ಕ್ರೀಡೆ

ಸೋಲಿನ ಸರಣಿಯನ್ನು ಮುಂದುವರಿಸಿದ ಆರ್‌ಸಿಬಿ ! ರಾಜಸ್ಥಾನ್ ರಾಯಲ್ಸ್​ ವಿರುದ್ಧ ಸೋಲು ಕಂಡ ವಿರಾಟ್ ಕೊಹ್ಲಿ ಪಡೆ

Pinterest LinkedIn Tumblr

ಬೆಂಗಳೂರು: 12ನೇ ಆವೃತ್ತಿಯ ಐಪಿಎಲ್​​ನಲ್ಲಿ ರಾಯಲ್ ಚಾಲೆಂಜರ್ಸ್​ ಬೆಂಗಳೂರು ತಂಡ ತನ್ನ ಸೋಲಿನ ಸರಣಿಯನ್ನು ಮುಂದುವರಿಸಿದೆ. ಇಲ್ಲಿನ ಎಸ್​ಎಂಎಸ್ ಕ್ರೀಡಾಂಗಣದಲ್ಲಿ ನಡೆದ ರಾಜಸ್ಥಾನ್ ರಾಯಲ್ಸ್​ ವಿರುದ್ಧದ ಪಂದ್ಯದಲ್ಲಿ ಬ್ಯಾಟಿಂಗ್-ಬೌಲಿಂಗ್​​ನಲ್ಲಿ ಕಳಪೆ ಪ್ರದರ್ಶನ ತೋರಿದ ಆರ್​​ಸಿಬಿ ಟೂರ್ನಿಯಲ್ಲಿ ಸತತ 4ನೇ ಸೋಲುಕಂಡಿದೆ. ಇತ್ತ ರಹಾನೆ ಪಡೆ 8 ವಿಕೆಟ್​ಗಳ ಭರ್ಜರಿ ಜಯದೊಂದಿಗೆ ಗೆಲುವಿನ ಲಯ ಕಂಡುಕೊಂಡಿದೆ.

ಇದರೊಂದಿಗೆ ಅಂಕಪಟ್ಟಿಯಲ್ಲಿ ಖಾತೆ ತೆರೆದುಕೊಂಡಿದೆ. ಅತ್ತ ವಿರಾಟ್ ಕೊಹ್ಲಿ ಪಡೆಯು ಸತತ ನಾಲ್ಕನೇ ಸೋಲಿಗೆ ಗುರಿಯಾಗಿದ್ದು, ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ.

ತಲಾ ಮೂರು ಸೋಲುಗಳನ್ನು ಅನುಭವಿಸಿದ್ದರಿಂದ ಈ ಪಂದ್ಯವು ಇತ್ತಂಡಗಳಿಗೂ ನಿರ್ಣಾಯಕವೆನಿಸಿತು. ಆದರೆ ವಿರಾಟ್ ಕೊಹ್ಲಿ ಹಾಗೂ ಎಬಿ ಡಿ ವಿಲಿಯರ್ಸ್‌ಗಳಂತಹ ಸ್ಟಾರ್ ಬ್ಯಾಟ್ಸ್‌ಮನ್‌ಗಳು ವೈಫಲ್ಯವನ್ನು ಅನುಭವಿಸಿರುವುದು ಹಿನ್ನಡೆಗೆ ಕಾರಣವಾಯಿತು. ಪಾರ್ಥಿವ್ ಪಟೇಲ್ (67) ಸಮಯೋಚಿತ ಅರ್ಧಶತಕದ ಹೊರತಾಗಿಯೂ ನಾಲ್ಕು ವಿಕೆಟ್ ನಷ್ಟಕ್ಕೆ 158 ರನ್ ಗಳಿಸಲಷ್ಟೇ ಶಕ್ತವಾಯಿತು.

ಬಳಿಕ ಗುರಿ ಬೆನ್ನಟ್ಟಿದ ರಾಜಸ್ಥಾನಕ್ಕೆ ಜೋಸ್ ಬಟ್ಲರ್ (59), ಸ್ಟೀವ್ ಸ್ಮಿತ್ (38) ಹಾಗೂ ರಾಹುಲ್ ತ್ರಿಪಾಠಿ (31*) ಉಪಯುಕ್ತ ಇನ್ನಿಂಗ್ಸ್ ಕಟ್ಟುವ ಮೂಲಕ ಇನ್ನು ಒಂದು ಎಸೆತ ಬಾಕಿ ಉಳಿದಿರುವಂತೆ ಗೆಲುವು ದಾಖಲಿಸಿತು. ಇನ್ನೊಂದೆಡೆ ಆರ್‌ಸಿಬಿ ಸತತ ನಾಲ್ಕನೇ ಸೋಲಿಗೆ ಗುರಿಯಾಗಿರುವುದು ಅಭಿಮಾನಿಗಳಲ್ಲಿ ಬೇಸರ ಹಾಗೂ ಆಕ್ರೋಶಕ್ಕೆ ಗುರಿಯಾಗಿಸಿದೆ.

ಸವಾಲಿನ ಮೊತ್ತವನ್ನು ಬೆನ್ನಟ್ಟಿದ ರಾಜಸ್ಥಾನ್ ತಂಡಕ್ಕೆ ನಾಯಕ ಅಜಿಂಕ್ಯ ರಹಾನೆ ಹಾಗೂ ಜೋಸ್ ಬಟ್ಲರ್ ಉತ್ತಮ ಆರಂಭವೊದಗಿಸಿದರು. ರಹಾನೆ ಎಚ್ಚರಿಕೆಯ ಬ್ಯಾಟಿಂಗ್ ಪ್ರದರ್ಶಿಸಿದರೆ ಬಟ್ಲರ್ ಬಿರುಸಿನ ಆಟವನ್ನು ಪ್ರದರ್ಶಿಸಿದರು.

ಪರಿಣಾಮ 5.3 ಓವರ್‌ಗಳಲ್ಲಿ ತಂಡದ ಮೊತ್ತ 50ರ ಗಡಿ ದಾಟಿತು. ಇದರೊಂದಿಗೆ ಆರ್‌ಸಿಬಿ ಪಾಳೇಯದಲ್ಲಿ ಆತಂಕ ಮಡುಗಟ್ಟಿತು. ಈ ಹಂತದಲ್ಲಿ ದಾಳಿಗಿಳಿದ ಯುಜ್ವೇಂದ್ರ ಚಹಲ್, ನಾಯಕ ರಹಾನೆರನ್ನು (22) ಎಲ್‌ಬಿಡಬ್ಲ್ಯು ಬಲೆಗೆ ಸಿಲುಕಿದರು. ಆಗಲೇ ಮೊದಲ ವಿಕೆಟ್‌ಗೆ ಬಟ್ಲರ್ ಜತೆಗೆ 7.4 ಓವರ್‌ಗಳಲ್ಲಿ 60 ರನ್‌ಗಳ ಜತೆಯಾಟವನ್ನು ನೀಡಿದರು.

10 ಓವರ್‌ಗಳ ವೇಳೆಗೆ ರಾಜಸ್ಥಾನ್ ಸ್ಕೋರ್ 80/1. ಅಂದರೆ ಅಂತಿಮ 60 ಎಸೆತಗಳಲ್ಲಿ ತಂಡದ ಗೆಲುವಿಗೆ 79 ರನ್‌ಗಳ ಅವಶ್ಯಕತೆಯಿತ್ತು. ಅತ್ತ ಬಟ್ಲರ್ 38 ಎಸೆತಗಳಲ್ಲಿ ಅರ್ಧಶತಕ ಸಾಧನೆ ಮಾಡಿದರು.

ಈ ನಡುವೆ ಫಿಫ್ಟಿ ಬೆನ್ನಲ್ಲೇ ಬಟ್ಲರ್ ವಿಕೆಟ್ ನಷ್ಟವಾಯಿತು. 43 ಎಸೆತಗಳನ್ನು ಎದುರಿಸಿದ ಬಟ್ಲರ್ ಎಂಟು ಬೌಂಡರಿ ಹಾಗೂ ಸಿಕ್ಸರ್ ನೆರವಿನಿಂದ 59 ರನ್ ಗಳಿಸಿದರು.

ಬಟ್ಲರ್ ಹೊರಗಟ್ಟಿದ ಚಹಲ್ ಆತಿಥೇಯರ ಮೇಲೆ ಹೆಚ್ಚಿನ ಒತ್ತಡವನ್ನು ಹೇರಿದರು. ಅಲ್ಲದೆ ಅಂತಿಮ 5 ಓವರ್‌ಗಳಲ್ಲಿ ಗೆಲುವಿಗೆ 38 ರನ್‌ಗಳ ಅಗತ್ಯವಿತ್ತು.

ನಿರ್ಣಾಯಕ ಹಂತದಲ್ಲಿ ಸ್ಟೀವ್ ಸ್ಮಿತ್ ಕ್ಯಾಚ್ ಉಮೇಶ್ ಯಾದವ್ ಕೈಚೆಲ್ಲಿರುವುದು ಹಿನ್ನಡೆಗೆ ಕಾರಣವಾಯಿತು. ಇದರ ಪ್ರಯೋಜನ ಪಡೆದ ಸ್ಮಿತ್ ಹಾಗೂ ರಾಹುಲ್ ತ್ರಿಪಾಠಿ ಮೂರನೇ ವಿಕೆಟ್‌ಗೆ ನಿರ್ಣಾಯಕ 50 ರನ್‌ಗಳ ಜತೆಯಾಟದಲ್ಲಿ ಭಾಗಿಯಾಗುವ ಮೂಲಕ ತಂಡವನ್ನು ಗೆಲುವಿನ ದಡ ಸೇರಿಸಿದರು.

ಅಂತಿಮವಾಗಿ ರಾಜಸ್ಥಾನ್ 19.5 ಓವರ್‌ಗಳಲ್ಲಿ ಮೂರು ವಿಕೆಟ್ ನಷ್ಟಕ್ಕೆ ಗುರಿ ತಲುಪಿತು. ಆರ್‌ಸಿಬಿ ಪರ ಚಹಲ್ ಎರಡು ವಿಕೆಟ್ ಪಡೆದರೂ ಯಾವ ಪ್ರಯೋಜನವುಂಟಾಗಲಿಲ್ಲ.

Comments are closed.