಗೊಡದೆ ಶಾಂತಿ ಸುವ್ಯವಸ್ಥೆ ಕಾಪಾಡಲು ಇಲಾಖೆಯೊಂದಿಗೆ ಸಹಕರಿಸಬೇಕೆಂದು ಅವರು ಕೇಳಿಕೊಂಡಿದ್ದಾರೆ.

 

Comments are closed.