ಕರಾವಳಿ

ಗಾಂಧೀಜಿ ಕಂಡ ಸ್ವಚ್ಛ ಭಾರತದ ಕನಸು ನನಸಾಗಿಸುವುದು ನಮ್ಮ ಹೊಣೆ: ಡಿ.ವಿ.ಸದಾನಂದ ಗೌಡ

Pinterest LinkedIn Tumblr

ಉಡುಪಿ: ಮಹಾತ್ಮಾ ಗಾಂಧೀಜಿ ಕಂಡ ಸ್ವಚ್ಛ ಭಾರತದ ಕನಸನ್ನು ನನಸಾಗಿಸುವುದು ನಮ್ಮೆಲ್ಲರ ಹೊಣೆ, ಪರಿಸರವನ್ನು ಸ್ವಚ್ಛವಾಗಿರುವುದು ಕೂಡಾ ದೇಶ ಸೇವೆಯೇ, ದೇಶ ಕಟ್ಟುವ ಕಾರ್ಯದಲ್ಲಿ ಸ್ವಚ್ಛತಾ ಅಭಿಯಾನವೂ ಒಂದು ಮಹತ್ವದ ಕಾರ್ಯ ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಡಿವಿ.ಸದಾನಂದಗೌಡ ಅಭಿಪ್ರಾಯ ವ್ಯಕ್ತಪಡಿಸಿದರು.

ಮಂಗಳವಾರ ಜಿಲ್ಲಾಡಳಿತ ಉಡುಪಿ ಹಾಗೂ ಮಲ್ಪೆ ಅಭಿವೃದ್ಧಿ ಸಮಿತಿ, ಉಡುಪಿ ನಗರಸಭೆ, ಪ್ರವಾಸೋದ್ಯಮ ಇಲಾಖೆ, ದ.ಕ. ಮತ್ತು ಉಡುಪಿ ಜಿಲ್ಲಾ ಮೀನುಗಾರಿಕಾ ಫೆಡರೇಶನ್ ಇವರ ಸಹಯೋಗದೊಂದಿಗೆ ಮಲ್ಪೆ-ಪಡುಕೆರೆ ಬೀಚ್ ಸ್ವಚ್ಛತಾ ಅಭಿಯಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸ್ವಚ್ಛ ಭಾರತದಂತಹ ಕಾರ್ಯಕ್ರಮಗಳು ಒಂದು ದಿನಕ್ಕೆ ಸೀಮಿತವಾಗದೆ, ನಿರಂತರ ಪ್ರಕ್ರಿಯೆಯಾಗಬೇಕು, ಭಾರತದ ಜನಸಂಖ್ಯೆಯಲ್ಲಿ 65% ರಷ್ಟು 35 ವರ್ಷಕ್ಕಿಂತ ಕೆಳಗಿನ ವಯಸ್ಸಿನವರಿದ್ದು, ಪ್ರಪಂಚಕ್ಕೇ ಅತೀ ಹೆಚ್ಚು ಯುವ ಶಕ್ತಿಯನ್ನು ನೀಡುವ ದೇಶ ಭಾರತವಾಗಿದ್ದು, ಯುವಶಕ್ತಿಯನ್ನು ಸದ್ಬಳಕೆ ಮಾಡಿ ಭಾರತವನ್ನು ವಿಶ್ವದಲ್ಲೆ ಶ್ರೇಷ್ಠ ರಾಷ್ಟ್ರವಾಗಿಸಬೇಕು. ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ತಮ್ಮ ದಿನನಿತ್ಯದ ಜೀವನದಲ್ಲಿ ಅರ್ಧ ಘಂಟೆಯಾದರೂ ತಮ್ಮ ಮನೆ ಮತ್ತು ಶಾಲೆಯ ಪರಿಸರವನ್ನು ಸ್ವಚ್ಛವಾಗಿಡುವ ಕೆಲಸವನ್ನು ಮಾಡುತ್ತಿರಬೇಕು. ಸ್ವಚ್ಛತೆ ನಮ್ಮ ದಿನನಿತ್ಯದ ಜೀವನದ ಅಂಗವಾಗಬೇಕು, ಪ್ಲಾಸ್ಟಿಕ್ ನಿಷೇಧ ಕಡ್ಡಾಯವಾಗಿ ಜಾರಿಯಾಗಬೇಕು ಎಂದು ಕೇಂದ್ರ ಸಚಿವರು ಹೇಳಿದರು.

ಸಂಸದೆ ಶೋಭಾ ಕರಂದ್ಲಾಜೆ ಮಾತನಾಡಿ, ಪಡುಕೆರೆ ಬೀಚ್ನ್ನು, ಪಡುಬಿದ್ರೆಯ ಬ್ಲೂ ಫ್ಲಾಗ್ ಯೋಜನೆಯೊಂದಿಗೆ ವಿಸ್ತರಿಸಿ, ಪ್ರವಾಸೋದ್ಯಮವಾಗಿ ಅಭಿವೃದ್ಧಿಪಡಿಸುವ ಕುರಿತಂತೆ ಕೇಂದ್ರದಲ್ಲಿ ಪ್ರಯತ್ನಿಸುವುದಾಗಿ ತಿಳಿಸಿದರು.

ಬೀಚ್ ಸ್ವಚ್ಛತಾ ಅಭಿಯಾನದ ಅಂಗವಾಗಿ, ನಗರದ ವಿವಿಧ ಕಾಲೇಜುಗಳ ಸುಮಾರು 1500 ಕ್ಕೂ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಪಡುಕೆರೆ ಬೀಚ್ ಅನ್ನು ಸ್ವಚ್ಛಗೊಳಿಸಿದರು.

ಕಾರ್ಯಕ್ರಮದಲ್ಲಿ ಸಂಸದೆ ಶೋಭಾ ಕರಂದ್ಲಾಜೆ, ಶಾಸಕ ರಘುಪತಿ ಭಟ್, ಕಾಪು ಶಾಸಕ ಲಾಲಾಜಿ ಮೆಂಡನ್, ತಾಲೂಕು ಪಂಚಾಯತ್ ಅಧ್ಯಕ್ಷೆ ನೀತಾ ಗುರುರಾಜ್ ಪೂಜಾರಿ, ದ.ಕ. ಉಡುಪಿ ಮೀನುಗಾರಿಕಾ ಫೆಡರೇಷನ್ ಅಧ್ಯಕ್ಷ ಯಶಪಾಲ್ ಸುವರ್ಣ, ಜಿಲ್ಲಾಧಿಕಾರಿ ಜಿ. ಜಗದೀಶ್, ನಗರಸಭೆ ಪೌರಾಯುಕ್ತ ಆನಂದ ಕಲ್ಲೋಳಿಕರ್, ಎಎಸ್ಪಿ ಕುಮಾರಚಂದ್ರ, ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕ ಚಂದ್ರಶೇಖರ ನಾಯಕ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಡಾ. ರೋಷನ್ ಕುಮಾರ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

Comments are closed.