ಮಂಗಳೂರು: ಶ್ರೀ ಕ್ಷೇತ್ರ ಧರ್ಮಸ್ಥಳದ ಲಕ್ಷದೀಪೋತ್ಸವ ಮೊದಲ ದಿನ ಭಕ್ತ ಜನರ ಉತ್ಸಾಹವನ್ನು ಸಂಕೇತಿಸಿತ್ತು. ಭಕ್ತ ಜನರ ಪ್ರಯಾಣ ಸೌಕರ್ಯದ ಸಲುವಾಗಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಧರ್ಮಸ್ಥಳ ಡಿಪೋ ವಿಶೇಷ ಮುತುವರ್ಜಿವಹಿಸಿದ್ದು ವಿಶೇಷ.
ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಬರುವ ಭಕ್ತರಿಗೆ ಡಿಪೋ ಎಂದಿನ 165 ಬಸ್ಸಿನ ವ್ಯವಸ್ಥೆಯನ್ನು ಹೊರತುಪಡಿಸಿ ಹೆಚ್ಚುವರಿಯಾಗಿ 30 ವಿಶೇಷ ಸಂಚಾರಿ ಬಸ್ಸುಗಳ ಸೌಲಭ್ಯ ಕಲ್ಪಿಸಿಕೊಟ್ಟಿತ್ತು. ಭಕ್ತ ಜನರಲ್ಲಿ ಹರುಷ ಮೂಡಿಸಿದ್ದು, ಶ್ರೀ ಕ್ಷೇತ್ರದ ಉತ್ಸವಕ್ಕೆ ಮತ್ತಷ್ಟು ಪೂರಕವಾಗಿದೆ.
ಶಿರಾಡಿಘಾಟ್‍ಗೆ ಸಂಪರ್ಕ ಕಲ್ಪಿಸಲು ಡಿಪೋದಿಂದ 15 ಹೆಚ್ಚುವರಿ ವಿಶೇಷ ಬಸ್ಸುಗಳ ಸಂಚಾರವಿತ್ತು. ಇನ್ನುಳಿದ 15 ಬಸ್ಸುಗಳು ಸ್ಥಳೀಯರ ಅನುಕೂಲಕ್ಕೆ ಮೀಸಲಾಗಿದ್ದವು.
ಈ ಬಗ್ಗೆ ಧರ್ಮಸ್ಥಳ ಡಿಪ್ಪೋದ ಸಿಬ್ಬಂದಿ ವರ್ಗದ ಮುಖ್ಯಸ್ಥ ಜನಾರ್ದನ ಅವರು ಈ ಕುರಿತು ವಿವರಗಳನ್ನು ನೀಡಿದರು. “ಜನ ಸಂದಣಿಯ ಆಧಾರದ ಮೇಲೆ ಅಂದಾಜಿಸಿ ಬಸ್ಸಿನ ವ್ಯವಸ್ಥೆಯನ್ನು ಒದಗಿಸಲಾಗುವುದು. ಸಂಜೆ 7 ಗಂಟೆಯ ನಂತರ ಸಾರ್ವಜನಿಕ ಪ್ರಯಾಣದ ಸಂಖ್ಯೆ ಕಡಿಮೆಯಾಗುವುದರಿಂದ ಅಗತ್ಯತೆಗೆ ತಕ್ಕಷ್ಟು ಬಸ್ಸುಗಳನ್ನು ಒದಗಿಸುವುದರಲ್ಲಿ ಪ್ರಯತ್ನ ಮಾಡುತ್ತೇವೆ” ಎಂದು ಹೇಳಿದರು.
ಒಂದು ಬಸ್ಸಿಗೆ ಒಮ್ಮೆಯ ಪ್ರಯಾಣಕ್ಕೆ ಕನಿಷ್ಟ 50 ಸೀಟುಗಳು ಭರ್ತಿಯಾಗಬೇಕು. 1 ಕಿ.ಮೀ.ಗೆ ಸುಮಾರು 38 ರೂ ವೆಚ್ಚವಾಗುವುದರಿಂದ ಎರಡು ಮೂರು ಪ್ರಯಾಣಿಕರಿಗೆ ಬಸ್ಸಿನ ವ್ಯವಸ್ಥೆ ಮಾಡಲಾಗುವುದಿಲ್ಲ ಎಂದರು.
ಉತ್ಸವದ ಎಲ್ಲಾ ದಿನಗಳಲ್ಲಿ ದಿಡುಪೆ, ಬೆಳಾಲು, ಶಿಶಿಲ, ಶಿಬಾಜೆ, ಪಟ್ರಮೆ, ಕೊಕ್ಕಡ, ನೆರಿಯ, ಗಂಡಿಬಾಗಿಲು ಮತ್ತು ಪುದುವೆಟ್ಟು ಹೀಗೆ ಅನೇಕ ಸ್ಥಳೀಯ ಗ್ರಾಮಗಳಿಗೆ ಎಂದಿನಂತೆ ನಿಗದಿತ ಸಮಯಕ್ಕೆ ಬಸ್ಸಿನ ವ್ಯವಸ್ಥೆಯನ್ನು ಮಾಡಲಾಗಿದೆ.
ಚಾರ್ಮಾಡಿ ಘಾಟ್ ಬಂದ್ ಆಗಿರುವ ಕಾರಣ ಎಕ್ಸ್ ಪ್ರೆಸ್ ಬಸ್ಸುಗಳ ಸಂಚಾರ ಇಲ್ಲದಿರುವುದರಿಂದ ಚಾರ್ಮಾಡಿಯವರೆಗೂ ಸಾರ್ವಜನಿಕರಿಗೆ ಸ್ಥಳೀಯ ಬಸ್ಸಿನ ವ್ಯವಸ್ಥೆ ಇದೆ. ಶಿರಾಡಿ ಘಾಟ್‍ನ ಮೂಲಕ ಧರ್ಮಸ್ಥಳದ ಲಕ್ಷ ದೀಪೋತ್ಸವಕ್ಕೆ ಆಗಮಿಸುವ ಭಕ್ತರ ಅನುಕೂಲಕ್ಕಾಗಿ ಹೆಚ್ಚುವರಿ ಬಸ್‍ಗಳ ಸಂಚಾರ ವ್ಯವಸ್ಥೆಗೊಳಿಸಲಾಗಿದೆ.

Comments are closed.