ಕರಾವಳಿ

ಕುಂದಾಪುರ ಎಪಿ‌ಎಂಸಿ ಯಾರ್ಡ್ ಬಳಿ ಹೆದ್ದಾರಿ ಅಸಮರ್ಪಕ ಕಾಮಗಾರಿ ವಿರುದ್ಧ  ಪ್ರತಿಭಟನೆ

Pinterest LinkedIn Tumblr

ಕುಂದಾಪುರ: ಕುಂದಾಪುರ ಎಪಿಎಂಸಿ ಎದುರು ರಾಷ್ಟ್ರೀಯ ಹೆದ್ದಾರಿ ಅವ್ಯವಸ್ಥೆ ವಿರುದ್ಧ ಶುಕ್ರವಾರ ಸಂಜೆ ಎಪಿ‌ಎಂಸಿ ಪ್ರಾಂಗಣದ ಎದುರು ಪ್ರತಿಭಟನೆ ನಡೆಯಿತು.

ಉಡುಪಿ ಜಿಲ್ಲಾಧಿಕಾರಿಗಳು ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಸಮಸ್ಯೆ ಕುರಿತು ಹಲವು ಬಾರಿ ಪತ್ರ ಬರೆಯಲಾಗಿದೆ. ಯಾವುದೇ ಸ್ಪಂದನೆ ಬಾರದ ಹಿನ್ನೆಲೆ ಸದ್ಯ ಹೋರಾಟ ಅನಿವಾರ್ಯವಾಗಿದೆ.  ಪಾದಚಾರಿಗಳಿಗೆ ರಸ್ತೆ ದಾಟಲು ಮೇಲ್ ಸೇತುವೆ ನಿರ್ಮಿಸಬೇಕು.  ವಾಹನಗಳು ಎಪಿ‌ಎಂಸಿ ಪ್ರಾಂಗಣದೊಳಗೆ ಬರಲು ರಸ್ತೆ ವಿಭಾಜಕ ಬೇಕು. ಬೈಂದೂರು, ಕುಂದಾಪುರ ಕಡೆಯಿಂದ ಸಂತೆಗೆ ಬರುವವರಿಗೆ ಬಸ್ ಇಳಿಯಲು ವ್ಯವಸ್ಥೆಯಿಲ್ಲದ ಕಾರಣ ಸುಸಜ್ಜಿತ ಬಸ್ ಬೇ ಬೇಕು. ಹೆದ್ದಾರಿಗೆ ಅಳವಡಿಸಿದ ಸರಳಿನ ಗೇಟ್ ತೆಗೆಯಬೇಕು ಎಂದು  ಎಪಿ‌ಎಂಸಿ ಅಧ್ಯಕ್ಷ ಶರತ್‌ಕುಮಾರ್ ಶೆಟ್ಟಿ ಹೇಳಿದರು.

ಎಪಿಎಂಸಿ ಉಪಾಧ್ಯಕ್ಷ ಗಣೇಶ್ ಶೇರೆಗಾರ್ ಮಾತನಾಡಿ, ವಾರದ ಸಂತೆ ನಡೆಯುವ ಈ ಪ್ರಾಂಗಣದಲ್ಲಿ ಮಳೆಗಾಲದಲ್ಲಿ ಮೊಣಕಾಲೆತ್ತರ ನೀರು ನಿಲ್ಲುತ್ತದೆ. ಚರಂಡಿ ವ್ಯವಸ್ಥೆ ಅಸಮರ್ಪಕವಾಗಿದೆ. ಆದರೂ ಜನಪ್ರತಿನಿಧಿಗಳು ಸಮಸ್ಯೆಗೆ ಸಕಾರಾತ್ಮಕವಾಗಿ ಸ್ಪಂದಿಸುವುದೇ ಇಲ್ಲ ಎಂದರು.

ಬೈಂದೂರಿನಿಂದ ಉಡುಪಿವರೆಗೆ ದಿನಕ್ಕೊಂದು ಸಾವು ಸಂಭವಿಸುವ ಅಪಘಾತಗಳು ನಡೆಯುವಷ್ಟರ ಮಟ್ಟಿಗೆ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯು ಅವ್ಯವಸ್ಥೆಯಿಂದ ಕೂಡಿದೆ. ಜನರ ಅಹವಾಲನ್ನು ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಆಲಿಸುತ್ತಿಲ್ಲ. ಅಧಿಕಾರಿಗಳು ಸ್ಪಂದಿಸಿದರೂ ಸಮಸ್ಯೆ ನಿವಾರಿಸಬಹುದು ಎಂದು ಪುರಸಭೆ ಮಾಜಿ ಉಪಾಧ್ಯಕ್ಷ ರಾಜೇಶ್ ಕಾವೇರಿ ಹೇಳಿದರು.

ನ್ಯಾಯವಾದಿ ವಿಕಾಸ್ ಹೆಗ್ಡೆ ಮಾತನಾಡಿ, ಜನಪ್ರತಿನಿಧಿಗಳು ನಿಷ್ಕ್ರಿಯರಾದರೆ ಇಂತಹ ಸಮಸ್ಯೆ ಜಟಿಲವಾಗುತ್ತದೆ. ಚುನಾವಣೆ ಬಂದಾಗ ಜನರ ಬಳಿ ಮತ ಕೇಲಲು ಬರುವ ಮಂದಿ ಜನರ ಸಮಸ್ಯೆಗಳ ಪರಿಹಾರಕ್ಕೆ ಮುಂಗಾದಬೇಕು ಎಂದರು.

ಪ್ರತಿಭಟನಕಾರರ ಮನವಿ ಸ್ವೀಕರಿಸಿದ ಮಾತನಾಡಿದ ಕುಂದಾಪುರ ಉಪವಿಭಾಗಾಧಿಕಾರಿ ಕೆ. ರಾಜು, ಐ‌ಆರ್‌ಬಿ ಕಂಪನಿಯವರನ್ನು ಕರೆಸಿ ನಕ್ಷೆ ನೋಡಿ, ರಸ್ತೆ ಕುರಿತು ಪೊಲೀಸರಿಂದ ವರದಿ ತರಿಸಿ, ಪಾದಚಾರಿ ಮೇಲ್ಸೇತುವೆ ನಿರ್ಮಾಣಕ್ಕೆ ಬರೆಯುತ್ತೇನೆ  ಎಂದರು.

ಎಪಿ‌ಎಂಸಿ ನಿರ್ದೇಶಕರಾದ ಸಂತೋಷ್ ಕುಮಾರ್ ಶೆಟ್ಟಿ ಬಲ್ಲಾಡಿ, ವಸಂತ ಶೆಟ್ಟಿ, ದೇವರಾಯ ಕಾಮತ್, ಪುರಸಭೆ ಸದಸ್ಯರಾದ ದೇವಕಿ ಸಣ್ಣಯ್ಯ, ಅಬು ಮಹಮ್ಮದ್, ಕೆ.ಜಿ. ನಿತ್ಯಾನಂದ, ಸಂದೀಪ್ ಖಾರ್ವಿ, ಸ್ಥಳೀಯರಾದ ಸುರೇಂದ್ರ ಕಾಂಚನ್‌ ಸಂಗಮ್‌ ಮೊದಲಾದವರು ಇದ್ದರು.

ಕುಂದಾಪುರ ಪಿಎಸ್ಐ ಹರೀಶ್ ಆರ್. ಹಾಗೂ ಸಿಬ್ಬಂದಿಗಳು ಪೊಲೀಸ್ ಬಂದೋಬಸ್ತ್ ಏರ್ಪಡಿಸಿದ್ದರು.

Comments are closed.