ಬಾಗ್ದಾದ್:ಉತ್ತರ ಇರಾಕ್ನಲ್ಲಿ ಸರ್ಕಾರದ ವಿರುದ್ಧ ಭುಗಿಲೆದ್ದಿರುವ ಪ್ರತಿಭಟನೆ ಹಿಂಸಾರೂಪಕ್ಕೆ ತಿರುಗಿದ್ದು, ಸೇನೆ ಮತ್ತು ಪ್ರತಿಭಟನಾಕಾರರ ನಡುವಿನ ಘರ್ಷಣೆಯಲ್ಲಿ ಈವರೆಗೂ ಸಾವನ್ನಪ್ಪಿರುವವರ ಸಂಖ್ಯೆ 40ಕ್ಕೆ ಏರಿಕೆಯಾಗಿದೆ.
ನಿರುದ್ಯೋಗ, ಆಂತರಿಕ ಕಲಹ, ಭಯೋತ್ಪಾದನೆ, ಸಾಮಾಜಿಕ ಭದ್ರತೆ ಕಲ್ಪಿಸುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿ ಕೆಲ ಸಂಘಟನೆಗಳು ಪ್ರತಿಭಟನೆಗೆ ಕರೆಕೊಟ್ಟಿದ್ದವು. ಆದರೆ ಸೈನಿಕರ ಮಧ್ಯ ಪ್ರವೇಶದೊಂದಿಗೆ ಇದೀಗ ಪ್ರತಿಭಟನೆ ಇದೀಗ ಹಿಂಸಾರೂಪಕ್ಕೆ ತಿರುಗಿದ್ದು, ಉತ್ತರ ಇರಾಕ್ ಅಕ್ಷರಶಃ ರಣರಂಗವಾಗಿ ಮಾರ್ಪಟ್ಟಿದೆ.
ಸೈನಿಕರು ಮತ್ತು ಪ್ರತಿಭಟನಾ ನಿರತರ ನಡುವಿನ ಕಾಳಗದಲ್ಲಿ ಈವರೆಗೂ 40 ಮಂದಿ ಪ್ರತಿಭಟನಾಕಾರರು ಸಾವನ್ನಪ್ಪಿದ್ದಾರೆ. ಪ್ರತಿಭಟನಾಕಾರರನ್ನು ತಡೆಯುವ ನಿಟ್ಟಿನಲ್ಲಿ ಸೈನಿಕರು ಸಿಡಿಸಿದ್ದ ಅಶ್ರುವಾಯು ಪ್ರಯೋಗ, ತುರ್ತು ಪ್ರಹಾರದಳಗಳ ಕಾರ್ಯಾಚರಣೆಗೆ ಮಣಿಯದ ಪ್ರತಿಭಟನಾಕಾರರು ತಮ್ಮ ಪ್ರತಿಭಟನೆಯನ್ನು ತೀವ್ರಗೊಳಿಸಿದ್ದಾರೆ.
ಹೀಗಾಗಿ ಉತ್ತರ ಇರಾಕ್ಗೆ ಮತ್ತಷ್ಟು ಸೇನೆಯನ್ನು ಕಳುಹಿಸಿ ಅಲ್ಲಿ ಶಾಂತಿ ಕಾಪಾಡಲು ಪ್ರಯತ್ನಿಸುವುದಾಗಿ ಇರಾಕ್ ಸರ್ಕಾರ ಹೇಳಿದೆ. ಇನ್ನು ಪ್ರತಿಭಟನೆಯನ್ನು ನಿಯಂತ್ರಿಸುವಲ್ಲಿ ಇರಾಕ್ ಸೇನಾ ಮುಖ್ಯಸ್ಥ ಲೆಫ್ಟಿನೆಂಟ್ ಜನರಲ್ ಜಮಿಲ್ ಅಲ್ ಶಮ್ಮಾರಿ ವಿಫಲವಾಗಿರುವ ಹಿನ್ನೆಲೆಯಲ್ಲಿ ಇರಾಕ್ ಪ್ರಧಾನಿ ಅಡೆಲ್ ಅಬ್ದುಲ್ ಮೆಹ್ದಿ, ಸೇನಾಧ್ಯಕ್ಷ ಸ್ಥಾನದಿಂದ ವಜಾಗೊಳಿಸಿದ್ದಾರೆ.

Comments are closed.