ಕರಾವಳಿ

ಪ್ರಾಣಿಗಳ ಕಡಿತದ ಗಾಯಕ್ಕೆ ನೀಡಬೇಕಾದ ಪ್ರಥಮ ಚಿಕಿತ್ಸೆ ವಿಧಾನಗಳು

Pinterest LinkedIn Tumblr

ಬೀದಿ ನಾಯಿಯಾಗಿರಲಿ ಅವಾ ಸಾಕುನಾಯಿಯಾಗಿರಲಿ, ಅದು ಕಚ್ಚಿದಾಗ ಕೈಗೊಳ್ಳಬೇಕಾದ ಪ್ರಥಮ ಚಿಕಿತ್ಸೆಯ ಬಗ್ಗೆ ಗೊತ್ತಿರುವುದು ಮುಖ್ಯವಾಗಿದೆ. ಪ್ರಾಣಿಗಳ ಕಡಿತದಿಂದ, ಹೆಚ್ಚಾಗಿ ನಾಯಿ ಕಡಿತದಿಂದ ರೇಬಿಸ್ ಪ್ರಕರಣಗಳು ವಿಶ್ವಾದ್ಯಂತ ವರದಿಯಾಗುತ್ತಲೇ ಇವೆ. ಸಕಾಲದಲ್ಲಿ ಸೂಕ್ತ ಚಿಕಿತ್ಸೆ ಪಡೆಯದಿದ್ದರೆ ರೇಬಿಸ್ ರೋಗಿಯ ಸಾವಿಗೂ ಕಾರಣವಾಗುತ್ತದೆ. ವಿಶ್ವದಲ್ಲಿ ಪ್ರತಿ ವರ್ಷ ಇಂತಹ ಸಾವುಗಳ ಪೈಕಿ ಶೇ.36ರಷ್ಟು ಭಾರತ ದಲ್ಲಿಯೇ ಸಂಭವಿಸುತ್ತವೆ.

ಹೆಚ್ಚಿನ ನಾಯಿ ಕಡಿತ ಪ್ರಕರಣಗಳಿಗೆ ಬೀದಿನಾಯಿಗಳು ಕಾರಣವಾಗಿವೆ. ಹಾಗೆಂದು ಸಾಕುನಾಯಿಗಳು ಕಚ್ಚುವುದಿಲ್ಲ ಎಂದೇನಿಲ್ಲ.

ನಾಯಿ ಕಡಿತಕ್ಕೆ ಪ್ರಥಮ ಚಿಕಿತ್ಸೆ ವಿಧಾನ
ನಾಯಿಯಿಂದ ದಾಳಿಗೊಳಗಾದಾಗ ನೀವು ಮಾಡಬೇಕಾದ ಮೊದಲ ಮತ್ತು ಮುಖ್ಯ ಕೆಲಸವೆಂದರೆ ನಿಮ್ಮನ್ನು ರಕ್ಷಿಸಿಕೊಳ್ಳುವುದು. ನಿಮ್ಮ ಬ್ಯಾಗ್, ಜಾಕೆಟ್ ಅಥವಾ ಇತರ ಯಾವುದೇ ವಸ್ತುವಿನಿಂದ ನಾಯಿಯು ನಿಮ್ಮನ್ನು ಕಚ್ಚುವುದನ್ನು ತಡೆಯಲು ಪ್ರಯತ್ನಿಸಬಹುದು. ನಾಯಿ ನಿಮ್ಮನ್ನು ಕೆಳಕ್ಕೆ ಕೆಡವಿದರೆ ಚೆಂಡಿನಂತೆ ಸುತ್ತಿಕೊಂಡು ನಿಮ್ಮ ಎರಡೂ ಕೈಗಳನ್ನು ಕುತ್ತಿಗೆ ಮತ್ತು ಕಿವಿಗಳ ಮೇಲಿಟ್ಟುಕೊಂಡು ತಲೆಯನ್ನು ಅವುಗಳ ನಡುವೆ ಹುದುಗಿಸಿಕೊಳ್ಳಿ. ಗಾಯಗಳ ತೀವ್ರತೆಯನ್ನು ತಿಳಿದುಕೊಳ್ಳಲು ತಕ್ಷಣ ವೈದ್ಯರನ್ನು ಭೇಟಿಯಾಗಿ ಸೂಕ್ತ ಚಿಕಿತ್ಸೆಯನ್ನು ಪಡೆದುಕೊಳ್ಳಿ.

ನೀವು ಮನೆಯಲ್ಲಿ ನಾಯಿ ಸಾಕಿದ್ದರೆ ಅದಕ್ಕೆ ಕಾಲಕಾಲಕ್ಕೆ ಲಸಿಕೆಗಳನ್ನು ಕೊಡಿಸಿ. ಇದರಿಂದ ಅದು ಆಕಸ್ಮಿಕವಾಗಿ ಕಚ್ಚಿದರೂ ಹೆಚ್ಚಿನ ಸಮಸ್ಯೆಯಾಗುವುದಿಲ್ಲ

ನಾಯಿ ಕಡಿತದಿಂದ ತರಚಿದಂತಹ ಸಣ್ಣಗಾಯಗಳಾಗಿದ್ದರೆ ಆ ಜಾಗದಲ್ಲಿಯ ರಕ್ತ ಮತ್ತು ಜೊಲ್ಲನ್ನು ತೆಗೆದುಹಾಕಲು ಅದನ್ನು ಸ್ವಚ್ಛ ನೀರು ಮತ್ತು ಸಾಬೂನಿನಿಂದ ತೊಳೆದುಕೊಳ್ಳಿ. ತೆರೆದ ಗಾಯಗಳಿಂದ ಬ್ಯಾಕ್ಟೀರಿಯಾ ಸೋಂಕಿನ ಅಪಾಯವನ್ನು ತಗ್ಗಿಸಲು ಆಯಂಟಿಸೆಪ್ಟಿಕ್ ಅಥವಾ ಆಯಂಟಿ ಬ್ಯಾಕ್ಟೀರಿಯಲ್ ಕ್ರೀಂ ಅಥವಾ ಲೋಷನ್ ಅನ್ನು ಹಚ್ಚಿಕೊಳ್ಳಿ. ಗಾಯಕ್ಕೆ ಬಟ್ಟೆಯನ್ನು ಸುತ್ತದೆ ಹಾಗೆಯೇ ಬಿಡಿ, ಇದರಿಂದ ಗಾಯವು ಒಣಗಲು ಅವಕಾಶವಾಗುತ್ತದೆ.

ನಾಯಿ ಕಚ್ಚಿದ ತಕ್ಷಣ ವೈದ್ಯರನ್ನು ಸಂಪರ್ಕಿಸಿ, ಸಾಧ್ಯವಾಗದಿದ್ದರೆ ಮೊದಲ 24 ಗಂಟೆಗಳಲ್ಲಾದರೂ ಈ ಕೆಲಸವನ್ನು ಮಾಡಿ ಮತ್ತು ಹೆಚ್ಚಿನ ಸಮಸ್ಯೆಗಳನ್ನು ತಡೆಯಲು ಆಯಂಟಿ-ರೇಬಿಸ್ ಚುಚ್ಚುಮದ್ದನ್ನು ತೆಗೆದುಕೊಳ್ಳಿ.

ನಾಯಿ ಕಡಿತದಿಂದ ಆಳವಾದ ಗಾಯವಾಗಿದ್ದರೆ ಮತ್ತು ಮಾಂಸ ಹೊರಗೆ ಕಾಣಿಸುತ್ತಿದ್ದರೆ ರಕ್ತಸ್ರಾವವನ್ನು ತಡೆಯಲು ಸ್ವಚ್ಛ ಮತ್ತು ಒಣ ಬಟ್ಟೆಯಿಂದ ಗಾಯವನ್ನು ಒತ್ತಿ ಹಿಡಿಯಿರಿ. ರಕ್ತಸ್ರಾವ ನಿಂತ ಬಳಿಕ ಸಾಬೂನು ಮತ್ತು ಸ್ವಚ್ಛ ನೀರಿನಿಂದ ಗಾಯವನ್ನು ಚೆನ್ನಾಗಿ ತೊಳೆಯಿರಿ. ನೀವು ತುಂಬ ನಿಶ್ಶಕ್ತಗೊಂಡಿದ್ದರೆ ಅಥವಾ ಬವಳಿ ಬರುವಂತಿದ್ದರೆ ತಕ್ಷಣ ವೈದ್ಯಕೀಯ ನೆರವನ್ನು ಪಡೆದುಕೊಳ್ಳಿ. ರಕ್ತಸ್ರಾವ ನಿಲ್ಲದಿದ್ದರೆ ಅಥವಾ ನಾಯಿ ಕಚ್ಚಿದ ಜಾಗ ಕೆಂಪಗಾಗಿ ಊದಿಕೊಂಡಿದ್ದರೆ ತಕ್ಷಣ ಆಸ್ಪತ್ರೆಗೆ ಧಾವಿಸಿ.

ಗಾಯವು ತೀವ್ರ ನೋವನ್ನುಂಟು ಮಾಡುತ್ತಿದ್ದರೆ, ಮಾಂಸಖಂಡ ಆಥವಾ ಮೂಳೆಗಳು ಕಾಣಿಸುತ್ತಿದ್ದರೆ, ಗಾಯವು ಬಿಸಿಯಾದಂತೆ ಅಥವಾ ಜ್ವರ ಬರುತ್ತಿದೆ ಎಂದು ಅನ್ನಿಸಿದರೆ, ಗಾಯವು ಆಳವಾಗಿದ್ದರೆ ಮತ್ತು ನೀವು ಟೆಟಾನಸ್ ಚುಚ್ಚುಮದ್ದು ತೆಗೆದುಕೊಂಡು ಐದು ವರ್ಷಗಳು ಕಳೆದಿದ್ದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಿ.

ಚಿಕಿತ್ಸೆ ಪಡೆಯದಿದ್ದರೆ?
ಕೆಲವು ಸಂದರ್ಭಗಳಲ್ಲಿ ಜನರು ನಾಯಿ ಕಡಿದು ಗಾಯವಾಗಿದ್ದರೆ ಅದನ್ನು ಕಡೆಗಣಿಸುತ್ತಾರೆ ಮತ್ತು ಯಾವುದೇ ಚಿಕಿತ್ಸೆ ಪಡೆದುಕೊಳ್ಳು ವುದಿಲ್ಲ. ಸೂಕ್ತ ಚಿಕಿತ್ಸೆ ಪಡೆಯದಿದ್ದರೆ ವ್ಯಕ್ತಿ ಕೆಲವು ಗಂಭೀರ ಕಾಯಿಲೆಗಳಿಗೆ ಗುರಿಯಾಗುತ್ತಾನೆ.

ರೇಬಿಸ್: ಇದು ನಾಯಿಕಡಿತದಿಂದಾದ ಉಂಟಾಗುವ ಅತ್ಯಂತ ಸಾಮಾನ್ಯ ಮತ್ತು ಗಂಭೀರ ರೋಗವಾಗಿದೆ. ರೋಗದ ವೈರಸ್ ಮಿದುಳಿನ ಮೇಲೆ ಪರಿಣಾಮವನ್ನುಂಟು ಮಾಡುತ್ತದೆ ಮತ್ತು ಲಕ್ಷಣಗಳು ಪ್ರಕಟಗೊಳ್ಳಲು ಆರಂಭಿಸಿದ ಬಳಿಕ ಸಾವಿಗೂ ಕಾರಣ ವಾಗಬಹುದು. ರೋಗವು ರೇಬಿಸ್ ಸೋಂಕುಪೀಡಿತ ನಾಯಿಯ ಜೊಲ್ಲಿನಿಂದ ಅಥವಾ ಕಡಿತದಿಂದ ಹರಡುತ್ತದೆ. ನಾಯಿಗಳಿಗೆ ಲಸಿಕೆಗಳನ್ನು ಕೊಡಿಸುವುದರ ಮೂಲಕ ರೋಗವನ್ನು ತಡೆಯಬಹುದು.

ಕ್ಯಾಪ್ನೊಸೈಟೊಫೇಗಾ: ತರಚು ಗಾಯ ಅಥವಾ ಕಡಿತ ಸೇರಿದಂತೆ ಬೆಕ್ಕು ಅಥವಾ ನಾಯಿಯ ನಿಕಟ ಸಂಪರ್ಕದಿಂದ ಹರಡುವ ಕ್ಯಾಪ್ನೊ ಸೈಟೊಫೇಗಾ ಎಂಬ ಬ್ಯಾಕ್ಟೀರಿಯಾ ಈ ಸ್ಥಿತಿಗೆ ಕಾರಣವಾಗುತ್ತದೆ. ಈ ಬ್ಯಾಕ್ಟೀರಿಯಾ ಪ್ರಾಣಿಗಳಲ್ಲಿ ಅನಾರೋಗ್ಯ ವನ್ನುಂಟು ಮಾಡು ವುದಿಲ್ಲ, ದುರ್ಬಲ ನಿರೋಧಕ ಶಕ್ತಿ ಹೊಂದಿರುವ ಜನರಲ್ಲಿ ವ್ಯತಿರಿಕ್ತ ಪರಿಣಾಮಗಳನ್ನು ಬೀರುತ್ತದೆ.

ಪಾಶ್ಚರೆಲ್ಲಾ: ಇದು ನಾಯಿ ಕಚ್ಚಿದ ಜಾಗದಲ್ಲಿ ಯಾತನಾದಾಯಕ ಸೋಂಕನ್ನುಂಟು ಮಾಡುತ್ತದೆ. ಈ ಬ್ಯಾಕ್ಟೀರಿಯಾ ನಿರೋಧಕ ಶಕ್ತಿ ದುರ್ಬಲವಾಗಿರುವವರಲ್ಲಿ ಚಲನವಲನಕ್ಕೆ ತೊಂದರೆ ಮತ್ತು ಸಂದುಗಳಲ್ಲಿ ಊತದಂತಹ ಸಮಸ್ಯೆಗಳನ್ನುಂಟುಮಾಡುತ್ತದೆ.

ಟೆಟಾನಸ್: ಗಾಯವು ಆಳವಾಗಿದ್ದರೆ ಅದು ಟೆಟಾನಸ್ ಅಪಾಯವನ್ನು ಹೆಚ್ಚಿಸುತ್ತದೆ. ಕ್ಲಾಸ್ಟ್ರಿಡಿಯಂ ಟೆಟಾನಿ ಎಂಬ ಬ್ಯಾಕ್ಟೀರಿಯಾ ಟೆಟಾನಸ್‌ಗೆ ಕಾರಣವಾಗಿದ್ದು, ಅದು ಪಾರ್ಶ್ವವಾಯುವಿಗೆ ಕಾರಣವಾಗುತ್ತದೆ.

Comments are closed.