
ಕಾರವಾರ(ಸೆ.04): ಕಳೆದ ನಾಲ್ಕೈದು ತಿಂಗಳಿಂದ ರಾಜ್ಯದಲ್ಲಿ ಕೊರೋನಾ ವೈರಸ್ ತೊಂದರೆ ಕೊಟ್ಟಿದ್ದು ಅಷ್ಟಿಷ್ಟಲ್ಲ. ಬಹುತೇಕ ಉದ್ಯಮಗಳು ಕೋವಿಡ್ 19 ಪರಿಣಾಮ ನೆಲ ಕಚ್ಚಿವೆ. ಅದೇ ರೀತಿ ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ಪ್ರಸಿದ್ದವಾದ ಮಲ್ಲಿಗೆ ಪುಷ್ಪೋದ್ಯಮ ಕೂಡ ನಲುಗಿದೆ. ದೇಶ ವಿದೇಶಗಳಿಗೆ ರವಾನೆಯಾಗುತ್ತಿದ್ದ ಭಟ್ಕಳ ಮಲ್ಲಿಗೆ ಈಗ ಅತಂತ್ರ ಸ್ಥಿತಿಯಲ್ಲಿದೆ. ತನ್ನ ಸುವಾಸನೆ ಮೂಲಕ ದೇಶ ವಿದೇಶಗಳಲ್ಲಿ ಪ್ರಸಿದ್ದಿಯಾಗಿರುವ ಭಟ್ಕಳ ಮಲ್ಲಿಗೆ. ಕಳೆದ ನಾಲ್ಕೈದು ತಿಂಗಳಿಂದ ಭಟ್ಕಳದ ಮಲ್ಲಿಗೆ ಬೆಳೆಗಾರರು ಕಂಗಾಲಾಗಿದ್ದಾರೆ. ಜಗತ್ತಿನಲ್ಲಿ ಅಬ್ಬರಿಸುತ್ತಿರುವ ಕೋವಿಡ್ 19ಗೆ ಬಹುತೇಕ ಉದ್ಯಮಗಳು ನೆಲಕಚ್ಚಿವೆ. ಅದೇ ರೀತಿ ಪುಷ್ಪೋದ್ಯಮವನ್ನ ನಂಬಿಕೊಂಡವರು ಕೂಡ ಸಂಕಷ್ಟ ಎದುರಿಸುವಂತಾಗಿದೆ.
ಭಟ್ಕಳದ ಸುಮಾರು 10 ಸಾವಿರ ಕುಟುಂಬಗಳು ಈ ವಿಶಿಷ್ಟ ಪರಿಮಳದ ಮಲ್ಲಿಗೆಯನ್ನ ಬೆಳೆಯುತ್ತಿದ್ದಾರೆ. ಆದರೆ, ಕೊರೋನಾ ವೈರಸ್ ಪರಿಣಾಮವಾಗಿ ಮಲ್ಲಿಗೆ ಬೆಳೆಯನ್ನ ನಂಬಿಕೊಂಡ ಕುಟುಂಬದವರು ಸಂಕಷ್ಟಕ್ಕೀಡಾಗಿದ್ದಾರೆ. ಸಾಮಾನ್ಯವಾಗಿ ಭಟ್ಕಳ ಮಲ್ಲಿಗೆ ದುಬೈ ಸೇರಿದಂತೆ ವಿವಿಧ ರಾಜ್ಯ ಮತ್ತು ರಾಷ್ಟ್ರಗಳಿಗೆ ರವಾನೆಯಾಗುತಿತ್ತು. ಪ್ರತಿನಿತ್ಯ ರೈಲು, ವಿಮಾನದ ಮೂಲಕ ಕಳಿಸಲಾಗುತಿತ್ತು. ವಿದೇಶಗಳಲ್ಲಿ ಬೇಡಿಕೆ ಇದ್ದಿದ್ದರಿಂದ ದರ ಕೂಡ ಉತ್ತಮವಾಗಿ ಸಿಗುತಿತ್ತು. ಆದ್ರೀಗ ರೈಲು, ವಿಮಾನಗಳು ಸೇವೆ ಸ್ಥಗಿತವಾಗಿದ್ದರಿಂದ ಮಲ್ಲಿಗೆಗೆ ಬೇಡಿಕೆ ಕಡಿಮೆಯಾಗಿದೆ. ಅಲ್ಲದೇ ದೇವಾಲಯಗಳಲ್ಲೂ ಕೂಡ ಹೆಚ್ಚಿನ ಸೇವೆಗಳು ಇಲ್ಲದೆ ಇರೋದ್ರಿಂದ ಮಾರುಕಟ್ಟೆಯಲ್ಲಿ ಮಲ್ಲಿಗೆಯನ್ನ ಕೇಳೋರೆ ಇಲ್ಲದ ಹಾಗಾಗಿದೆ.
ಕಳೆದ ಹಲವು ವರ್ಷಗಳಿಂದ ಭಟ್ಕಳದ ಮಣ್ಕುಳಿ, ಮೂಡಭಟ್ಕಳ, ಮುಂಡಳ್ಳಿ, ಹೆಬಳೆ, ಶಿರಾಲಿ, ಬೆಂಗ್ರೆ ಭಾಗದಲ್ಲಿ ರೈತರು ಮಲ್ಲಿಗೆಯನ್ನ ಬೆಳೆಯುತ್ತಾ ಬಂದಿದ್ದಾರೆ. ಒಂದಿಷ್ಟು ಗಿಡ ನಾಟಿ ಮಾಡಿ ಬೆಳೆದ ಮಲ್ಲಿಗೆಗೆ ಲಾಕ್ಡೌನ್ ಸಂದರ್ಭದಲ್ಲಿ ಹೂವು ತೆಗೆಯದೇ ತೊಂದರೆ ಅನುಭವಿಸಿದ್ದಾರೆ. ಗಿಡದಲ್ಲಿಯೇ ಹೂವು ಕೊಳೆತು ಗಿಡ ಕೂಡ ಹಾಳಾಗಿದೆ. ಜೀವನಕ್ಕಾಗಿ ಕೈಹಿಡಿದ ಮಲ್ಲಿಗೆ ಕೃಷಿ ಕೊರೋನಾ ವೈರಸ್ ಅಬ್ಬರದಿಂದಾಗಿ ಕೈ ಬಿಡುವಂತಾಗಿದೆ.
ಸರ್ಕಾರವೇನು ಮಲ್ಲಿಗೆ ಬೆಳೆಗೆ ಪರಿಹಾರ ಘೋಷಿಸಿತ್ತು. ಆದರೆ, ಮನೆಯ ಹತ್ತಿರವೇ ತುಂಡು ಭೂಮಿಯಲ್ಲಿ ಒಂದಿಷ್ಟು ನಾಟಿ ಮಾಡಿದ ಗಿಡದಿಂದಾಗಿ ಪರಿಹಾರ ಪಡೆಯದೇ ಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಸರ್ಕಾರ ಮಲ್ಲಿಗೆ ಬೆಳೆಗಾರರ ಪರಿಸ್ಥಿತಿ ಅವಲೋಕಿಸಿ ಪರಿಹಾರ ನೀಡಬೇಕೆಂದು ಬೆಳೆಗಾರರು ವಿನಂತಿಸುತ್ತಾರೆ.
ಹಬ್ಬ ಜಾತ್ರೆ ಸಂಭ್ರಮ ಇದ್ರೆ ರೈತರು ಬೆಳೆದ ಭಟ್ಕಳ ಮಲ್ಲಿಗೆಗೆ ರಾಜ್ಯದಲ್ಲೆ ಬೇಡಿಕೆ ಇರುತ್ತಿತ್ತು. ಆರಂಭದಲ್ಲೇ ಕೊರೋನಾ ಮಾಹಾಮಾರಿಗೆ ದೇಶ ಲಾಕ್ಡೌನ್ ಆಗಿ ಎಲ್ಲ ಚಟುವಟಿಕೆಗಳಿಗೆ ಬ್ರೇಕ್ ಬಿದ್ರಿಂದ ಮಲ್ಲಿಗೆ ಗಿಡದಲ್ಲೆ ಕೊಳೆಯುವಂತಾಯಿತು. ಈಗ ದೇವಾಲಯದಲ್ಲಿ ಎಲ್ಲ ಕಾರ್ಯಚಟುವಟಿಕೆಗಳನ್ನು ಮಾಡಲು ಅವಕಾಶ ನೀಡಿದ್ದಾರೆ. ಆದ್ರೆ ಕೇವಲ 50 ಮಂದಿ ಮಾತ್ರ ಸೀಮಿತ. ಹೀಗಾಗಿ ಇಲ್ಲಿ ಕೂಡಾ ಭಕ್ತರ ಸಂಖ್ಯೆ ಇಲ್ಲದೆ ಹೂವು ಕೊಳ್ಳುರು ಇಲ್ಲ. ದೇಶ ವಿದೇಶಗಳತ್ತ ಸುವಾಸನೆ ಬೀರಿ ರೈತರ ಹೊಟ್ಟೆ ತುಂಬಿಸುತ್ತಿದ್ದ ಭಟ್ಕಳ ಮಲ್ಲಿಗೆ ಈಗ ಭಟ್ಕಳದಲ್ಲೂ ಕೂಡ ಮಾರಾಟಕ್ಕೆ ಹಿಂಜರಿತ ಕಂಡುಬರುತ್ತಿದೆ.
Comments are closed.