ಉಡುಪಿ: ಪ್ರವಾಸಿಗರನ್ನು ಕರೆದೊಯ್ಯುವ ಕೊನೆಯ ಬೋಟ್ ತಪ್ಪಿದ ಕಾರಣ ವಿಹಾರಕ್ಕೆ ಬಂದಿದ್ದ ಕೇರಳ ಮೂಲದ ಮಹಿಳೆ ಸಹಿತ ನಾಲ್ಕು ಮಂದಿ ಮಲ್ಪೆ ಸೈಂಟ್ ಮೇರಿಸ್ ದ್ವೀಪದಲ್ಲೇ ರಾತ್ರಿ ಕಳೆದ ಘಟನೆ ನಡೆದಿದೆ. ಕೇರಳದ ಕೊಚ್ಚಿನ್ ನಿವಾಸಿ ಗಳಾದ ಜಸ್ಟಿನ್ (34), ಶೀಜಾ (33), ಜೋಶ್ (28) ಮತ್ತು ಹರೀಶ್ (17) ದ್ವೀಪದಲ್ಲಿ ಕಳೆಯುವಂತಾಗಿದ್ದವರು. ಸದ್ಯ ಮಲ್ಪೆ ಠಾಣೆಯ ಪೊಲೀಸರು ಪ್ರಾಥಮಿಕ ತನಿಖೆ ನಡೆಸಿದ್ದು, ಸುರಕ್ಷಿತವಾಗಿ ಕೇರಳಕ್ಕೆ ಕಳುಹಿಸಿದ್ದಾರೆ.

ಜಸ್ಟಿನ್ ಮತ್ತು ಶೀಜಾ ಕೇರಳದಲ್ಲಿ ಹೋಮ್‌ಸ್ಟೇ ನಡೆಸುತ್ತಿದ್ದು, ಜೋಶ್ ಇವರೊಂದಿಗೆ ಕೆಲಸಕ್ಕಿರುವಾತ ಎನ್ನಲಾಗಿದೆ. ಹರೀಶ್ 17 ವರ್ಷದೊಳಗಿನ ಕೊಚ್ಚಿನ್ ಫುಟ್ಬಾಲ್ ಅಕಾಡೆಮಿಯ ಗೋಲ್‌ಕೀಪರ್ ಆಗಿದ್ದ ಎಂದು ವಿಚಾರಣೆ ವೇಳೆ ತಿಳಿಸಿರುವುದಾಗಿ ಪೊಲೀಸರು ಹೇಳಿದ್ದಾರೆ.
ಈ ನಾಲ್ವರು ನ. 21ರಂದು ಕೇರಳದಿಂದ ರೈಲಿನಲ್ಲಿ ಹೊರಟು ಉಡುಪಿಗೆ ಬಂದಿದ್ದರು. ಉಡುಪಿಯ ವಿವಿಧ ಸ್ಥಳಗಳನ್ನು ಸಂದರ್ಶಿಸಿದ ಬಳಿಕ ನ. 22ರಂದು ಗೋವಾಕ್ಕೆ ತೆರಳಿ ಮತ್ತೆ ಉಡುಪಿಗೆ ಬಂದು ಸೈಂಟ್ ಮೇರಿಸ್ ದ್ವೀಪ ತಲುಪಿದ್ದರು ಎನ್ನಲಾಗಿದೆ.
ಸೈಂಟ್ ಮೇರಿಸ್ ದ್ವೀಪದಲ್ಲಿ ವಿಹರಿಸುತ್ತ ಈ ನಾಲ್ವರು ದೊಡ್ಡ ಬಂಡೆಯೊಂದನ್ನು ಏರಿದ್ದರು. ಸಂಜೆ ಬಂಡೆಯ ಸುತ್ತ ನೀರಿನ ಮಟ್ಟ ಏರಿದ್ದರಿಂದ ಇಳಿದು ಬರಲು ಅವರಿಗೆ ಸಾಧ್ಯವಾಗಲಿಲ್ಲ. ನೀರಿನ ಮಟ್ಟ ಸ್ವಲ್ಪ ಇಳಿಯುತ್ತಿದ್ದಂತೆ ಬೋಟ್ ಹೊರಡುವ ಸ್ಥಳಕ್ಕೆ ಈ ನಾಲ್ವರು ಬಂದಾಗ ಕೊನೆಯ ಬೋಟ್ ದ್ವೀಪದಿಂದ ಮಲ್ಪೆಗೆ ವಾಪಸಾಗಿತ್ತು.
Comments are closed.