ಕರಾವಳಿ

ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷದವರ ಹೃದಯ ಶ್ರೀಮಂತಿಕೆಗೆ ತಲೆಬಾಗುವೆ: ಪ್ರಮೋದ್ ಮಧ್ವರಾಜ್

Pinterest LinkedIn Tumblr

ಕುಂದಾಪುರ: ಜೆಡಿ‌ಎಸ್‌ಗೆ ಸಿಕ್ಕಿದ ಸೀಟಿನಲ್ಲಿ ಕಾಂಗ್ರೆಸ್ ಪಕ್ಷದವರನ್ನು ನಿಲ್ಲಿಸುತ್ತಾರೆಂದರೆ ಅದು ಜೆಡಿ‌ಎಸ್‌ನವರ ಹೃದಯ ಶ್ರೀಮಂತಿಕೆ. ಕಾಂಗ್ರೆಸ್ ಮುಖಂಡರು ಜೆಡಿ‌ಎಸ್ ಚಿಹ್ನೆಯಡಿಯಲ್ಲಿ ನಿಲ್ಲಲು ನಮ್ಮದೇನು ಅಭ್ಯಂತರವಿಲ್ಲ ಎಂದು ನನ್ನ ಸ್ಪರ್ಧೆಗೆ ಅವಕಾಶ ಮಾಡಿಕೊಟ್ಟಿದ್ದು ನಮ್ಮ ಪಕ್ಷದವರ ಹೃದಯ ಶ್ರೀಮಂತಿಕೆ. ಭಾರತ ದೇಶದ ಇತಿಹಾಸದಲ್ಲಿ ಒಂದು ಪಕ್ಷದ ಸದಸ್ಯನಿಗೆ ಇನ್ನೊಂದು ಪಕ್ಷದ ಚಿಹ್ನೆ ಸಿಕ್ಕಿದ ದಾಖಲೆ ಇದ್ದರೆ ಅದು ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲಿ ಮಾತ್ರ. ಶಾಸಕನಾಗಿ, ಮಂತ್ರಿಯಾಗಿ ಒಂದು ಪೈಸೆಯೂ ಲಂಚ ಪಡೆಯದೆ ಪ್ರತಾಪಚಂದ್ರ ಶೆಟ್ಟರ ಪ್ರಮಾಣಿಕತನ ಹೇಗಿದೆ ಅದೇ ಪ್ರಮಾಣಿಕತೆಯನ್ನು ಮೈಗೂಡಿಸಿಕೊಂಡು ಜವಾಬ್ದಾರಿ ನಿಭಾಯಿಸಿದ್ದೇನೆ ಎಂಬ ಹೆಮ್ಮೆಯಿದೆ ಎಂದು ಉಡುಪಿ ಚಿಕ್ಕಮಗಳುರು ಲೋಕಸಭಾ ಕ್ಷೇತ್ರದ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಅಭ್ಯರ್ಥಿ ಪ್ರಮೋದ್ ಮಧ್ವರಾಜ್ ಹೇಳಿದರು.

ಕಾರ್ಯಕರ್ತರು ಒಗ್ಗೂಡಿ ಕೆಲಸ ಮಾಡಿದರೆ ಗೆಲುವು ಸಾಧ್ಯ: ಪ್ರಮೋದ್
ತಾಯಿ ತನ್ನ ಮಗುವನ್ನು ಕೊಲ್ಲಬೇಕು ಎಂದು ಯೋಚನೆ ಮಾಡಿದ್ದರೆ ಅದನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ. ಒಬ್ಬ ಅಭ್ಯರ್ಥಿಯನ್ನು ಸೋಲಿಸಬೇಕು ಎಂದು ಕಾರ್ಯಕರ್ತರು ಮನಸ್ಸು ಮಾಡಿದರೆ ಆ ಅಭ್ಯರ್ಥಿಯನ್ನು ಯಾರಿಂದಲೂ ಗೆಲ್ಲಿಸಲು ಸಾಧ್ಯವಿಲ್ಲ. ಕಾರ್ಯಕರ್ತರೇ ನನಗೆ ಆಸ್ತಿ. ನೀವೆಲ್ಲ ಒಗ್ಗೂಡಿ ಕೆಲಸ ಮಾಡಿದರೆ ಮಾತ್ರ ನನಗೆ ಗೆಲುವು ಸಾಧ್ಯ ಎಂದು ಉಡುಪಿ ಚಿಕ್ಕಮಗಳೂರು ಕ್ಷೇತ್ರದ ಮೈತ್ರಿ ಅಭ್ಯರ್ಥಿ ಪ್ರಮೋದ್ ಮಧ್ವರಾಜ್ ಹೇಳಿದರು. ನಮ್ಮದು ಹಾಲುಜೇನಿನ ಮೈತ್ರಿ. ನಾನು ಕಾಂಗ್ರೆಸ್‌ನ ಅಭ್ಯರ್ಥಿಯಾಗಿ, ಜೆಡಿ‌ಎಸ್ ಚಿಹ್ನೆಯಡಿಯಲ್ಲಿ ಕಾಂಗ್ರೆಸ್-ಜೆಡಿ‌ಎಸ್‌ನ ಮೈತ್ರಿ ಅಭ್ಯರ್ಥಿಯಾಗಿ ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತಿದ್ದೇನೆ ಎಂದರು.

ಆ ಬ್ಯಾಗ್ ಗುಟ್ಟೇನು?!
ನಾನು ಶಾಸಕನಾದ ಅವಧಿಯಲ್ಲಿ ೨೨೪ ಶಾಸಕರಿಗೂ ಒಂದು ಬ್ಯಾಗ್ ಅನ್ನು ಕೊಟ್ಟಿದ್ದರು. ಆದರೆ ಆ ಬ್ಯಾಗ್ ಅನ್ನು ಜನಸೇವೆಗಾಗಿ ಉಪಯೋಗ ಮಾಡಿದ್ದು ನಾನು ಮಾತ್ರ. ೨೨೩ ಮಂದಿ ಶಾಸಕರು ಆ ಬ್ಯಾಗ್ ಅನ್ನು ಉಪಯೋಗ ಮಾಡಿಕೊಳ್ಳಲಿಲ್ಲ ಎಂದ ಪ್ರಮೋದ್ ಅದೇ ಬ್ಯಾಗ್ ಅನ್ನು ಸಭೆಗೆ ತಂದು ಕಾರ್ಯಕರ್ತರಿಗೆ ತೋರಿಸಿದರು. ಇದೇ ಬ್ಯಾಗ್ ಅಲ್ಲಿ ಉಡುಪಿ ವಿಧಾನಸಭಾ ಕ್ಷೇತ್ರ ಜನರ ಬೇಡಿಕೆಗಳ ಅಹವಾಲು ಪತ್ರ, ಅರ್ಜಿಗಳನ್ನು ತುಂಬಿ ಹೆಗಲ ಮೇಲಿಟ್ಟುಕೊಂಡು ವಿಧಾನಸೌಧದಲ್ಲಿರುವ ಮಂತ್ರಿಗಳ ಕಚೇರಿಗೆ ಅಲೆದಾಡಿ ನನ್ನ ಕ್ಷೇತ್ರದ ಜನರ ಬೇಡಿಕೆಗಳನ್ನು ಒಬ್ಬ ಭಿಕ್ಷುಕನಂತೆ ಬೇಡಿ ೨ಸಾವಿರ ಕೋಟಿಗಿಂತಲೂ ಅಧಿಕ ಅನುದಾನವನ್ನು ನನ್ನ ಕ್ಷೇತ್ರಕ್ಕೆ ತಂದುಕೊಟ್ಟಿದ್ದೆ. ನನ್ನ ಕೆಲಸ ನೋಡಿ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸಂಸದೀಯ ಕಾರ್ಯದರ್ಶಿಯಾಗಿ, ಸಹಾಯಕ ಮಂತ್ರಿಯಾಗಿ, ಕ್ಯಾಬಿನೇಟ್ ಮಂತ್ರಿಯಾಗಿ ಆಯ್ಕೆ ಮಾಡಿ ಜನರ ಕೆಲಸ ಮಾಡಲು ಅವಕಾಶ ಮಾಡಿಕೊಟ್ಟರು. ಶಾಸಕನಾದ ಪ್ರಥಮ ಅವಧಿಯಲ್ಲೇ ಮೂರು ಭಡ್ತಿಗಳನ್ನು ಪಡೆದ ಶಾಸಕರಿದ್ದರೆ ಅದು ನಾನೊಬ್ಬನೆ. ಇದು ನನಗೆ ಪಕ್ಷ ನೀಡಿದ ಜವಾಬ್ದಾರಿ ಎಂದರು.

ನನ್ನದೊಂದು ವೀಕ್ನೆಸ್ ಇದೆ!
ನನಗೊಂದು ದೌರ್ಭಲ್ಯವಿದೆ. ನನಗೆ ನನ್ನನ್ನು ಗೆಲ್ಲಿಸಿದ ಕ್ಷೇತ್ರದ ಜನರ ಮೇಲೆ ಅತೀಯಾದ ಸ್ವಾರ್ಥ. ನನ್ನ ಸ್ವಾರ್ಥ ಹೆಚ್ಚಾಗಿ ಸುತ್ತಮುತ್ತಲಿನ ಕ್ಷೇತ್ರವನ್ನು ಸ್ವಲ್ಪ ನಿರ್ಲಕ್ಷ ಮಾಡಿದ್ದೇನೆ. ಇದನ್ನು ಪ್ರಾಮಾಣಿಕವಾಗಿ ಒಪ್ಪಿಕೊಳ್ಳುತ್ತೇನೆ. ನಿಮ್ಮನ್ನೆಲ್ಲಾ ನಿರ್ಲಕ್ಷ ಮಾಡಿದ್ದಕ್ಕೆ ದೇವರು ಇಂದು ನನ್ನನ್ನು ನಿಮ್ಮ ಮುಂದೆ ದೂಡಿ ಬಿಟ್ಟಿದ್ದಾನೆ. ಹುಲಿಯ ಬಾಯಿಗೆ ಜಿಂಕೆ ಮರಿಯನ್ನು ಬಿಟ್ಟಂತೆ ಆಗಿದೆ. ದೇವರಿಗೆ ನಾನು ಎಂಪಿಯಾಗಿ ನಿಲ್ಲಬೇಕು ಎಂದಿತ್ತು. ಹೀಗಾಗಿ ನನ್ನನ್ನು ಉಡುಪಿಯಲ್ಲಿ ಸೋಲಿಸಿದ್ದಾನೆ. ಉಡುಪಿಯಲ್ಲಿ ಸೋಲಿಸಿದ್ದರಿಂದ ನಾನು ಇದೀಗ ನಿಮ್ಮ ಮುಂದೆ ಈ ರೂಪದಲ್ಲಿ ಬಂದು ನಿಂತಿದ್ದೇನೆ. ಇನ್ನು ಮುಂದೆ ಕುಂದಾಪುರ ಕ್ಷೇತ್ರ ಸಹಿತ ಎಂಟು ವಿಧಾನಸಭಾ ಕ್ಷೇತ್ರಗಳನ್ನು ಉಡುಪಿ ವಿಧಾನಸಭಾ ಕ್ಷೇತ್ರವನ್ನು ಯಾವ ರೀತಿ ನೋಡಿಕೊಂಡಿದ್ದೆನೊ ಅದೇ ರೀತಿ ನೋಡಿಕೊಳ್ಳುತ್ತೇನೆ. ಯಾವುದೇ ಪಕ್ಷಪಾತ ಮಾಡಲ್ಲ. ಉಡುಪಿ ಕ್ಷೇತ್ರದ ಬಗೆಗಿದ್ದಂತಹ ನನ್ನ ಸ್ವಾರ್ಥ ಇದೀಗ ವಿಸ್ತಾರವಾಗಿದೆ ಎಂದು ಪ್ರಮೋದ್ ಹಾಸ್ಯಚಟಾಕಿ ಹಾರಿಸಿದರು.

ಜನವಿರೋಧಿ ಮರಳು ನೀತಿಯನ್ನು ಬದಲಿಸುವ ಅಧಿಕಾರ ಸಂಸದೆ ಶೋಭಾ ಕರಂದ್ಲಾಜೆಯವರಿಗಿತ್ತು. ಐದು ವರ್ಷದಲ್ಲಿ ಯಾವುದೇ ಕೆಲಸ ಮಾಡಿಲ್ಲ. ಇವತ್ತು ಮರಳು ಸಮಸ್ಯೆಗೆ ಕೇಂದ್ರ ಸರ್ಕಾರ ಹಾಗೂ ಶೋಭಾ ಕರಂದ್ಲಾಜೆಯವರೇ ನೇರ ಹೊಣೆ. ಏಳು ಜನ ಮೀನುಗಾರರು ನಾಪತ್ತೆಯಾಗಿ ನೂರು ದಿನ ಕಳೆಯುತ್ತಾ ಬಂತು. ೫೦ಸಾವಿರ ಮೀನುಗಾರರು ರಸ್ತೆಗೆ ಬಂದು ಪ್ರತಿಭಟನೆ ಮಾಡಿದರೂ ಶೋಭಾ ಮಾತನಾಡಲಿಲ್ಲ. ನಿರ್ಮಲಾ ಸೀತಾರಾಮನ್ ಅವರು ಮೀನುಗಾರರ ಕುಟುಂಬವನ್ನು ಭೇಟಿ ಮಾಡಿ ಸಾಂತ್ವಾನ ಹೇಳುವ ಕೆಲಸಕ್ಕೂ ಮುಂದಾಗಿಲ್ಲ. ಆದರೆ ಮೊನ್ನೆಯಷ್ಟೆ ಶೋಭಾ ಕರಂದ್ಲಾಜೆಯವರ ನಾಮಪತ್ರ ಸಲ್ಲಿಸುವ ಕಾರ್ಯಕ್ರಮಕ್ಕೆ ಬಂದಾಗ ಇಬ್ಬರೂ ಮೀನುಗಾರರ ಮನೆಗೆ ಹೋಗಿ ಸಾಂತ್ವಾನ ಹೇಳಿದ್ದಾರೆ. ಚುನಾವಣೆ ಬಂದಾಗ ಮಾತ್ರ ಇವರಿಗೆ ಮೀನುಗಾರರ ನೆನಪಾಗುತ್ತದೆ ಎಂದು ಪ್ರಮೋದ್ ಮಧ್ವರಾಜ್ ಆಕ್ರೋಶ ವ್ಯಕ್ತಪಡಿಸಿದರು.

Comments are closed.