ಕುಂದಾಪುರ: . ಕುಂದಾಪುರ ಕ್ಷೇತ್ರದವರು ಅನ್ಯಾಯದ ವಿರುದ್ದ ಎಲ್ಲಿಯೂ ಮಾತನಾಡಬಹುದು. ಬೈಂದೂರು ಕ್ಷೇತ್ರವನ್ನು ಶಾಸಕ ಸುಕುಮಾರ್ ಶೆಟ್ಟರು ಗುತ್ತಿಗೆ ಪಡೆದಿಲ್ಲ. ಅನ್ಯಾಯದ ವಿರುದ್ದ ಮಾತನಾಡುವ, ಮಹಿಳೆಯರ ಮೇಲೆ ಆದ ದೌರ್ಜನ್ಯವನ್ನು ಪ್ರಶ್ನಿಸುವ ಹಕ್ಕನ್ನು ಸಂವಿಧಾನ ನನಗೆ ನೀಡಿದೆ’ ಎಂದು ಕಾಂಗ್ರೆಸ್ ಯುವ ಮುಖಂಡ ವಿಕಾಸ್ ಹೆಗ್ಡೆ ಕಿಡಿಕಾರಿದ್ದಾರೆ. ‘ಕುಂದಾಪುರದವರೆಲ್ಲಾ ಬಂದು ಇಲ್ಲಿ ಭಾಷಣ ಬಿಗಿಯುತ್ತಾರೆ’ ಎಂಬ ಬೈಂದೂರು ಶಾಸಕ ಬಿ.ಎಮ್ ಸುಕುಮಾರ್ ಶೆಟ್ಟಿ ಹೇಳಿಕೆಗೆ ವಿಕಾಸ್ ಹೆಗ್ಡೆ ತಿರುಗೇಟು ನೀಡಿದ್ದಾರೆ.
ವಂಡ್ಸೆ ಸ್ವಾವಲಂಬನಾ ಹೊಲಿಗೆ ತರಬೇತಿ ಕೇಂದ್ರವನ್ನು ಸ್ಥಳಾಂತರಿಸಿದ ಬಗ್ಗೆ ಬುಧವಾರ ಸಿದ್ದಾಪುರದಲ್ಲಿ ನಡೆದ ಪ್ರತಿಭಟನಾ ಸಭೆಯಲ್ಲಿ ಅವರು ಮಾತನಾಡಿದರು.
ಬೈಂದೂರು ಕ್ಷೇತ್ರದಲ್ಲಿ ಅಕ್ರಮ, ಅನಾಚಾರ, ಶಾಸಕರು ಹಾಗೂ ಅವರ ಪಟಾಲಂಗಳು ಗುತ್ತಿಗೆದಾರರಿಗೆ ಹೇಗೆ ಕಿರುಕುಳ ಕೊಡುತ್ತಿದ್ದಾರೆ. ಕಮಿಶನ್ ದಂದೆ ಹೇಗೆ ನಡೆಯುತ್ತಿದೆ ಎಲ್ಲದರ ಬಗ್ಗೆಯೂ ಹಿಂದೆ ನಡೆದಿರುವ ಪ್ರತಿಭಟನೆಯಲ್ಲಿ ಹೇಳಿದ್ದೇನೆ. ಮುಂದೆಯೂ ಹೇಳುವೆ. ಸತ್ಯವನ್ನು ಹೇಳಲು ನನಗೆ ಯಾವುದೇ ಭಯ ಇಲ್ಲ. ನನ್ನ ಹೆಸರಿನ ಬಗ್ಗೆ ಟೀಕಿಸಿದ ಉಮೇಶ್ ಕಲ್ಗೆದ್ದೆಯ ಬಗ್ಗೆ ನಾನು ಮಾತನಾಡಲು ಹೋಗೋದಿಲ್ಲ. ಆತ ಹೇಳಿರುವ ಮಾತಿಗೆ ಸುಕುಮಾರ ಶೆಟ್ಟರಿಗೆ ಉತ್ತರ ಕೊಡುತ್ತೇನೆ. ನನ್ನ ತಂದೆ ನನಗೆ ವಿಕಾಸ್ ಎನ್ನುವ ಒಳ್ಳೆಯ ಹೆಸರನ್ನಿಟ್ಟಿದ್ದಾರೆ. ನಿನ್ನೆ ಆತ ನನ್ನ ಹೆಸರಿನ ಬಗ್ಗೆ ಏನೇ ಹೇಳಿರಬಹುದು. ಈ ದೇಶದ ಪ್ರಧಾನಿ ನನ್ನ ಹೆಸರನ್ನು ಹೇಳಿಕೊಂಡು ರಾಜಕೀಯ ಮಾಡುತ್ತಿದ್ದಾರೆ. ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಎಂದು ಪ್ರಧಾನಿ ಹೇಳುತ್ತಾರೆ. ಆದರೆ ಬೈಂದೂರು ಶಾಸಕರಿಗೆ ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಬೇಡ. ಅವರಿಗೆ ಅವರ ವಿಕಾಸವಾದರೆ ಸಾಕು. ಸುಮಾರು ಮೂವತ್ತೊಂಭತ್ತು ವರ್ಷಗಳಿಂದಲೂ ವಿಕಾಸ್ ಎಂದು ಹೆಸರನ್ನಿಟ್ಟಕೊಂಡು ರಾಜಕೀಯ, ಧಾರ್ಮಿಕ, ಸಾಂಸ್ಕೃತಿಕ, ಶೈಕ್ಷಣಿಕವಾಗಿ ನಾನು ವಿಕಾಸಗೊಂಡಿದ್ದೇನೆ. ಆದರೆ ಸುಕುಮಾರ್ ಎಂದು ಹೆಸರಿಟ್ಟುಕೊಂಡಿರುವ ನೀವು ಇನ್ನೂ ವಿಕಾಸಗೊಂಡಿಲ್ಲ. ಈಗಲೂ ನೀವು ಕುಮಾರನಂತೆಯೇ ಮಕ್ಕಳ ಹಾಗೆಯೇ ವರ್ತಿಸುತ್ತಿದ್ದೀರಿ. ಇನ್ನೂ ನಿಮಗೆ ಬುದ್ದಿ ಬೆಳೆದಿಲ್ಲ. ಬಡವರ, ದೀನದಲಿತರ ಬಗ್ಗೆ ನಿಮಗಿನ್ನೂ ಕಾಳಜಿ ಇಲ್ಲ. ಆದಷ್ಟು ಬೇಗ ನೀವು ವಿಕಾಸಗೊಳ್ಳಿ ಎಂದು ವ್ಯಂಗ್ಯವಾಡಿದರು.
(ಬೈಂದೂರು ಶಾಸಕ ಬಿ.ಎಮ್ ಸುಕುಮಾರ್ ಶೆಟ್ಟಿ)
ಕೊರೋನಾ ಹಿನ್ನೆಲೆ ಈ ದೇಶದ ಆರ್ಥಿಕ ವ್ಯವಸ್ಥೆಯನ್ನು ಸರಿಪಡಿಸಲು ಪ್ರಧಾನಿ ನರೇಂದ್ರ ಮೋದಿ ಆತ್ಮನಿರ್ಭರ ಭಾರತಕ್ಕೆ ಕರೆಕೊಟ್ಟರು. ಆದರೆ ವಂಡ್ಸೆಯಲ್ಲಿ ಆತ್ಮನಿರ್ಭರತೆಗೆ ಒಳಗಾಗಿದ್ದ, ಸ್ವಾಭಿಮಾನದ ಬದುಕು ಕಟ್ಟಿಕೊಳ್ಳುತ್ತಿರುವ ಸುಮಾರು ಎಪ್ಪತ್ತಕ್ಕೂ ಅಧಿಕ ಮಂದಿ ಮಹಿಳೆಯರನ್ನು ಬೀದಿಪಾಲು ಮಾಡಿದ ಗೌರವ ಇದ್ದರೆ ಅದು ಬಿಜೆಪಿ ಶಾಸಕ ಸುಕುಮಾರ ಶೆಟ್ಟಿಯವರಿಗೆ ಸಲ್ಲುತ್ತದೆ. ಭಾಷಣದಲ್ಲಿ ನಾನೊಬ್ಬ ಸನ್ಯಾಸಿ ಎಂದು ಶಾಸಕರು ಹೇಳಿದ್ದಾರೆ. ಆದರೆ ಒಬ್ಬ ಕುಟಂಬಸ್ಥ ಸನ್ಯಾಸಿಯಾಗುವುದು ಹೇಗೆ. ಸನ್ಯಾಸ ದೀಕ್ಷೆ ಅಷ್ಟು ಸುಲಭದಲ್ಲಿ ಸಿಗುವಂಥದಲ್ಲ. ಅದಕ್ಕೆ ಅದರದೆ ಆದ ಗೌರವ, ಪರಿಪಕ್ವತೆ ಇದೆ. ನಾಲ್ಕು ಸರ ಹಾಕಿಕೊಂಡು ಭಾಷಣ ಮಾಡಿದರೆ ಯಾರೂ ಸನ್ಯಾಸಿಯಾಗುವುದಿಲ್ಲ ಎಂದರು.
ನನ್ನದು ಯಾವುದೇ ದೋ ನಂಬರ್ ದಂಧೆ, ಅಕ್ರಮ ವ್ಯವಹಾರ ಇಲ್ಲ. ನನ್ನ ರಾಜಕೀಯ ಜೀವನದಲ್ಲೇ ಇದುವರೆಗೂ ಒಂದೇ ಒಂದು ಕಾಂಟ್ರಾಕ್ಟ್ ಮಾಡಿದವನಲ್ಲ. ಶಾಸಕರ ಕರ್ತವ್ಯವೇನು, ಜನಸಾಮಾನ್ಯರಿಗೆ ಯಾವ ರೀತಿ ಸ್ಪಂದಿಸಬೇಕು ಎಂಬ ಸಾಮಾನ್ಯ ಜ್ಞಾನವೂ ಸುಕುಮಾರ ಶೆಟ್ಟರಿಗೆ ಇಲ್ಲವಾದ್ದರಿಂದ ಇಂತಹ ಎಲ್ಲಾ ಅವ್ಯವಸ್ಥೆಗಳು ಕ್ಷೇತ್ರದಲ್ಲಿ ನಡೆಯುತ್ತಿದೆ. ಸರಣಿ ಸತ್ಯಾಗ್ರವನ್ನು ಹೇಗಾದರೂ ಹತ್ತಿಕ್ಕಬೇಕು. ಇದಕ್ಕೆ ರಾಜಕೀಯ ಬಣ್ಣವನ್ನು ತರಬೇಕು ಎಂಬ ದುರುದ್ದೇಶದಿಂದ ಸುಕುಮಾರ್ ಶೆಟ್ಟರು ನನ್ನ ವಿರುದ್ದ ಅವರ ಪಟಾಲಂಗಳಿಂದ ನಾಣು ವಿಧಾನಸೌಧದ ಏಜೆಂಟ್ ಎಂಬ ಹೇಳಿಕೆಗಳನ್ನು ಕೊಡಿಸಿದ್ದಾರೆ. ನಾನು ಇಲ್ಲಿ ರಾಜಕೀಯ ಮಾಡಲು ಬಂದವನಲ್ಲ. ಈ ಸರಣಿ ಸತ್ಯಾಗ್ರಹ ಸುಕುಮಾರ್ ಶೆಟ್ಟರ ತಲೆಮೇಲೆ ಬಂದು ಕೂತಿದೆ. ಅವರಿಗೆ ಅವರು ಮಾಡಿರುವ ತಪ್ಪಿನ ಅರಿವಾಗುತ್ತಿದೆ. ಶಾಸಕರ ನೆಂಪು ಮನೆಯಿಂದ ವಿಧಾನಸೌಧದವರೆಗೂ ಎಷ್ಟು ಏಜೆಂಟರಿದ್ದಾರೆ ಎನ್ನುವುದನ್ನು ನನ್ನ ಮುಂದಿನ ರಾಜಕೀಯ ಭಾಷಣದಲ್ಲಿ ಉತ್ತರ ಕೊಡುವೆ ಎಂದು ವಿಕಾಸ್ ಹೆಗ್ಡೆ ಎಚ್ಚರಿಸಿದರು.
ಪ್ರತಿಭಟನಾ ಸಭೆಯಲ್ಲಿ ಕಾಂಗ್ರೆಸ್ ಮುಖಂಡರಾದ ಸಂಪಿಗೇಡಿ ಸಂಜೀವ ಶೆಟ್ಟಿ, ತಾ.ಪಂ ಸದಸ್ಯ ವಾಸುದೇವ ಪೈ, ಮುಖಂಡರಾದ ಪ್ರದೀಪ್ ಕುಮಾರ್ ಶೆಟ್ಟಿ ಗುಡಿಬೆಟ್ಟು, ಶರತ್ ಕುಮಾರ್ ಶೆಟ್ಟಿ ಬಾಳಿಕೆರೆ, ಉದಯ್ ಕುಮಾರ್ ಶೆಟ್ಟಿ, ಪ್ರಸನ್ನ ಕುಮಾರ್, ಸಂತೋಷ್ ಶೆಟ್ಟಿ ಬಲಾಡಿ, ಸುದರ್ಶನ್, ದಿನೇಶ್ ಹಳ್ಳಿಹೊಳೆ ಮೊದಲಾದವರು ಇದ್ದರು.
Comments are closed.