ಕರಾವಳಿ

ನೀರಿಲ್ಲ, ಶೌಚಾಲಯವಿಲ್ಲ…ತ್ಯಾಜ್ಯದ ದುರ್ನಾತದಲ್ಲಿ ಕೂರೋಕಾಗಲ್ಲ: ಬಸ್ ಚಾಲಕ-ನಿರ್ವಾಹಕರ ಪರದಾಟ!

Pinterest LinkedIn Tumblr

ಕುಂದಾಪುರ: ಬೆಳೆಯುತ್ತಿರುವ ಕುಂದಾಪುರ ನಗರಕ್ಕೆ ಮಾರಕವಾಗಿರುವುದೇ ಟ್ರಾಫಿಕ್ ಸಮಸ್ಯೆ. ಸದ್ಯ ಕುಂದಾಪುರದ ಆಡಳಿತ ವ್ಯವಸ್ಥೆಯಲ್ಲಿರುವ ಅಧಿಕಾರಿಗಳು ಟ್ರಾಫಿಕ್ ಅವ್ಯವಸ್ಥೆಗೆ ಮುಕ್ತಿ ಕಾಣಿಸುವ ಪ್ರಯತ್ನಕ್ಕೆ ಮುಂದಾಗಿದ್ದು ಅಲ್ಲಿ ಒಂದಷ್ಟು ಸಮಸ್ಯೆ, ಗೊಂದಲ ಉಂಟಾಗಿದೆ. ಈ ಬಗ್ಗೆ ಒಂದು ಸ್ಟೋರಿಯಿಲ್ಲಿದೆ.

 

ಅತೀ ವೇಗದಲ್ಲಿ ಬೆಳೆಯುತ್ತಿರೋ ಉಡುಪಿ ಜಿಲ್ಲೆಯ ತಾಲೂಕುಗಳ ಪೈಕಿ ಕುಂದಾಪುರ ಮುಂಚೂಣಿಯಲ್ಲಿದೆ. ನಗರದ ಹೊರಭಾಗಕ್ಕೆ ಬಂದರೆ ಹತ್ತು ವರ್ಷದಿಂದ ನಡೆಯುತ್ತಿರೋ ಫ್ಲೈ ಓವರ್ ಕಾಮಗಾರಿ ದ್ರಷ್ಟಿ ಬೊಂಬೆಯಾದರೆ….ನಗರದೊಳಕ್ಕೆ ಪ್ರವೇಶಿಸದರೆ ಕಿಲೋಮೀಟರ್ ಉದ್ದಕ್ಕೂ ಟ್ರಾಫಿಕ್ ಅವ್ಯವಸ್ಥೆ ನಿತ್ಯವೂ ಕಣ್ಣಿಗೆ ರಾಚುತ್ತೆ. ಅಲ್ಲಲ್ಲಿ ನಿಲ್ಲಿಸುವ ಕಾರು, ಬೈಕು ಮೊದಲಾದ ವಾಹನಗಳು ಕರ್ಕಷ ಹಾರ್ನ್, ಅತೀ ವೇಗದ ಚಾಲನೆ ನಗರದೊಳಗೆ ಕಂಡುಬರುವುದು ಒಂದೆಡೆಯಾದರೆ ಇತ್ತೀಚೆಗೆ ಹೊಸ ಬಸ್ ನಿಲ್ದಾಣ ಸಮೀಪದಲ್ಲಿ ಬಸ್ಸುಗಳ ಒತ್ತಡದಿಂದ ಹಲವು ಮೀಟರುಗಳ ದೂರ ಟ್ರಾಫಿಕ್ ಜಾಮ್ ಸಮಸ್ಯೆಯಿಂದ ನಿತ್ಯ ಪ್ರಯಾಣಿಕರು ಕಂಗಾಲಾಗಿ ಹೋಗಿದ್ದಾರೆ.

ಬಸ್ಸುಗಳನ್ನು ಕುಂದಾಪುರ ಫೆರ್‍ರಿ ರಸ್ತೆಯಲ್ಲಿನ ಪಾರ್ಕ್ ಬಳಿಯ ಖಾಲಿ ಜಾಗದಲ್ಲಿ ಪಾರ್ಕಿಂಗ್ ಮಾಡಲು ಅಧಿಕಾರಿಗಳು ಸೂಚಿಸಿದ್ದು ಯಾವುದೇ ಮೂಲಭೂತ ಸೌಕರ್ಯವೂ ಇಲ್ಲದೇ ಬಸ್ ಚಾಲಕ ನಿರ್ವಾಹಕರು ಹೈರಾಣಾಗಿದ್ದಾರೆ. ಒಂದೆಡೆ ಯಾರ್‍ಯಾರೋ ತಂದು ಹಾಕುವ ಕಸದ ರಾಶಿಯ ಗಬ್ಬು ನಾತ…. ಶೌಚಾಲಯಕ್ಕೂ ವ್ಯವಸ್ಥೆಯಿಲ್ಲ….ಬಸ್ಸು ಬಂದು ಹೋಗುವ ಮಾರ್ಗ ಮತ್ತು ನಿಲ್ಲಿಸುವ ಜಾಗದಲ್ಲಿ ದೂಳಿನಿಂದ ಅನಾರೋಗ್ಯ ಭೀತಿಯಲ್ಲಿ ಅವರಿದ್ದಾರೆ. ಅಷ್ಟೇ ಅಲ್ಲ ಊಟ ಉಪಹಾರಕ್ಕೂ ಯಾವುದೇ ಸೂಕ್ತ ವ್ಯವಸ್ಥೆಯಿಲ್ಲದೇ ನೀರು ನೆರಳಿಲ್ಲದೇ ಅತಂತ್ರರಾಗಿದ್ದೇವೆ ಅಂತಾರೆ ಡ್ರೈವರ್ ಮತ್ತುಕಂಡಕ್ಟರ್ ಗಳು.

(ಕುಂದಾಪುರ ಹೊಸ ಬಸ್ಸು ನಿಲ್ದಾಣ)

ಹೇಳಿಕೇಳಿ ಕುಂದಾಪುರ ಹೊಸ ಬಸ್ಸು ನಿಲ್ದಾಣ ಭಾಗದಲ್ಲಿ ಮಿನಿ ವಿಧಾನ ಸೌಧ, ಕೋರ್ಟ್, ತಾಲ್ಲೂಕು ಕಚೇರಿ, ಪೊಲೀಸ್ ಠಾಣೆಗಳು ಇದ್ದಿರುವ ಕಾರಣ ನಿತ್ಯ ಸಾವಿರಾರು ನಾಗರಿಕರು ಬಸ್ಸು ಪ್ರಯಾಣಿಕರಾಗಿ ಇಲ್ಲಿಗೆ ಬರುತ್ತಾರೆ. ಆದರೆ ಇತ್ತೀಚೆಗೆ ಮಾತ್ರ ಇಲ್ಲಿ ಬಸ್ಸು ನಿಲ್ದಾಣದಲ್ಲಿ ಒಂದಷ್ಟು ಬಸ್ಸುಗಡೆಯಲ್ಲೆನೋ ಅವ್ಯವಸ್ಥೆಯಾಗಿದ್ದು ಟ್ರಾಫಿಕ್ ಜಾಮ್ ಹೆಚ್ಚಿದೆ. ಅಲ್ಲದೇ ಕೆಲವು ಬಸ್ಸುಗಳು ಗಂಟೆಗಟ್ಟಲೇ ನಿಲ್ಲುವ ಕಾರಣಕ್ಕೆ ವಿದ್ಯಾರ್ಥಿಗಳು ಹಾಗೂ ಪ್ರೇಮಿಗಳ ಸೋಗಿನಲ್ಲಿ ಬರುವ ಯುವಕ ಯುವತಿಯರು ಅನೈತಿಕ ಚಟುವಟಿಕೆಗಳನ್ನು ನಡೆಸುತ್ತಿದ್ದ ಬಗ್ಗೆ ಇಲಾಖೆಗೆ ಮಾಹಿತಿ ಬಂದಿದ್ದು ಅವಧಿ ಮೀರಿ ನಿಲ್ಲುವ ಬಸ್ಸುಗಳನ್ನು ಇನ್ನೊಂದು ಸ್ಥಳದಲ್ಲಿ ನಿಲ್ಲಿಸಲು ಪೊಲೀಸರು , ಕುಂದಾಪುರ ಉಪವಿಭಾಗಾಧಿಕಾರಿಗಳು ಹಾಗೂ ಪುರಸಭೆಯವರ ಮುತುವರ್ಜಿಯಲ್ಲಿ ವ್ಯವಸ್ಥೆ ಕಲ್ಪಿಸಲಾಗಿದೆ. ಹೊಸ ನಿಲ್ದಾಣದಲ್ಲಿ ಭದ್ರತೆ ದ್ರಷ್ಟಿಯಲ್ಲಿ ನಾಲ್ಕು ಸಿಸಿಟಿವಿ ಅಳವಡಿಕೆ ಮಾಡಲಾಗುತ್ತದೆ. ಹೊಸ ವ್ಯವಸ್ಥೆ ಮಾಡುವಾಗ ಸಾಮಾನ್ಯವಾಗಿ ಸಮಸ್ಯೆ ಇರಲಿದ್ದು, ಅದೆಲ್ಲವನ್ನೂ ಪರಿಹಾರ ಮಾಡಲಾಗುತ್ತದೆ. ಕುಂದಾಪುರದಲ್ಲಿ ಟ್ರಾಫಿಕ್ ಸಮಸ್ಯೆ ಪರಿಹಾರದ ದೊಡ್ಡ ಬದಲಾವಣೆಗೆ ಹೆಜ್ಜೆ ಇಟ್ಟಿದ್ದು, ಎಲ್ಲವೂ ಕೂಡ ಸರಿಪಡಿಸುತ್ತೇವೆ ಎನ್ನುತ್ತಾರೆ ಕುಂದಾಪುರ ಎಎಸ್ಪಿ ಹರಿರಾಂ ಶಂಕರ್.

ಬಸ್ಸುಗಳನ್ನು ಶಿಪ್ಟ್ ಮಾಡಿದ ಸ್ಥಳಕ್ಕೆ ಇಂಟರ್‌ಲಾಕ್ ಅಳವಡಿಕೆ, ಧೂಳು ಸಮಸ್ಯೆಗೆ ಪರಿಹಾರ ಸೇರಿದಂತೆ ಮೂಲ ಸೌಕರ್ಯ ವ್ಯವಸ್ಥೆ ಶೀಘ್ರವಾಗಿ ಆಗಬೇಕಿದೆ ಅನ್ನೋದು ಬಸ್ಸಿನವರ ಒತ್ತಾಯ. ಶೀಘ್ರವೇ ಸಮಸ್ಯೆ ಪರಿಹಾರ ಮಾಡುವ ಪ್ರಯತ್ನ ಮಾಡಲಾಗುತ್ತದೆ ಅನ್ನೋದು ಅಧಿಕಾರಿಗಳ ಭರವಸೆ. ಒಟ್ಟಿನಲ್ಲಿ ಎಲ್ಲವೂ ಸಸೂತ್ರವಾಗಿ ನಡೆದರೆ ಟ್ರಾಫಿಕ್ ಕಿರಿಕಿರಿ ಮುಕ್ತ ಕುಂದಾಪುರ ಆಗುತ್ತೆ ಅನ್ನೋದು ಜನರ ಅಭಿಪ್ರಾಯ.

(ವರದಿ- ಯೋಗೀಶ್ ಕುಂಭಾಸಿ)

Comments are closed.