ಕರಾವಳಿ

ಕಾರ್ಕಳದಲ್ಲಿ‌ ಜವರಾಯನ ಅಟ್ಟಹಾಸ: ಪ್ರವಾಸಕ್ಕೆಂದು ಬಂದವರು ಮಸಣ ಸೇರಿದರು

Pinterest LinkedIn Tumblr

ಉಡುಪಿ: ಕಾರ್ಕಳ ತಾಲೂಕಿನ ಮಾಳ ಗ್ರಾಮದ ಮುಳ್ಳೂರು ಘಾಟ್‌ ಬಳಿ ಪ್ರವಾಸಿ ಬಸ್ಸೊಂದು ಬಂಡೆಗೆ ಢಿಕ್ಕಿ ಹೊಡದ ಪರಿಣಾಮ 9 ಮಂದಿ ಪ್ರಯಾಣಿಕರು ಸ್ಥಳದಲ್ಲೇ ಮೃತಪಟ್ಟ ಘಟನೆ ಶನಿವಾರ ಸಂಜೆ 5:35ರ ವೇಳೆ ನಡೆದಿದೆ.

ಮೈಸೂರಿನ ಸೆಂಚುರಿ ವೈಟಲ್‌ ರೆಕಾರ್ಡ್ಸ್‌ ಕಂಪನಿಯ ಸುಮಾರು 35 ಮಂದಿ ಸಿಬ್ಬಂದಿ ಮೈಸೂರಿನಿಂದ ಹೊರನಾಡು, ಕುದುರೆಮುಖವಾಗಿ ಮಲ್ಪೆ ಬೀಚ್ ಗೆ ಬರುತ್ತಿದ್ದರೆನ್ನಲಾಗಿದೆ. ಇದೊಂದು‌ ಪ್ರವಾಸವಾಗಿತ್ತೆನ್ನುವ ಮಾಹಿತಿಯಿದೆ. ಬಸ್ ಮಾಳ ಎಸ್‌ಕೆ ಬಾರ್ಡರ್‌ ಸಮೀಪದ ಮುಳ್ಳೂರು ಘಾಟ್‌ ಬಳಿ ಬಂಡೆ ಕಲ್ಲಿನಿಂದ ಆವೃತ್ತವಾಗಿದ್ದ ಧರೆಗೆ ಬಸ್‌(ಕೆಎ 01, ಎಸಿ 4960) ಢಿಕ್ಕಿ ಹೊಡೆದಿದ್ದು, ಢಿಕ್ಕಿಯ ರಭಸಕ್ಕೆ 3 ಮಹಿಳೆಯರು ಸೇರಿದಂತೆ ಒಟ್ಟು 9 ಮಂದಿ ಮೃತಪಟ್ಟಿದ್ದರು.

ಕಂಪೆನಿ‌ ಉದ್ಯೋಗಿಗಳಾದ ರಾಧರವಿ (22), ಯೋಗೀಂದ್ರ (21), ಪ್ರೀತಂ ಗೌಡ (21) ಬಸವರಾಜ್‌ (22), ಅನಘ್ನಾ (20), ಶರಿಲ್‌ (21), ರಂಜಿತಾ ಪಿ. (21) ಚಾಲಕ, ಅಡುಗೆ ಸಿಬ್ಬಂದಿ ಸೇರಿದಂತೆ ಒಟ್ಟು 9 ಮಂದಿ ಮೃತಪಟ್ಟಿದ್ದು 31 ಮಂದಿ ಗಾಯಗೊಂಡಿದ್ದಾರೆ.‌ ಗಾಯಾಳುಗಳ ಪೈಕಿ 12 ಮಂದಿ ಕಾರ್ಕಳ ಸರಕಾರಿ ಆಸ್ಪತ್ರೆಯಲ್ಲಿ, 13 ಮಂದಿ ಕಾರ್ಕಳ ಸಿಟಿ ಆಸ್ಪತ್ರೆ ಹಾಗೂ 5 ಮಂದಿ ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದುಬಂದಿದೆ.

ಮೃತರ ಹಾಗೂ ಗಾಯಾಳುಗಳ ಕುಟುಂಬಿಕರು‌ ಈಗಾಗಾಲೇ ಉಡುಪಿಗೆ ಆಗಮಿಸುತ್ತಿದ್ದು ಇಂದು ಮೃತರ ಮರಣೋತ್ತರ ಪರೀಕ್ಷೆ ನಡೆಯಲಿದೆ.

ಉಡುಪಿ ಎಸ್ಪಿ ವಿಷ್ಣುವರ್ದನ್ ಸೇರಿದಂತೆ ಪೊಲೀಸರ ತಂಡ ಅಪಘಾತದ ಕುರಿತು ತನಿಖೆ ನಡೆಸುತ್ತಿದ್ದಾರೆ. ಬಸ್ ತಾಂತ್ರಿಕ ದೋಷದಿಂದ ಅಪಘಾತ ಸಂಭವಿಸಿತೇ ಅಥವಾ ಚಾಲಕನ ಅಜಾಗರುಕತೆಯಿಂದ ಅಪಘಾತ ಸಂಭವಿಸಿತೇ ಅನ್ನುವುದು ತನಿಖೆಯಿಂದ ಬೆಳಕಿಗೆ ಬರಬೇಕಿದೆ.

Comments are closed.