ಉಡುಪಿ: ಬಸ್ ಟೈಮಿಂಗ್ ವಿಷಯದಲ್ಲಿ ಖಾಸಗಿ ಬಸ್ ಚಾಲಕ ಮತ್ತು ನಿರ್ವಾಹಕ ಗ್ರಾಮಾಂತರ ಸಾರಿಗೆ ಬಸ್ ಚಾಲಕ ನಿರ್ವಾಹಕರ ಮೇಲೆ ಭಾನುವಾರ ಸಂಜೆ ನಡೆಸಿದ ಹಲ್ಲೆ ವಿರೋಧಿಸಿ ಸಾರಿಗೆ ಸಿಬ್ಬಂದಿ ಸೋಮವಾರ ಕುಂದಾಪುರ ಡಿಪೋದಿಂದ ಬಸ್ ತೆಗೆಯದೆ ಪ್ರತಿಭಟನೆ ನಡೆಸಿದರು.
ಸಾರಿಗೆ ಬಸ್ ಸಿಬ್ಬಂದಿ ದಿಢೀರ್ ಪ್ರತಿಭಟನೆ ಹಿನ್ನೆಲೆಯಲ್ಲಿ ಬೆಳಗ್ಗೆ 8 ಗಂಟೆ ತನಕ ಬಸ್ ರಸ್ತೆಗೆ ಇಳಿಯದಿದ್ದ ರಿಂದ ಪ್ರಯಾಣಿಕರು ಪರದಾಡಿದರು. ರಾಜ್ಯ ಸಾರಿಗೆ ನಿಗಮ ಅಧಿಕಾರಿಗಳು ಮನ ಒಲಿಕೆ ನಂತರ ಸಿಬ್ಬಂದಿ ಧರಣಿ ಹಿಂದಕ್ಕೆ ಪಡೆದ ನಂತರ ಬಸ್ ರಸ್ತೆಗೆ ಇಳಿಯಿತು. ಉಡುಪಿ ಸಿದ್ದಾಪುರ ಕೊಲ್ಲೂರು ಸಾರಿಗೆ ಬಸ್ ನಿರ್ವಾಹಕ ವಿಜಾಪುರ ಮೂಲದ ಮಾಳಪ್ಪ ಹಲ್ಲೆಗ ಒಳಗಾಗಿ ಕುಂದಾಪುರ ಸರ್ಕಾರಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿದ್ದು, ಚಾಲಕ ಮಂಜುನಾಥ ಮಡಿವಾಳ ಕೂಡಾ ಹಲ್ಲೆಗೆ ಒಳಗಾಗಿದ್ದಾರೆ.
ಉಡುಪಿಯಿಂದ ಸಿದ್ದಾಪುರ ಮಾರ್ಗವಾಗಿ ಕೊಲ್ಲೂರಿಗೆ ಬರುತ್ತಿದ್ದ ಗ್ರಾಮಾಂತರ ಸಾರಿಗೆ ಬಸ್ಸಿಗೆ ಹಾಲಾಡಿ ಸಮೀಪ ಖಾಸಗಿ ಬಸ್ ಸೈಡ್ ಕೊಟ್ಟಿದ್ದು, ಸಾರಿಗೆ ಬಸ್ ಖಾಸಗಿ ಬಸ್ಸಿಗಿಂತ ಮುಂದಕ್ಕೆ ಹೋದ ನಂತರ ಖಾಸಗಿ ಬಸ್ ಸಾರಿಗೆ ಬಸ್ ಏವರ್ ಟೇಕ್ ಮಾಡಿ ಶಂಕರನಾರಾಯಣ ಬಳಿ ಸಾರಿಗೆ ಬಸ್ಸಿಗೆ ಖಾಸಗಿ ಬಸ್ ಅಡ್ಡವಿಟ್ಟು ಖಾಸಗಿ ಬಸ್ ಚಾಲಕ ಅರುಣ ಹಾಗೂ ನಿರ್ವಾಹಕ ಸೇರಿ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಸಾರಿಗೆ ಬಸ್ ಚಾಲಕನಿಗೆ ರಕ್ತಗಾಯವಾಗಿದ್ದು, ಕುಂದಾಪುರ ಸರ್ಕಾರಿ ಅಸ್ಪತ್ರೆಗೆ ದಾಖಲಾಗಿದ್ದಾರೆ. ಕುಂದಾಪುರ ಡಿಪೋ ಮೆನೇಜರ್ ಹಾಗೂ ಸಿಬ್ಬಂದಿ ಆಸ್ಪತ್ರೆಗೆ ಭೇಟಿ ನೀಡಿದ್ದಾರೆ.
ಶಂಕರನಾರಾಯಣ ಠಾಣೆ ಪೊಲೀಸರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಾಯಾಳುವಿನ ಹೇಳಿಕೆ ಪಡೆದಿದ್ದಾರೆ.