ಕುಂದಾಪುರ: ಕೊಲ್ಲೂರು ವನ್ಯಜೀವಿ ವಲಯ ವ್ಯಾಪ್ತಿಗೆ ಒಳಪಡುವ ಆಲೂರು ಗ್ರಾಮದ ಕಳಿ ಎಂಬಲ್ಲಿ ಹಳ್ಳ (ತೊರೆಯಲ್ಲಿ) ಆಮೆ ಮತ್ತು ಕೂಮಗಳನ್ನು ಹಿಡಿದು ಕೊಲ್ಲಲು ಪ್ರಯತ್ನಿಸುತ್ತಿದ್ದ ವೇಳೆ ರಾಸ್ತಿ ಗಸ್ತಿನಲ್ಲಿದ್ದ ಕೊಲ್ಲೂರು ವನ್ಯಜೀವಿ ಇಲಾಖೆಯ ಅಧಿಕಾರಿ ಹಾಗೂ ಸಿಬ್ಬಂದಿಗಳು ಮೂವರು ಆರೋಪಿಗಳನ್ನು ಬಂಧಿಸಿದ ಘಟನೆಯು ಡಿ.೩ ಮಂಗಳವಾರ ಬೆಳಿಗ್ಗೆ ನಡೆದಿದೆ.
ಕೊಲ್ಲೂರಿನ ನಿವಾಸಿಗಳಾದ ಶೀನ ಕೊರಗ (38), ಚಂದ್ರ (38), ಇನ್ನೋರ್ವನನ್ನು ಬಂಧಿಸಲಾಗಿದೆ. ಬಂಧಿತರಿಂದ ಬೈಕ್ ವಶಕ್ಕೆ ಪಡೆಯಲಾಗಿದೆ.
ಘಟನೆ ವಿವರ: ಮಂಗಳವಾರ ಮುಂಜಾನೆ ಕೊಲ್ಲೂರು ವನ್ಯ ಜೀವಿ ವಿಭಾಗದ ಅಧಿಕಾರಿಗಳು ಗಸ್ತಿನಲ್ಲಿದ್ದು ಈ ಸಂದರ್ಭ ರಸ್ತೆ ಪಕ್ಕ ನಿಂತಿದ್ದ ಬೈಕ್ ಕಂಡು ಅನುಮಾನಗೊಂಡು ಸುತ್ತಮುತ್ತ ಪರಿಶೀಲಿಸಿದಾಗ ಮೂವರು ಆರೋಪಿಗಳು ತೊರೆಯಲ್ಲಿ ಆಮೆ ಹಿಡಿದು ಹತ್ಯೆ ಮಾಡಲು ಯತ್ನಿಸಿದ್ದು ಕಂಡುಬಂದಿದ್ದು ಮೂವರನ್ನು ಹಿಡಿದು ತಪಾಸಣೆ ಮಾಡಿದ್ದಾರೆ. ಈ ವೇಳೆ ಒಟ್ಟು 35 ಆಮೆ ಹಾಗೂ ಕೂಮಗಳು ಸಿಕ್ಕಿದ್ದು 9 ಆಮೆ , 26 ಕೂಮ (ಇಂಡಿಯನ್ ಬ್ಲಾಕ್ ಟರ್ಟಲ್) ವಶಕ್ಕೆ ಪಡೆಯಲಾಗಿದೆ. ಆರೋಪಿಗಳು ಮಾಂಸ ಮಾಡಿ ತಿನ್ನಲು ಇದನ್ನು ಹಿಡಿಯುತ್ತಿದ್ದರೆಂಬುದು ಪ್ರಾಥಮಿಕ ವಿಚಾರಣೆ ವೇಳೆ ತಿಳಿದುಬಂದಿದೆ.
ಸಂರಕ್ಷಣೆ ಪ್ರಾಣಿಗಳಿವು….
ವಶಪಡಿಸಿಕೊಂಡ ಆಮೆಗಳು ಶೆಡ್ಯೂಲ್1 ಭಾಗ 2ರ ಪ್ರಕಾರ ಹೆಚ್ಚಿನ ಸಂರಕ್ಷಣೆಯಿರುವ ಜೀವಿಯಾಗಿದೆ. ಇದನ್ನು ಹಿಡಿಯುವುದು ಮತ್ತು ಹತ್ಯೆ ಮಾಡುವುದು ವನ್ಯಜೀವಿ ಸಂರಕ್ಷಣೆ ಕಾಯ್ದೆಯನ್ವಯ ಅಪರಾಧವೂ ಆಗಿದೆ. ಆರೋಪಿಗಳ ವಿರುದ್ಧ ವನ್ಯಜೀವಿ ಸಂರಕ್ಷಣೆ ಕಾಯ್ದೆ 1972 ಪ್ರಕಾರ ಪ್ರಕರಣ ದಾಖಲಿಸಿ ಕುಂದಾಪುರ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ಅರಣ್ಯ ಇಲಾಖೆಯ ವಲಯ ಅರಣ್ಯಾಧಿಕಾರಿ ರಾಘವೇಂದ್ರ ಗಣಪತಿ ನಾಯ್ಕ್ ಅವರ ನಿರ್ದೇಶನದಲ್ಲಿ ಉಪ ವಲಯಾರಣ್ಯಾಧಿಕಾರಿಗಳಾದ ದಯಾನಂದ ಕೆ, ಸಿದ್ದೇಶ್ವರ ಕುಂಬಾರ, ಅರಣ್ಯ ರಕ್ಷಕರಾದ ವಿವೇಕ್, ದೇವಿ ಪ್ರಸಾದ್ ಹಾಗೂ ಇಡೂರು ಕಳ್ಳಬೇಟೆ ತಡೆ ಶಿಬಿರದ ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿದ್ದರು.
(ವರದಿ- ಯೋಗೀಶ್ ಕುಂಭಾಸಿ)
Comments are closed.