ಕರಾವಳಿ

ಡಿಸಿ, ಶಾಸಕರ ಭೇಟಿಯೂ ಪ್ರಯೋಜನಕ್ಕಿಲ್ಲ: ಮೂಲ ನಿವಾಸಿಗಳ ಗೋಳಿನ್ನೂ ಮುಗಿದಿಲ್ಲ!?

Pinterest LinkedIn Tumblr

ಕುಂದಾಪುರ: ಬಾಚುಕುಳಿ ಕಾಲನಿ ಮೂಲ ನಿವಾಸಿಗಳ ಜೀವನ ಮೂರಾಬಟ್ಟೆ..! ಬಿರುಕು ಬಿಟ್ಟ ಗೋಡೆ, ಮನೆ ಒಳಗೆ ಹೋಗಿ ಗಟ್ಟಿಯಾಗಿ ನೆಲಕ್ಕೆ ಕಾಲುಕುಟ್ಟಿದರೆ ಪೊಕಳೆ ಬೀಳುತ್ತದೆ. ಮಾಡಿನ ಜಂತಿ, ಪಕಾಶಿಗೆ ಗೆದ್ದಲು ಹಿಡಿದು ಕಳಚಿಕೊಳ್ಳುವ ಹಂತಕ್ಕೆ ಮುಟ್ಟಿದೆ. ಜಾರಿದ ಹೆಂಚಿನ ಸೂರಿನಡಿ ಅಂಗೈಯಲ್ಲಿ ಜೀವ ಹಿಡಿದು ಬದುಕುತ್ತಿರುವ ಕೊರಗ ಕುಟುಂಬ ಮಳೆಗಾದಲ್ಲಿ ಏನು ಮಾಡಬೇಕು ಎನ್ನುವ ಚಿಂತೆಯಲ್ಲಿ ದಿನ ಕಳೆಯುತ್ತಿವೆ.

ಬೈಂದೂರು ತಾಲೂಕು ಹಳ್ಳಿಹೊಳೆ ಗ್ರಾಮ ಪಂಚಾಯಿತಿ ಎದುರಿನ ಪುಟ್ಟ ಗುಡ್ಡದಲ್ಲಿ ವಾಸಮಾಡುತ್ತಿರುವ ಬಾಚುಕುಳಿ ಕಾಲನಿ ಮೂಲ ನಿವಾಸಿಗಳ ಬವಣೆಯ ಚಿತ್ರಣವಿದು. ಬಾಚುಕುಳಿ ಕಾಲನಿಯಲ್ಲಿ ಒಟ್ಟು ಏಳು ಮನೆಗಳಿದ್ದು, ಕೂತ ಜಾಗಕ್ಕೆ ಸರಿಯಾದ ದಾಖಲೆ ಇದೆಯಾ ಎನ್ನೋದು ಗೊತ್ತಿಲ್ಲದಷ್ಟು ಮುಗ್ದರು ಮೂಲ ನಿವಾಸಿಗಳು. ಬಸವ ಅವರಿಗೆ ಸಂಧ್ಯಾ ಸುರಕ್ಷೆ, ಸರ್ಕಾರ ತಿಂಗಳು ತಿಂಗಳು ನೀಡುವ ಪೌಷ್ಟಕ ಆಹಾರ ಕಾಲನಿಗೆ ನಿಯಮಿತವಾಗಿ ಸಿಗುವ ಸೌಲಭ್ಯ ಭಾಗ್ಯ.

ಕಾಲನಿ ನಿವಾಸಿಗಳದ್ದು ತುಂಬಿ ಸಂಸಾರದ ಕುಟುಂಬ. 20ಕ್ಕೂ ಮಿಕ್ಕವರು ವಾಸಮಾಡುತ್ತಿದ್ದಾರೆ. ಮನೆ ಭದ್ರವಾಗಿಲ್ಲ ಎನ್ನೋದು ಗಮನಕ್ಕೆ ಬಂತೋ ಅಂದೇ ಕೆಲವರು ತಮ್ಮ ಸಂಬಂಧಿಕರ ಮನೆಗೆ ವಲಸೆ ಹೋಗಿದ್ದು, ಈಗ ಕಾಲನಿ ಜನ ಸಂಖ್ಯೆ ಹತ್ತಕ್ಕೆ ಇಳಿದಿದೆ. ಸರ್ಕಾರ ಮೂಲ ನಿವಾಸಿಗಳ ಬದುಕಿನ ಭದ್ರತೆಗಾಗಿ ರೂಪಿಸಿದ ಹಲವಾರು ಯೋಜನೆ ನೆರವಿಗೆ ಬರುತ್ತಿಲ್ಲ. ಕಾಲನಿ ಅಭಿವೃದ್ಧಿಗಾಗಿ ನೀಡುವ ಅನುದಾನ ಯಾರದ್ದೋ ಮನೆಗೆ ಹೋಗವ ಸರ್ವ‌ಋತು ರಸ್ತೆ ಆಗುತ್ತದೆ. ಇಷ್ಟೆಲ್ಲಾ ಇದ್ದರು ಕೊರಗರ ಬದುಕು ಸುಧಾರಿಸುತ್ತಿಲ್ಲ ಎಂದರೆ ಅದಕ್ಕೆ ಬದ್ದತೆ ಕೊರತೆ ಎನ್ನದೆ ಬೇರೆ ದಾರಿಯಿಲ್ಲ.

ವ್ಯಸನ ಮುಕ್ತ ಕಾಲನಿ
ಬಾಚುಕುಳಿ ಕಾಲನಿ ಮಧ್ಯ ಮುಕ್ತ..! ಎಲೆ ಅಡಕೆ ಅಗಿಯುತ್ತಾರೆ ಎನ್ನೋದು ಬಿಟ್ಟರೆ ಅಮಲು ಸೇವನೆ ಮುಕ್ತವಾಗಿದೆ.. ನಮ್ಮ ಹಿಂದಿನವರು ಮದ್ಯಪಾನ ಮಾಡುವುದ ನಾವು ನೋಡಿದ್ದೇವೆ. ಅವರು ಅನಾರೋಗ್ಯ, ಅಮಲು ವ್ಯಸನದಿಂದ ಆದ ದುಷ್ಪರಿಣಾಮ ಕಣ್ಣಾರೆ ಕಂಡಿದ್ದು, ನಾವು ರಾತ್ರಿ ಕಂಡ ಬಾವಿಗೆ ಹಗಲು ಬೀಳಲು ತಯಾರಿಲ್ಲ ಎಂದು ಕಾಲನಿ ವಾಸಿಗಳು ಕಡಾಖಂಡಿತವಾಗಿ ಹೇಳುತ್ತಾರೆ. ಕಾಲನಿ ವಾಸಿಗಳು ಶ್ರಮ ಜೀವಿಗಳು. ಬೆಟ್ಟಕ್ಕೆ ಹೋಗಿ ಬೀಳು-ಬಳ್ಳಿ ತಂದು ಚಂದ ಬುಟ್ಟಿ ನೇಯುತ್ತಾರೆ. ಬುಟ್ಟಿ, ದರಲೆ ಗೂಡು, ಕಲ್ಲಿ, ಅನ್ನ ಬಸಿಯುವ ಸಿಬಿಲು, ಗೆರ್ಸಿ ನೇದು ತಾವೇ ಮನೆ ಮನೆಗೆ ಹೋಗಿ ಮಾರಿ ಬರುತ್ತಾರೆ.

ಬಾಚುಕುಳಿ ಮೂಲ ನಿವಾಸಿಗಳು ಕಾಲನಿ ಸಮಸ್ಯೆ ಮೊಟ್ಟಮೊದಲು ತೆರೆದಿಟ್ಟಿದ್ದೇ ವಿಜಯವಾಣಿ. 2018,ಆ.2 ರಂದ ಕಾಲನಿ ವಾಸಿಗಳ ಸಂಕಷ್ಟದ ಬದುಕು ಮಾಧ್ಯಮಗಳು ಅನಾವರಣ ಮಾಡಿದ ನಂತರ ಬೈಂದೂರು ಶಾಸಕ ಸುಕುಮಾರ್ ಶೆಟ್ಟಿ, ಉಡುಪಿ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್, ಸಿದ್ದಾಪುರ ಜಿಪಂ ಸದಸ್ಯ ರೋಹತ್ ಕುಮಾರ್ ಶೆಟ್ಟಿ, ಕುಂದಾಪುರ ತಾಪಂ ಸದಸ್ಯ ಉಮೇಶ್ ಶೆಟ್ಟಿ ಕಲ್ಗದ್ದೆ ಭೇಟಿ ನೀಡಿದ್ದು, ಐಟಿಡಿಪಿ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ಮಾಡಿದ್ದರು. ಬೈಂದೂರು ಶಾಸಕರು 30 ಸಾವಿರ ರೂ ವೆಚ್ಚದಲ್ಲಿ ಕಾಲನಿಗೆ ರಸ್ತೆ ಸಂಪರ್ಕ ವ್ಯವಸ್ಥೆ ಆಶ್ವಾಸನೆ ನೀಡಿದ್ದರು. ಅಂದಿನ ಜಿಲ್ಲಾಧಿಕಾರಿ ಕಾಲನಿಗೆ ಐದು ಮನೆ ಮಂಜೂರು ಆಡಿದ್ದು, ತಲಾ ಎರಡು ಲಕ್ಷ ಅನುದಾನದಲ್ಲಿ ಮಳೆಗಾಲದ ನಂತರ ಮನೆ ಕೆಲಸ ಆರಂಭಿಸಲಾಗುತ್ತದೆ ಎಂದು ಹೇಳಿಕೆ ಕೊಟ್ಟಿದ್ದರು. ಜಿಪಂ ಸದಸ್ಯ ರೋಹಿತ್ ಕುಮಾರ್ ಶೆಟ್ಟಿ ಸ್ವಂತ ಹಣಹಾಕಿ ಮನೆ ಕಟ್ಟಿಕೊಡುತ್ತೇನೆ ಎಂದಿದ್ದರು. ಐಟಿಡಿಪಿ ಅಧಿಕಾರಿಗಳು ನಾಲ್ಕು ಮನೆಗೆ 2 ಲಕ್ಷ ಹಾಗೂ ಒಂದು ಮನೆಗೆ 1.75 ಲಕ್ಷ ಅನುದಾನ ಮಂಜೂರಾಗಿದೆ. ಬೇಸಿಗೆಯಲ್ಲಿ ಮನೆ ಕಟ್ಟಿಕೊಳ್ಳಲು ಎಲ್ಲಾ ವ್ಯವಸ್ಥೆ ಮಾಡಲಾಗುತ್ತದೆ ಎಂದಿದ್ದರು.

ಜಿಲ್ಲಾ ಪಂಚಾಯಿತಿ ಸದಸ್ಯ ಪ್ರಸಕ್ತ ಮರಳು ಸಿಗದಿದ್ದರಿಂದ ಮನೆ ಕಟ್ಟಲು ಆಗುತ್ತಿಲ್ಲ ಎಂದರೆ, ಐಟಿಡಿಪಿ ಅಧಿಕಾರಿಗಳು 2 ಲಕ್ಷದಲ್ಲಿ ಘಟಕ ವೆಚ್ಚ ಭರಿಸಬೇಕಿದ್ದು, ಅದರಲ್ಲಿ ಮನೆ ಕಟ್ಟಲು ಆಗೋದಿಲ್ಲ. ಅದಕ್ಕಾಗಿ ಘಟಕ ವಚ್ಚ 4 ಲಕ್ಷ ಕೊಡುವಂತೆ ಶಿಪಾರಸ್ಸು ಮಾಡಿ ಪ್ರಸ್ತಾವನೆ ಸರ್ಕಾರಕ್ಕೆ ಕಳುಹಿಸಲಾಗಿದೆ. ಸರ್ಕಾರದಿಂದ ಅಪ್ರೂವೆಲ್ ಸಿಕ್ಕ ನಂತರ ಮನೆ ನಿರ್ಮಿಸಲು ಅನುಕೂಲ ಮಾಡಿಕೊಡಲಾಗುತ್ತದೆ ಎನ್ನುತ್ತಾರೆ. ಮಂಜೂರಾದ ಹಣದಲ್ಲಿ ಕೊರಗರೇ ಮನೆ ಕಟ್ಟಿಕೊಳ್ಳುವುದಾರೆ ನಮ್ಮದೇನು ಅಭ್ಯಂತರವಿಲ್ಲ ಎಂದು ಸೇರಿಸುತ್ತಾರೆ. ಕೊರಗ ಕುಟುಂಬ ಮನೆ ಕಟ್ಟಿಕೊಳ್ಳಲು ಅಸಹಾಯಕರಾದರೆ ಇಲಾಖೆಯೇ ಮುಂದೆ ನಿಂತು ಮನೆ ಕಟ್ಟಿಕೊಡಬೇಕು ಎನ್ನುವ ನಿಯಮ ಅಧಿಕಾರಿಗಳು ಮರೆತಿದ್ದಾರೆ..! ಮಳೆಗಾದಲ್ಲಿ ಮನೆ ಕುಸಿಯೋದಂತ ನಿಶ್ಚಿತ. ಎಲ್ಲಾದರೂ ಅನಾಹುತ ಸಂಭವಿಸಿದರೆ ಅದಕ್ಕೆ ಹೊಣೆ ಯಾರು?

ಚುನಾವಣೆ ಬಂದಾಗ ಮಾತ್ರ ನಮ್ಮ ಕಾಲನಿ ನೆನಪಾಗಿ ಎಲ್ಲರೂ ಬರುತ್ತಾರೆ. ಅಂಗೈಯಲ್ಲಿ ಆಕಾಶ ತೋರಿಸದ್ದು ಬಿಟ್ಟರೆ ಕಾಲನಿ ಚಿತ್ರಣ ಬದಲಾಗಿಲ್ಲ. ರಟ್ಟೆ ಗಟ್ಟಿಯಿದ್ದವರ ಕೆಲಸಕ್ಕೆ ಕರೆಯುತ್ತಾರೆ. ಕುಡಿಯುವ ನೀರು ಬಿಟ್ಟರೆ ಕಾಲನಿ ಮೂಲಸೌಲಭ್ಯ ವಂಚಿತ. ಮನೆ ಭದ್ರವಿಲ್ಲದ ಕಾರಣ ಕೆಲವರು ತಮ್ಮ ಸಂಬಂಧಿಕರ ಮನೆಯಲ್ಲಿ ಉಳಿದುಕೊಂಡಿದ್ದಾರೆ. ರಟ್ಟೆ ಕುಟ್ಟಬೇಕು ಹೊಟ್ಟೆ ತುಂಬಬೇಕು. ಇಂತಾ ಪರಿಸ್ಥಿತಿಯಲ್ಲಿ ನಾವಿದ್ದು ಮನೆಯೂ ಭದ್ರವಿಲ್ಲದೆ ಆತಂಕ ಸೃಷ್ಟಿಸಿದೆ. ಮಳೆಗಾಲದಲ್ಲಿ ಕೈಯ್ಯಾಸರೆಯಲ್ಲಿ ಇರುವ ತಾಯಿ ಮಕ್ಕಳ ಕಟ್ಟಿಕೊಂಡು ಎಲ್ಲಿಗೆ ಹೋಗಬೇಕು ಎನ್ನುವ ಚಿಂತೆ ಕಾಡುತ್ತಿದೆ.
– ಬಾಬಿ ಕೊರಗ, ಬಾಚಿಕೊಡ್ಲು ಕಾಲನಿ ನಿವಾಸಿ.

ಇಂದಿರಾ ಗಾಂಧಿ ಹತ್ಯೆ ಸಮಯ ನಮ್ಮ ಕಾಲನಿ ಮನೆಗಳಿಗೆ ಪೌಂಡೇಶನ್ ಹಾಕಿ ಮನೆ ಕಟ್ಟಲಾಗಿತ್ತು. ಮನೆ ಮಾಡು ಸಡಿಲ ಗೊಂಡಿದ್ದು, ಸೋರುತ್ತದೆ. ಗೋಡೆ ಮೇಲೂ ನೀರು ಬರುತ್ತದೆ. ಮನೆ ಅಪಾಯದಲ್ಲಿದೆ. ನಾವು ಮನೆ ಕಟ್ಟುವುದಾ ಹೊಟ್ಟೆ ತುಂಬಿಸಿಕೊಳ್ಳುವುದಾ ಗೊತ್ತಾಗುತ್ತಿಲ್ಲ. ಮೊಮ್ಮಕ್ಕಳಾದರೂ ಭದ್ರವಾದ ಮನೆಯಲ್ಲಿ ವಾಸಮಾಡಬೇಕು ಎನ್ನುವ ನನ್ನಾಸೆ ಬಂಜೆ ಆಗುತ್ತದಾ ಎನ್ನುವ ಭಯ ಕಾಡುತ್ತಿದೆ.
– ಬಸವ ಕೊರಗ, ಬಾಚುಕುಳಿ ಕಾಲನಿ ಹಿರಿಯ.

ಕಳೆದ ಮಳೆಗಾಲದಲ್ಲಿ ನಾವೇ ಮನೆ ಮಾಡಿಗೆ ಟಾರ್ಪಲ್ ಹಾಕಿಕೊಂಡಿದ್ದು, ಗ್ರಾಮ ಪಂಚಾಯಿತಿ ಅದಕ್ಕೆ ಹಣ ಕೊಟ್ಟಿಲ್ಲ. ಮೊಟ್ಟೆ. ಬೇಳೆ, ಪೌಷ್ಟಿಕ ಆಹಾರ ಮಾತ್ರ ನಮಗೆ ನಿಯಮಿತವಾಗಿ ಸಿಗುತ್ತದೆ. ಮನೆ ತೀರಾ ಶಿಥಿಲಾವಸ್ಥೆ ತಲುಪಿದ್ದು, ಮಳೆಗಾದಲ್ಲಿ ಅಪಾಯ ಸಂಭವಿಸೋದು ಗ್ಯಾರೆಂಟಿ. ಇನ್ನೇನು ಮಳೆಗಾಲಕ್ಕೆ ಒಂದು ತಿಂಗಳು ಬಾಕಿಯಿದ್ದು, ಮನೆ ಆಗೋದು ಅನುಮಾನ. ನಮಗೆ ಈ ಮನೆಯಲ್ಲಿ ವಾಸ ಮಾಡೋದಕ್ಕೆ ಧೈರ್ಯ ಸಾಲುತ್ತಿಲ್ಲ. ನಾವು ಜಿಲ್ಲಾಧಿಕಾರಿ ಕಚೇರಿಯನ್ನೋ ಕುಂದಾಪುರ ಮಿನಿ ವಿಧಾನ ಸೌಧದಲ್ಲೋ ಹೊಸ ಮನೆ ಆಗುವ ತನಕ ಉಳಿದುಕೊಳ್ಳಲು ಅವಕಾಶ ನೀಡಲಿ.
– ದಿನೇಶ, ಕೂಲಿ ಕಾರ್ಮಿಕ ಕಾಲನಿ ನಿವಾಸಿ.

ಮನೆ ಹೆಂಚು ದೊಂಬೆ ಜಾರಿ ಮನೆ ಮಳೆಗಾದಲ್ಲಿ ಸೂರುತ್ತಿದ್ದು, ಮಳೆ ಬಂದರೆ, ಕೂತು ಕಾಲ ಕಳೆಯಬೇಕು. ಬೆಟ್ಟಕ್ಕೆ ಹೋಗಿ ಕಷ್ಟಪಟ್ಟು ಬೀಳು ತಂದು ಮನೆಯಲ್ಲಿ ಕೂತು ತಟ್ಟೆ ಬುಟ್ಟಿ ನೇದು ಭಯವಾಗುತ್ತದೆ. ಯಾವತ್ತು ಮನೆ ಬೀಳುತ್ತದೋ ಎನ್ನೋದಕ್ಕೆ ಬರೋದಿಲ್ಲ. ಅಭದ್ರತೆಯ ಭಯದಲ್ಲಿ ನಾವು ದಿನ ಕಳೆಯುತ್ತಿದ್ದು, ಮನೆ ಆಗೋದು ಎಂದು.
– ಪ್ರಮೋದ್, ಕಾಲನಿ ನಿವಾಸಿ

Comments are closed.