ಕರಾವಳಿ

ಪೇಜಾವರ ಶ್ರೀ ಪಾರ್ಥಿವ ಶರೀರ ಉಡುಪಿಯಿಂದ ಹೆಲಿಕಾಪ್ಟರ್ ಮೂಲಕ ಬೆಂಗಳೂರಿಗೆ ರವಾನೆ

Pinterest LinkedIn Tumblr

ಉಡುಪಿ: ಪೇಜಾವರ ಮಠದ ಹಿರಿಯ ಯತಿ ಶ್ರೀವಿಶ್ವೇಶ ತೀರ್ಥರ ಪಾರ್ಥಿವ ಶರೀರವನ್ನು ಭಾರತೀಯ ವಾಯು ಸೇನೆಯ ಹೆಲಿಕಾಪ್ಟರ್ ಮೂಲಕ ಭಾನುವಾರ ಮಧ್ಯಾಹ್ನ ಬೆಂಗಳೂರಿಗೆ ರವಾನಿಸಲಾಯಿತು.

ಸಕಲ ಸರ್ಕಾರಿ ಗೌರವ….
ಇದಕ್ಕೂ ಮೊದಲು ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿಯ ಪಾರ್ಥಿವ ಶರೀರಕ್ಕೆ ಅಜ್ಜರಕಾಡು ಮೈದಾನದಲ್ಲಿ ರಾಷ್ಟ್ರಗೀತೆ ನುಡಿಸಿ, ಕುಶಾಲತೋಪು ಹಾರಿಸಿ ಸಕಲ ಸರ್ಕಾರಿ ಗೌರವವನ್ನು ಅರ್ಪಿಸಲಾಯಿತು. ಪೊಲೀಸ್ ಬ್ಯಾಂಡ್ ಮೂಲಕ ರಾಷ್ಟ್ರಗೀತೆ ನುಡಿಸಿ ಶ್ರೀಗಳಿಗೆ ಸಕಲ ಸರ್ಕಾರಿ ಗೌರವ ನೀಡಲಾಯಿತು.

ಶ್ರೀಗಳ ಪಾರ್ಥಿವ ಶರೀರಕ್ಕೆ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ತ್ರಿವರ್ಣ ಧ್ವಜ ಹೊದಿಸಿ ಗೌರವ ಅರ್ಪಿಸಿದರು. ಈ ಸಂದರ್ಭದಲ್ಲಿ ಶಾಸಕ ರಘಪತಿ ಭಟ್, ಸಚಿವ ಬಸವರಾಜ್ ಬೊಮ್ಮಾಯಿ ,ಸಂಸದೆ ಶೋಭಾ ಕರಂದ್ಲಾಜೆ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಕಾರ್ಕಳ ಶಾಸಕ ಸುನೀಲ್ ಕುಮಾರ್, ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಸೇರಿದಂತೆ ಹಲವು ಗಣ್ಯರು ಶ್ರೀಗಳ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದರು.

ಅಜ್ಜರಕಾಡು ಮೈದಾನದಲ್ಲಿ ಸಾರ್ವಜನಿಕ ದರ್ಶನದ ಬಳಿಕ ಪಾರ್ಥಿವ ಶರೀರವನ್ನು ವಿಶೇಷ ಆ್ಯಂಬುಲೆನ್ಸ್‌ನಲ್ಲಿಟ್ಟು ಆದಿ ಉಡುಪಿ ಹೆಲಿಪ್ಯಾಡ್‌ಗೆ ಬಿಗುಭದ್ರತೆಯಲ್ಲಿ ತರಲಾಯಿತು.

ಅಲ್ಲಿ ಅಲಂಕೃತವಾದ ಮರದ ಪೆಟ್ಟಿಗೆಯಲ್ಲಿ ಶ್ರೀಗಳ ಪಾರ್ಥಿವ ಶರೀರವನ್ನು ಇಡಲಾಯಿತು. ಬಳಿಕ ಹೆಲಿಕಾಪ್ಟರ್‌ನಲ್ಲಿ ಸುರಕ್ಷಿತವಾಗಿ ಇಡಲಾಯಿತು. ಸಂಸದೆ ಶೋಭಾ ಕರಂದ್ಲಾಜೆ, ಶಾಸಕ ರಘುಪತಿ ಭಟ್, ಮಠದ ದಿವಾನರು ಹಾಗೂ ಆಪ್ತರು ಬೆಂಗಳೂರಿಗೆ ತೆರಳಿದ್ದರು.

ಬೆಂಗಳೂರಿನ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಸಂಜೆ 5ಗಂಟೆವರೆಗೆ ಸಾರ್ವಜನಿಕರಿಗೆ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ಅವಕಾಶ ನೀಡಲಾಗಿದೆ.

Comments are closed.