ಕರಾವಳಿ

7 ಮೀನುಗಾರರ ಮನೆಯವರಿಗೂ ತಲಾ 25 ಲಕ್ಷ ನೌಕಾಪಡೆಯೇ ನೀಡಬೇಕು: ಪ್ರಮೋದ್ ಮಧ್ವರಾಜ್

Pinterest LinkedIn Tumblr

ಉಡುಪಿ: ಸುವರ್ಣ ತ್ರಿಭುಜ ಬೋಟ್‌ಗೆ ಹಾನಿಯಾಗಿ ಅದು ಮುಳುಗಲು ನೌಕಾಪಡೆಯ ಐಎನ್‌ಎಸ್‌ ಕೊಚ್ಚಿ ಹಡಗು ಢಿಕ್ಕಿ ಹೊಡೆದಿರುವುದೇ ಕಾರಣ ಎಂಬ ಬಲವಾದ ಸಂಶಯಕ್ಕೆ ಪೂರಕ ದಾಖಲೆಗಳು ಇವೆ. ಹಾಗಾಗಿ ನೌಕಾಪಡೆ ತಪ್ಪೊಪ್ಪಿಕೊಂಡು ಸೂಕ್ತ ಪರಿಹಾರ ನೀಡಬೇಕು. ಇಲ್ಲವಾದಲ್ಲಿ ಸುಪ್ರೀಂ ಕೋರ್ಟ್‌ನಲ್ಲಿ ಹೋರಾಟ ಮಾಡುತ್ತೇನೆ ಎಂದು ಮಾಜಿ ಸಚಿವ ಪ್ರಮೋದ್‌ ಮಧ್ವರಾಜ್‌ ತಿಳಿಸಿದ್ದಾರೆ.

ಐಎನ್‌ಎಸ್‌ ಕೊಚ್ಚಿ ಢಿಕ್ಕಿ ಹೊಡೆದಿರುವುದಕ್ಕೆ ದಾಖಲೆಗಳಿರುವುದರಿಂದ ನೌಕಾಪಡೆಯವರು ಜವಾಬ್ದಾರಿ ಹೊತ್ತುಕೊಂಡು ಇನ್ಶೂರೆನ್ಸ್‌ ಹೊರತು ಪಡಿಸಿ ಎಲ್ಲ ಪರಿಹಾರ ಮೊತ್ತ ನೀಡಬೇಕು. ನಾಪತ್ತೆಯಾದ 7 ಮೀನುಗಾರರ ಮನೆಯವರಿಗೂ ತಲಾ 25 ಲ.ರೂ.ಗಳನ್ನು ನೌಕಾಪಡೆಯೇ ನೀಡಬೇಕು. ಐಎನ್‌ಎಸ್‌ ಕೊಚ್ಚಿಯನ್ನು ಚಲಾಯಿಸುತ್ತಿದ್ದ ಸಿಬಂದಿ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಪತ್ರಿಕಾಗೋಷ್ಟಿ ನಡೆಸಿ ಬೇಡಿಕೆಗಳನ್ನು ಮುಂದಿಟ್ಟಿದ್ದಾರೆ.

ಡಿ. 15ರಿಂದ ಬೋಟ್ ನಾಪತ್ತೆಯಾಗಿತ್ತು. ಡಿ. 22ರಂದು ಪ್ರಕರಣ ದಾಖಲಾಗಿತ್ತು. ಜ. 15ಕ್ಕೆ ಉಡುಪಿ ಪೊಲೀಸರು ನೌಕಾಪಡೆಯ ಕಾರವಾರ ಕಚೇರಿ ಅಧಿಕಾರಿಗಳನ್ನು ಸಂಪರ್ಕಿಸಿದ್ದರು. ಅದೇ ದಿನ ನೌಕಾದಳ ದವರು ಕೂಡ ಐಎನ್‌ಎಸ್‌ ಕೊಚ್ಚಿ ಹಡಗಿಗೆ ಹಾನಿಯಾಗಿರುವ ಬಗ್ಗೆ ತಿಳಿಸಿದ್ದರು. ಅಲ್ಲದೆ ಮಹಾರಾಷ್ಟ್ರ ಭಾಗದಲ್ಲಿ ಯಾವುದಾದರೂ ಮೀನುಗಾರಿಕೆ ಬೋಟ್ ಅವಘಡ ಸಂಭವಿಸಿದೆಯೇ ಎಂದು ಮಹಾರಾಷ್ಟ್ರದ ಮೀನುಗಾರರನ್ನು ಪ್ರಶ್ನಿಸಿದ್ದರು. ಈ ಬಗ್ಗೆ ಉಡುಪಿ ಪೊಲೀಸರಿಗೆ ನೌಕಾಪಡೆ ಅಧಿಕಾರಿಗಳು ನೀಡಿರುವ ಮಾಹಿತಿ ದಾಖಲೆಗಳಲ್ಲಿದೆ. ನೌಕಾಪಡೆಯ ಹಡಗೇ ಢಿಕ್ಕಿ ಹೊಡೆದಿದೆ ಎಂಬುದಕ್ಕೆ ಪುರಾವೆ ಇದೆಯೇ ಎಂದು ಶಾಸಕ ರಘುಪತಿ ಭಟ್ ಅವರು ಪ್ರಶ್ನಿಸಿರುವ ಹಿನ್ನೆಲೆಯಲ್ಲಿ ದಾಖಲೆಗಳನ್ನು ಬಿಡುಗಡೆ ಮಾಡುತ್ತಿದ್ದೇನೆ ಎಂದರು.

ನೌಕಾಪಡೆಯವರು ಹುಡುಕಾಟ ನಡೆಸುತ್ತಿ ದ್ದಾರೆ’ ಎಂದು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌, ಸಂಸದೆ ಶೋಭಾ ಕರಂದ್ಲಾಜೆ ಮತ್ತು ಶಾಸಕ ರಘುಪತಿ ಭಟ್ ಪದೇ ಪದೆ ಹೇಳುತ್ತಿದ್ದರು. ಆದರೆ ನೌಕಾಪಡೆಯವರೇ ಢಿಕ್ಕಿ ಹೊಡೆಸಿ ಅನಂತರ ಇವರೆಲ್ಲರೂ ಹುಡುಕಾಟದ ನಾಟಕ ಮಾಡಿದ್ದಾರೆ. ಚುನಾವಣೆ ಸಂದರ್ಭ ಮೀನುಗಾರರು ತಿರುಗಿ ಬೀಳಬಹುದು ಎಂಬ ಉದ್ದೇಶದಿಂದ ಇದನ್ನು ಮುಚ್ಚಿಟ್ಟು ಮೀನುಗಾರರ ಜೀವದ ಜತೆ ಚೆಲ್ಲಾಟವಾಡಿದ್ದಾರೆ ಎಂದರು.

ನೌಕಾಪಡೆಯವರು 4 ತಿಂಗಳುಗಳಿಂದ ಶೋಧ ನಡೆಸುತ್ತಿರುವುದಾಗಿ ಹೇಳಿದ್ದರು. ಆದರೂ ಪತ್ತೆಯಾಗಿರಲಿಲ್ಲ. ಆದರೆ ಶಾಸಕ ರಘುಪತಿ ಭಟ್ ಅವರು ಪತ್ತೆ ಕಾರ್ಯಾಚರಣೆಯಲ್ಲಿ ಭಾಗವಹಿಸಿದ 4 ದಿನಗಳಲ್ಲೇ ಬೋಟ್ ಅವಶೇಷ ಪತ್ತೆಯಾಗಿದೆ. ಮೊದಲೇ ನೌಕಾಪಡೆಯವರಿಗೆ ಅವಶೇಷ ಪತ್ತೆಯಾಗಿದ್ದು, ಅನಂತರ ಶಾಸಕರ ಜತೆಗೆ ಅಲ್ಲಿಗೇ ಹೋಗಿದ್ದಾರೆಯೇ? ಇದು ರಾಜಕೀಯವಲ್ಲವೆ? 4 ತಿಂಗಳುಗಳಲ್ಲಿ ಆಗದ್ದು 4 ದಿನಗಳಲ್ಲಿ ಹೇಗೆ ಸಾಧ್ಯವಾಯಿತು ಎಂದು ಪ್ರಮೋದ್‌ ಪ್ರಶ್ನಿಸಿದರು.

ಸುಪ್ರೀಂ ಕೋರ್ಟ್‌ನಲ್ಲಿ ನನ್ನದೇ ವಕೀಲರ ಮೂಲಕ ಹೋರಾಟ ಮಾಡುತ್ತೇನೆ. ನನ್ನಲ್ಲಿರುವ ದಾಖಲೆಗಳನ್ನು ನ್ಯಾಯಾಲಯಕ್ಕೆ ಸಲ್ಲಿಸುತ್ತೇನೆ. ಬೋಟ್ ಮೇಲೆತ್ತಲು ಆದೇಶಿಸುವಂತೆಯೂ ಮನವಿ ಮಾಡುತ್ತೇನೆ. ಮೂರು ರಕ್ಷಣಾ ದಳಗಳ ಮಹಾದಂಡನಾಯಕರಾದ ರಾಷ್ಟ್ರಪತಿಯವರಿಗೆ, ರಕ್ಷಣಾ ಸಚಿವೆ, ಮಹಾರಾಷ್ಟ್ರ, ಕರ್ನಾಟಕದ ಮುಖ್ಯಮಂತ್ರಿಯವರಿಗೂ ಪತ್ರ ಬರೆಯುತ್ತೇನೆ ಎಂದು ಪ್ರಮೋದ್‌ ಹೇಳಿದರು.

ರಾಜ್ಯಸರಕಾರದಿಂದ 10 ಲ.ರೂ.
ಮೀನುಗಾರಿಕೆ ಬೋಟ್ ಅವಘಡ ಸಂದರ್ಭ ಸಾಮಾನ್ಯವಾಗಿ 6 ಲ.ರೂ. ನೀಡಲಾಗುತ್ತದೆ. ಆದರೆ ಇದು ವಿಶೇಷ ಪ್ರಕರಣವೆಂದು ಪರಿಗಣಿಸಿ 10 ಲ.ರೂ. ಪರಿಹಾರ ನೀಡುವಂತೆ ಮುಖ್ಯಮಂತ್ರಿಯವರಿಗೆ ಮನವಿ ಮಾಡಿದ್ದೇನೆ. ಅವರು ಈ ಬಗ್ಗೆ ಮೀನುಗಾರಿಕೆ ಸಚಿವರಿಗೆ ಸೂಚನೆ ನೀಡಿದ್ದಾರೆ ಎಂದು ಪ್ರಮೋದ್‌ ತಿಳಿಸಿದರು.

Comments are closed.