ಮಂಗಳೂರು, ನವೆಂಬರ್.29 : ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಕಾರ್ಯವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ದಕ್ಷಿಣ ಕನ್ನಡ ಸಹಕಾರಿ ನೌಕರರ ಸಹಕಾರ ಸಂಘ ನಿ. ಈ ಸಂಸ್ಥೆ 88 ವರ್ಷಗಳ ಸಾರ್ಥಕ ಸೇವೆಯನ್ನು ಸಹಕಾರಿ ರಂಗದಲ್ಲಿ ಪೂರೈಸಿ, ಇದೀಗ ಉನ್ನತಿ ನೂತನ ಕಟ್ಟಡದ ಲೋಕಾರ್ಪಣೆ ಡಿಸೆಂಬರ್ 1ರಂದು ಭಾನುವಾರ ಅಪರಾಹ್ನ 3 ಗಂಟೆಗೆ ನಡೆಯಲಿದೆ ಎಂದು ದಕ್ಷಿಣ ಕನ್ನಡ ಸಹಕಾರಿ ನೌಕರರ ಸಹಕಾರ ಸಂಘ ನಿ., ಮಂಗಳೂರು ಇದರ ಅಧ್ಯಕ್ಷ್ಷರಾದ ಸುಧಾಕರ ಕರ್ಕೇರ ಇವರು ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಂಗಳೂರು ನಗರದ ಕೊಡಿಯಾಲ್‌ಬೈಲ್ ಪಿ.ವಿ.ಎಸ್. ಕಲಾಕುಂಜದ ಬಳಿ ಅತ್ಯಾಧುನಿಕ ವಿನ್ಯಾಸದೊಂದಿಗೆ ಸುಸಜ್ಜಿತವಾಗಿ ನಿರ್ಮಾಣಗೊಂಡಿರುವ 3 ಅಂತಸ್ತಿನ ಉನ್ನತಿ ನೂತನ ಕಟ್ಟಡವನ್ನು ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳ ನಿ., ಬೆಂಗಳೂರು ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ಅಧ್ಯಕ್ಷರಾದ ಡಾ| ಎಂ.ಎನ್. ರಾಜೇಂದ್ರ ಕುಮಾರ್ ಇವರು ಉದ್ಘಾಟಿಸಲಿರುವರು ಎಂದು ಹೇಳಿದರು.
ಅತ್ಯಾಧುನಿಕ ತಂತ್ರಜ್ಞಾನದ ಮೂಲಕ ಗ್ರಾಹಕರಿಗೆ ತ್ವರಿತ ಸೇವೆಯನ್ನು ನೀಡುವ ಉದ್ದೇಶದಿಂದ ಈ ನೂತನ ಕಟ್ಟಡದಲ್ಲಿ ಕೊಡಿಯಾಲ್‌ಬೈಲ್ ಶಾಖೆಯನ್ನು ತೆರೆಯಲಾಗಿದ್ದು, ಇದರ ಉದ್ಘಾಟನೆಯನ್ನು ಕರ್ನಾಟಕ ಸರಕಾರದ ಮುಜರಾಯಿ, ಮೀನುಗಾರಿಕೆ ಹಾಗೂ ಬಂದರುಗಳು ಮತ್ತು ಒಳನಾಡು ಜಲಸಾರಿಗೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಕೋಟ ಶ್ರೀನಿವಾಸ ಪೂಜಾರಿಯವರು ನೆರವೇರಿಸಲಿರುವರು. ನೂತನ ಕಟ್ಟಡದಲ್ಲಿ ಸಪ್ತವರ್ಣ ಸಭಾಂಗಣವನ್ನು ನಿರ್ಮಿಸಿದ್ದು, ಇದರ ಉದ್ಘಾಟನೆಯನ್ನು ಮಂಗಳೂರು ಲೋಕಸಭಾ ಸದಸ್ಯರಾದ ಶ್ರೀ ನಳಿನ್ ಕುಮಾರ್ ಕಟೀಲ್ ಇವರು ನೆರವೇರಿಸಲಿರುವರು.
ಉನ್ನತಿ ನೂತನ ಕಟ್ಟಡದ ಲೋಕಾರ್ಪಣೆಯ ಸವಿನೆನಪಿಗಾಗಿ ಸಮನ್ವಯ ಸ್ಮರಣ ಸಂಚಿಕೆಯನ್ನು ಹೊರತರುತ್ತಿದ್ದು, ಈ ಸ್ಮರಣ ಸಂಚಿಕೆಯನ್ನು ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಡಿ. ವೇದವ್ಯಾಸ ಕಾಮತ್ ಇವರು ಬಿಡುಗಡೆಗೊಳಿಸ ಲಿರುವರು. ಸಮಾರಂಭದ ಅಧ್ಯಕ್ಷತೆಯನ್ನು ದಕ್ಷಿಣ ಕನ್ನಡ ಸಹಕಾರಿ ನೌಕರರ ಸಹಕಾರ ಸಂಘ ನಿ., ಮಂಗಳೂರು ಇದರ ಅಧ್ಯಕ್ಷ್ಷರಾದ ಸುಧಾಕರ ಕರ್ಕೇರ ಇವರು ವಹಿಸಲಿರುವರು.
ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ದಕ್ಷಿಣ ಕನ್ನಡ ಜಿಲ್ಲಾ ಸಹಕಾರಿ ಸಂಘಗಳ ಉಪನಿಬಂಧಕರಾದ ಶ್ರೀ ಪ್ರವೀಣ್ ಬಿ. ನಾಯಕ್, ಎಸ್‌ಸಿಡಿಸಿಸಿ ಬ್ಯಾಂಕ್‌ನ ನಿರ್ದೇಶಕರಾದ ಶ್ರೀ ಭಾಸ್ಕರ್ ಎಸ್. ಕೋಟ್ಯಾನ್, ಮಂಗಳೂರು ಮಹಾನಗರ ಪಾಲಿಕೆಯ ಸದಸ್ಯೆ ಶ್ರೀಮತಿ ಲೀಲಾವತಿ ಪ್ರಕಾಶ್, ಕುದ್ರೋಳಿ ಶ್ರೀ ಭಗವತಿ ಕ್ಷೇತ್ರದ ಆಡಳಿತ ಮೊಕ್ತೇಸರರಾದ ಶ್ರೀ ಕೆ. ನಾರಾಯಣ ಇವರು ಭಾಗವಹಿಸಲಿರುವರು.
ನೌಕರರ ಶ್ರೇಯೋಭಿವೃದ್ಧಿಗೆ ಶ್ರಮಿಸುತ್ತಿರುವ ಈ ಸಂಘವು ನಿರಂತರವಾಗಿ ನೌಕರರ ಆರ್ಥಿಕ ಸಮಸ್ಯೆಗಳಿಗೆ ಸ್ಪಂದಿಸುತ್ತಿದೆ. ಇಂದಿನ ಸ್ಪರ್ಧಾತ್ಮಕ ವ್ಯವಹಾರ ಪೈಪೋಟಿಯಲ್ಲಿ ಸಂಘವು ತನ್ನ ಸೇವಾ ಬದ್ಧತೆಯನ್ನು ಮೆರೆದು ಸದಸ್ಯ ಬಂಧುಗಳಿಗೆ ಹಾಗೂ ಗ್ರಾಹಕರಿಗೆ ಉತ್ತಮ ಸೇವೆಯನ್ನು ನೀಡಿ ಇಂದು ಯಶಸ್ವೀ 88 ವರ್ಷಗಳನ್ನು ಪೂರೈಸಿ, ಯಶಸ್ಸಿನ ಪಥದಲ್ಲಿದೆ. ಮುಖ್ಯವಾಗಿ ಸಹಕಾರಿ ನೌಕರರ ಬಹುಕಾಲದ ಕನಸು ಉನ್ನತಿ ನೂತನ ಕಟ್ಟಡದ ಲೋಕಾರ್ಪಣೆಯ ಸಂದರ್ಭದಲ್ಲಿ ನನಸಾಗುತ್ತಿದೆ ಎಂದು ಸುಧಾಕರ ಕರ್ಕೇರ ಅವರು ಸಂತೋಷ ವ್ಯಕ್ತಪಡಿಸಿದರು.


Comments are closed.