ಕರಾವಳಿ

ಯುವಕರಿಗೆ ಉದ್ಯೋಗ ಕೊಟ್ಟರೇ ಬಿಜೆಪಿಯವರ ಬಾವುಟ ಹಿಡಿಯುವವರ್‍ಯಾರು?- ಜಯಮಾಲಾ

Pinterest LinkedIn Tumblr

ಕುಂದಾಪುರ: ಯುವಜನತೆ ಇಂದು ಹುಚ್ಚೆದ್ದು ಕುಣಿಯುತ್ತಿದ್ದಾರೆ. ಆದರೆ ಯುವಕರ ಆಲೋಚನೆಗೆ ಬಾರದಿರುವ ಅನೇಕ ವಿಚಾರಗಳಿವೆ. ದೇಶದಲ್ಲಿ ಉದ್ಯೋಗ ಸೃಷ್ಠಿಯಗುತ್ತಿಲ್ಲ. ಯುವಕರಿಗೆ ಉದ್ಯೋಗ ಕೊಟ್ಟರೆ ಬಿಜೆಪಿಯ ಬಾವುಟಗಳನ್ನು ಬೀದಿಯಲ್ಲಿ ಹಿಡಿಯುವವರಿರುವುದಿಲ್ಲ. ಹೀಗಾಗಿ ಇಪ್ಪತ್ತೇಳು ಲಕ್ಷ ಉದ್ಯೋಗ ಖಾಲಿ ಇದ್ದರೂ ಕೇಂದ್ರ ಸರ್ಕಾರ ಭರ್ತಿ ಮಾಡುತ್ತಿಲ್ಲ ಎಂದು ಉಡುಪಿ ಉಸ್ತುವಾರಿ ಸಚಿವೆ ಜಯಮಾಲಾ ಹೇಳಿದರು.

ಅವರು ಮಂಗಳವಾರ ಇಲ್ಲಿನ ಆರ್.ಎನ್ ಶೆಟ್ಟಿ ಮಿನಿ ಹಾಲ್‌ನಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದರು.

ಪ್ರತೀ ತಂದೆ-ತಾಯಿ ತಮ್ಮ ಮಕ್ಕಳಿಗೆ ಶಿಕ್ಷಣವನ್ನು ಕೊಡಿಸುವುದು ಮಕ್ಕಳು ಓದಿ ಕುಟುಂಬದ ಜವಾಬ್ದಾರಿ ಹೊತ್ತು ಅವರದ್ದೆ ಆದ ಬದುಕು ಕಟ್ಟಿಕೊಳ್ಳಲಿ ಎಂಬ ಉದ್ದೇಶದಿಂದ. ಯುವಜನತೆ ನೂರಾರು ಕನಸುಗಳನ್ನು ಕಟ್ಟಿಕೊಂಡು ಕಷ್ಟಪಟ್ಟು ವಿದ್ಯಾಭ್ಯಾಸ ನಡೆಸುವುದು ಯಾವುದಾದರೂ ಒಂದು ಕೆಲಸ ಸಿಗಲಿ ಎಂದು. ಆದರೆ ಇಪ್ಪತ್ತೇಳು ಲಕ್ಷ ಕೆಲಸಗಳು ಖಾಲಿ ಇರುವಾಗಲೂ ಉದ್ಯೋಗ ಕೊಡಲು ಸಾಧ್ಯವಾಗಿಲ್ಲ. ನಮ್ಮ ಮಕ್ಕಳನ್ನು ಕೇವಲ ಬೀದಿಯಲ್ಲಿ ಬಾವುಟಗಳನ್ನು ಹಿಡಿದು, ಕೂಗಾಡಲಷ್ಟೇ ಬಿಜೆಪಿ ಬಳಸಿಕೊಳ್ಳುತ್ತಿದೆ ಎಂದು ಸಚಿವೆ ಜಯಮಾಲಾ ಬಿಜೆಪಿ ಸರ್ಕಾರದ ವಿರುದ್ದ ಕಿಡಿಕಾರಿದರು.

ಕಳೆದ ಐದು ವರ್ಷದಲ್ಲಿ ಕೇಂದ್ರ ಸರ್ಕಾರ ಹಾಗೂ ಕೇಂದ್ರ ಸರ್ಕಾರವನ್ನು ಪ್ರತಿನಿಧಿಸುವ ಜನಪ್ರತಿನಿಧಿಗಳು ಕರಾವಳಿಗೆ ಏನೂ ಕೊಡುಗೆ ಕೊಟ್ಟಿಲ್ಲ. ಹಲವಾರು ಜ್ವಲಂತ ಸಮಸ್ಯೆಗಳು ಈ ಭಾಗದ ಜನರನ್ನು ಕಾಡಿದೆ. ಯಾವ ಸಮಸ್ಯೆಗೂ ಬರಿಹಾರ ಕಂಡುಕೊಳ್ಳದ ಸಂಸದರು ಈ ಭಾಗಕ್ಕೆ ಮತ್ತೆ ಬಂದು ಮತವನ್ನು ಕೇಳುತ್ತಿದ್ದಾರೆ. ಮಹಿಳೆಯರು, ಕಾರ್ಮಿಕರು, ಮೀನುಗಾರರಿಗೆ ಕೇಂದರದ ಕೊಡುಗೆ ಏನೂ ಇಲ್ಲ. ಕೇಂದ್ರ ಸರ್ಕಾರ ಮೀನುಗಾರರಿಗೆ ಸೀಮೆ‌ಎಣ್ಣೆ ಸಬ್ಸಿಡಿ ಕೊಡುವುದನ್ನು ನಿಲ್ಲಿಸಿದರೂ ರಾಜ್ಯ ಸರ್ಕಾರ ವ್ಯವಸ್ಥಿತವಾಗಿ ನಿಭಾಯಿಸಿ ಮೀನುಗಾರರಿಗೆ ಸೀಮೆ‌ಎಣ್ಣೆ ಸಬ್ಸಿಡಿ ನೀಡುವ ಕೆಲಸಕ್ಕೆ ಮುಂದಾಗಿದೆ. ಕೇಂದ್ರ ಸರ್ಕಾರ ಬಿಟ್ಟು ಹೋದ ಯೋಜನೆಗಳನ್ನು ರಾಜ್ಯ ಸರ್ಕಾರ ವ್ಯವಸ್ಥಿತವಾಗಿ ಪಾಲನೆ ಮಾಡಿದೆ. ಆಶ್ವಾಸನೆ ನೀಡಿ ಏನೂ ಕೆಲಸ ಮಾಡದ ಬಿಜೆಪಿ ಮತ್ತೆ ಮತ ಕೇಳಲು ಯಾವ ನೈತಿಕತೆ ಇದೆ ಎಂದು ಕೇಂದ್ರ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದ ಜಯಮಾಲಾ, ರಾಜ್ಯ ಸರ್ಕಾರ ಕೊಟ್ಟಿರುವ ಯೋಜನೆಗಳ ಮುಖಾಂತರ ಜನತೆಯನ್ನು ಜಾಗೃತಗೊಳಿಸುವ ಕಾಲ ಸನ್ನಿಹಿತವಾಗಿದೆ. ಸುಳ್ಳುಗಾರ ಬಿಜೆಪಿಯ ಮುಖವಾಡವನ್ನು ನಮ್ಮ ಕಾರ್ಯಕರ್ತರೆಲ್ಲರೂ ಬಯಲುಗೊಳಿಸಬೇಕು ಎಂದು ಮನವಿ ಮಾಡಿಕೊಂಡರು.

ಸಣ್ಣ ಮಕ್ಕಳ ತಲೆಯನ್ನು ಕೆಡಿಸುವ ಕೆಲಸಗಳು ನಡೆಯುತ್ತಿವೆ. ಮುಖವಾಡ ಪಕ್ಷವಾಗಿರುವ ಬಿಜೆಪಿಯ ಮುಖವಾಡವನ್ನು ನಾವೆಲ್ಲರೂ ಈ ಬಾರಿ ಬಯಲುಗೊಳಿಸಬೇಕು ಎಂದು ಜಯಮಾಲಾ ಕಾರ್ಯಕರ್ತರಲ್ಲಿ ಮನವಿ ಮಾಡಿಕೊಂಡರು .

Comments are closed.