ಕರಾವಳಿ

ಉಡುಪಿ ಶ್ರೀಕೃಷ್ಣನಿಗೆ ಸುವರ್ಣ ಗೋಪುರ ಅರ್ಪಣೆ

Pinterest LinkedIn Tumblr

ಉಡುಪಿ: ಶ್ರೀಕೃಷ್ಣನಿಗೆ ಸುವರ್ಣ ಗೋಪುರ ನಾವು ನಿರ್ಮಿಸಿದ್ದೇವೆ ಎನ್ನುವ ಭ್ರಮೆಯಿಲ್ಲ. ಎಲ್ಲವೂ ಶ್ರೀಕೃಷ್ಣ, ಮಧ್ವಾಚಾರ್ಯ, ಗುರು ಶ್ರೀವಿದ್ಯಾಮಾನ್ಯರ ಅನುಗ್ರಹ ಎಂದು ಪರ್ಯಾಯ ಪಲಿಮಾರು ಮಠದ ಶ್ರೀವಿದ್ಯಾಧೀಶತೀರ್ಥ ಶ್ರೀಪಾದರು ಹೇಳಿದ್ದಾರೆ. ಶ್ರೀಕೃಷ್ಣನಿಗೆ ಸುವರ್ಣ ಗೋಪುರ ಸಮರ್ಪಣೆ ಅಂಗವಾಗಿ ರಾಜಾಂಗಣದಲ್ಲಿ ಗುರುವಾರ ನಡೆದ ಧರ್ಮ ಗೋಪುರಂ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.

ಉಡುಪಿ ಕೃಷ್ಣಮಠದ ಪಾಲಿಗೆ ಗುರುವಾರ ನಿಜಕ್ಕೂ ಐತಿಹಾಸಿಕ ದಿನ. ಅಂದಾಜು 40 ಕೋಟಿ ವೆಚ್ಚದಲ್ಲಿ ನೂರು ಕೆ.ಜಿಗೂ ಅಧಿಕ ತೂಕದ ಚಿನ್ನವನ್ನು ಬಳಸಿ ಕೃಷ್ಣ ದೇವರ ಗರ್ಭಗುಡಿಗೆ ಸುವರ್ಣಗೋಪುರವನ್ನು ಸಮರ್ಪಿಸಲಾಯಿತು. ಗರ್ಭಗುಡಿಯ ಮುಡಿಗೇರಿದ ಮೂರು ಕಲಶಗಳಿಗೆ ವೈಭವದ ಅಲಂಕಾರ ಮಾಡಲಾಗಿದ್ದು ಅಷ್ಟಮಠಾಧೀಶರಿಂದ ನಿರಂತರ ನಾಲ್ಕು ಗಂಟೆಗಳ ಕಾಲ ಅಭಿಷೇಕ ನಡೆದಿದ್ದು ಈ ಕ್ಷಣವನ್ನು ಕಣ್ತುಂಬಿಕೊಳ್ಳಲು ಸಹಸ್ರರಾರು ಭಕ್ತರು ಆಗಮಿಸಿದ್ದರು.

ಕೃಷ್ಣಮಠದ ಗರ್ಭಗುಡಿಗೆ ಚಿನ್ನದ ಗೋಪುರ ನಿರ್ಮಾಣಕ್ಕೆ ಒಂದು ವರ್ಷಗಳ ನಿರಂತರ ಕಾಮಗಾರಿ ನಡೆದಿದ್ದು ಈ ಸುಂದರ ಗೋಪುರ ಕೃಷ್ಣಾರ್ಪಣಗೊಂಡಿದೆ.

ಇನ್ನು ಸುವರ್ಣ ಗೋಪುರ ಸಮರ್ಪಣೆ ವೇಳೆ ನಿರಂತರ ಕೃಷ್ಣಜಪ ಹಾಗೂ ಗೋವಿಂದ ಘೋಷಣೆ ಮುಗಿಲುಮುಟ್ಟಿತ್ತು. ಐದು ಶತಮಾನಗಳ ಹಿಂದೆ ನಿರ್ಮಿತವಾದ ತಾಮ್ರದ ಗೋಪುರವನ್ನು ತೆರವು ಮಾಡಿ ಎರಡು ಹಂತಗಳ ಈ ಸುವರ್ಣ ಗೋಪುರ ನಿರ್ಮಾಣ ಮಾಡಲಾಗಿದೆ. ಮಠಕ್ಕೆ ಭೇಟಿ ಕೊಡುವ ಲಕ್ಷಾಂತರ ಭಕ್ತರಿಗೆ ಈ ಗೋಪುರ ಆಕಷರ್ಣೆಯಾಗಲಿದೆ.

Comments are closed.