ಕರಾವಳಿ

`ಒಂದು ಚಿತ್ರ ಸಾವಿರ ಪದ’-ವಿದ್ಯಾರ್ಥಿಗಳ ಕುಂಚದಲ್ಲಿ ಅರಳಿದ ಪರಿಸರ ಜಾಗೃತಿ

Pinterest LinkedIn Tumblr

ಉಡುಪಿ: ಒಂದು ಚಿತ್ರ ಸಾವಿರ ಪದಗಳು ಹೇಳುವ ಕಥೆಯನ್ನು ಹೇಳುತ್ತದೆ ಎನ್ನುವ ಮಾತೊಂದಿದೆ, ಶನಿವಾರ ಒಳಕಾಡುವಿನ ಸರಕಾರಿ ಸಂಯುಕ್ತ ಪ್ರೌಢ ಶಾಲೆಯಲ್ಲಿ ನಡೆದ ಚಿತ್ರಕಲಾ ಸ್ಪರ್ಧೆ ಈ ಮಾತನ್ನು ಅಕ್ಷರಶಃ ನಿಜವಾಗಿಸಿತ್ತು. ಶಾಲೆಯ ನಳಂದಾ ಸಭಾಂಗಣದಲ್ಲಿ ವಿದ್ಯಾರ್ಥಿಗಳ ಕುಂಚದಲ್ಲಿ ಅರಳಿದ ಚಿತ್ತಾರಗಳು ಪರಿಸರ ಕಾಳಜಿಯ ಸಂದೇಶವನ್ನು ಎತ್ತಿ ಸಾರುತ್ತಿತ್ತು.

ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ವತಿಯಿಂದ ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ವಾಯು ಮಾಲಿನ್ಯ ಜಾಗೃತಿ ಮೂಡಿಸುವ ಚಿತ್ರಕಲಾ ಸ್ಪರ್ಧೆಯಲ್ಲಿ ಜಿಲ್ಲೆಯ ವಿವಿಧ ಪ್ರಾಥಮಿಕ ಹಾಗೂ ಪ್ರೌಢ ಶಾಲೆಯ 150 ವಿದ್ಯಾರ್ಥಿಗಳು, “ಮಾಲಿನ್ಯ ತಡೆಯಿರಿ ದೇಶ ರಕ್ಷಿಸಿ, ಗೋ ಗ್ರೀನ್, ವಾಯು ಮಾಲಿನ್ಯ ತಡೆದು ಶುದ್ದ ಗಾಳಿ ಪಡೆಯಿರಿ ಎಂಬ ಸಂದೇಶದ ಜೊತೆಗೆ ವಾಯುಮಾಲಿನ್ಯ ತಡೆಗೆ ಗಿಡಗಳನ್ನು ನೆಟ್ಟು ಪೋಷಿಸಿ, ತಾವೂ ಗಿಡ ನೆಟ್ಟು ಇತರರಿಗೂ ಗಿಡ ನೆಡಲು ಪ್ರೋತ್ಸಾಯಿಸಿ” ಎಂಬ ಪರಿಸರ ಕಾಳಜಿಯನ್ನು ತಾವು ಬರೆದ ಬಣ್ಣ ಬಣ್ಣದ ಚಿತ್ತಾರದ ಮೂಲಕ ಸಾರುತ್ತಿದ್ದರು.

ಶನಿವಾರ ನಡೆದ ಚಿತ್ರಕಲಾ ಸ್ಪರ್ಧೆಯು 3 ವಿಭಾಗಗಳಲ್ಲಿ ನಡೆದಿದ್ದು, ಪ್ರಾಥಮಿಕ ವಿಭಾಗದಲ್ಲಿ 1 ರಿಂದ 4, ಮಾಧ್ಯಮಿಕ ವಿಭಾಗದಲ್ಲಿ 5 ರಿಂದ 7 ಹಾಗೂ ಪ್ರೌಢ ಶಾಲಾ ವಿಭಾಗದಲ್ಲಿ 8 ರಿಂದ 10 ನೇ ತರಗತಿಯ ವಿದ್ಯಾರ್ಥಿಗಳು ಭಾಗವಹಿಸಿದ್ದು, ಜೂನ್ 5 ರಂದು ಜಿಲ್ಲಾಡಳಿತ ವತಿಯಿಂದ ಪಡುಬಿದ್ರೆಯ ಬಂಟರ ಭವನದಲ್ಲಿ ನಡೆಯುವ ವಿಶ್ವ ಪರಿಸರ ದಿನಾಚರಣೆಯಂದು ಈ ಚಿತ್ರಕಲಾ ಸ್ಪರ್ಧೆಯಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ನೀಡಲಾಗುತ್ತದೆ.

ಚಿತ್ರಕಲಾ ಸ್ಪರ್ಧೆಯ ಬಗ್ಗೆ ಮಾಹಿತಿ ನೀಡಿದ ಉಡುಪಿ ಜಿಲ್ಲಾ ಪರಿಸರ ಅಧಿಕಾರಿ ಡಾ.ಎಚ್. ಲಕ್ಷ್ಮೀಕಾಂತ್, ಚಿತ್ರಕಲೆ ಮೂಲಕ ಮಕ್ಕಳಲ್ಲಿ ಪರಿಸರ ಕಾಳಜಿ ಮೂಡಿಸುವ ಉದ್ದೇಶದಿಂದ ವಾಯುಮಾಲಿನ್ಯ ಜಾಗೃತಿ ಕಾರ್ಯಕ್ರಮ ಹಮ್ಮಿಕೊಂಡಿದ್ದು ಕಾರ್ಯಕ್ರಮ ಯಶಸ್ವಿಯಾಗಿದೆ. ಜಿಲ್ಲೆಯ ಎಲ್ಲಾ ಮಕ್ಕಳಿಗೂ ಅವಕಾಶ ಸಿಗಬೇಕು ಎನ್ನುವ ಉದ್ದೇಶದಿಂದ ಮುಂದಿನ ದಿನಗಳಲ್ಲಿ ಕಾರ್ಕಳ, ಹೆಬ್ರಿಗಳಲ್ಲಿ ಈ ರೀತಿ ಕಾರ್ಯಕ್ರಮ ನಡೆಸುವ ಉದ್ದೇಶ ಹೊಂದಿದೆ. ಜೂನ್ 5 ರಂದು ನಡೆಯುವ ವಿಶ್ವ ಪರಿಸರ ದಿನಾಚರಣೆಯಂದು ಸ್ವಚ್ಚತೆ ಹಾಗೂ ಇತರ ಪರಿಸರಕ್ಕೆ ಪೂರಕವಾದ ಕೆಲಸಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡ ಉಡುಪಿ ವ್ಯಕ್ತಿಯನ್ನು ಗುರುತಿಸಿ ಗೌರವಿಸುವ ಕಾರ್ಯಕ್ರಮ, ಉಡುಪಿ, ಕುಂದಾಪುರ, ಕಾರ್ಕಳ ತಾಲೂಕಿನ 3 ಗ್ರಾಮ ಪಂಚಾಯತ್ಗಳಲ್ಲಿರುವ ಪರಿಸರ ಕಾಳಜಿ ಹೊಂದಿರುವ ವ್ಯಕ್ತಿಗಳನ್ನು ಹಾಗೂ ಪರಿಸರ ಕಾಳಿಜಿಗೆ ಪೂರಕವಾಗಿ ಕಾರ್ಯನಿರ್ವಹಿಸುವ ಶಾಲೆಗಳನ್ನು ಗೌರವಿಸುವ ಯೋಜನೆಯನ್ನೂ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ಇಂತಹ ಪರಿಸರ ಜಾಗೃತಿಯ ಕಾರ್ಯಕ್ರಮಗಳ ಮೂಲಕ ಮಕ್ಕಳಲ್ಲಿ ಪರಿಸರದ ಬಗೆಗಿನ ಕಾಳಜಿ ಹೆಚ್ಚಿಸಲು ಸಹಕಾರಿಯಾಗುತ್ತದೆ. ಇಂತಹ ಅರ್ಥಪೂರ್ಣವಾದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ಖುಷಿ ನೀಡಿದೆ ಎಂದು ಅಭಿಪ್ರಾಯ ಪಡುತ್ತಾರೆ ಕಾರ್ಕಳದ ತೆಳ್ಳಾರೆ ವಿದ್ಯಾರ್ಥಿ ವಿಕ್ರಮ್.

ಒಟ್ಟಾರೆ ಶನಿವಾರ ನಡೆದ ವಾಯು ಮಾಲಿನ್ಯ ಜಾಗೃತಿಯ ಚಿತ್ರಕಲಾ ಸ್ಪರ್ಧೆ ವಿದ್ಯಾರ್ಥಿಗಳಲ್ಲಿನ ಪರಿಸರ ಕಾಳಜಿ ಇತರರಿಗೆ ಮಾದರಿಯಾಗಿ, ಪರಿಸರರಕ್ಷಣೆಯ ಮಹತ್ವವನ್ನು ಎತ್ತಿ ಹೇಳುತ್ತಿತ್ತು.

Comments are closed.