ಕರಾವಳಿ

ಎಸ್‌ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿ ಡಾ| ರಾಜೇಂದ್ರ ಕುಮಾರ್ ಸತತ 6ನೇ ಅವಧಿಗೆ ಅಧ್ಯಕ್ಷರಾಗಿ ಪುನರಾಯ್ಕೆ.

Pinterest LinkedIn Tumblr

ಮಂಗಳೂರು : ಸಹಕಾರಿ ಬ್ಯಾಂಕಿಂಗ್ ಕ್ಷೇತ್ರದ ಪ್ರತಿಷ್ಠಿತ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ(ಎಸ್‌ಸಿಡಿಸಿಸಿ ಬ್ಯಾಂಕ್) ಅಧ್ಯಕ್ಷರಾಗಿ ಸಹಕಾರ ರತ್ನ ಡಾ| ಎಂ.ಎನ್.ರಾಜೇಂದ್ರ ಕುಮಾರ್‌ರವರು ಸತತ 6ನೇ ಅವಧಿಗೆ ಪುನರಾಯ್ಕೆಗೊಂಡಿದ್ದಾರೆ.

ವಿನಯಕುಮಾರ್ ಸೂರಿಂಜೆಯವರು ಉಪಾಧ್ಯಕ್ಷರಾಗಿ ಪುನರಾಯ್ಕೆಗೊಂಡಿದ್ದಾರೆ. ಮಂಗಳವಾರ ಬ್ಯಾಂಕಿನ ಆಡಳಿತ ಮಂಡಳಿಯ ಸಭೆಯಲ್ಲಿ ಮಂಗಳೂರು ಉಪವಿಭಾಗದ ಆಯುಕ್ತರಾದ ಶ್ರೀ ರವಿಚಂದ್ರ ನಾಯಕ್ ಚುನಾವಣಾ ಪ್ರಕ್ರಿಯೆಯನ್ನು ನಡೆಸಿಕೊಟ್ಟರು.

ರಾಜ್ಯ,ರಾಷ್ಟ್ರ ಮಟ್ಟದಲ್ಲಿ ಅನೇಕ ಪ್ರಶಸ್ತಿ ಪುರಸ್ಕಾರಗಳನ್ನು ಈ ಬ್ಯಾಂಕಿಗೆ ದೊರಕಿಸಿಕೊಟ್ಟ ಡಾ|ಎಂಎನ್.ರಾಜೇಂದ್ರ ಕುಮಾರ್ ಸಹಕಾರ ರಂಗದ ಅಗ್ರಮಾನ್ಯ ನಾಯಕರಾಗಿರುತ್ತಾರೆ. ಬ್ಯಾಂಕಿನ ಅಧ್ಯಕ್ಷರಾಗಿ 1994ರಲ್ಲಿ ಪ್ರಥಮ ಬಾರಿಗೆ ಆಯ್ಕೆಗೊಂಡ ಇವರು, ನಿರಂತರವಾಗಿ 25ವರ್ಷಗಳ ಕಾಲ ಈ ಬ್ಯಾಂಕಿನ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದಾರೆ, ದಿ| ಮೊಳಹಳ್ಳಿ ಶಿವರಾಯರು ಸತತ 21ವರ್ಷಗಳ ಕಾಲ ಈ ಬ್ಯಾಂಕನ್ನು ಮುನ್ನಡಿಸಿದ್ದು, ತದನಂತರ25ವರ್ಷಗಳ ಸುದೀರ್ಘ ಕಾಲ ಬ್ಯಾಂಕ್‌ನ್ನು ಮುನ್ನಡೆಸಿದ ಹೆಗ್ಗಳಿಕೆಗೆ ಡಾ|ಎಂ.ಎನ್ ರಾಜೇಂದ್ರ ಕುಮಾರ್ ಪಾತ್ರರಾಗಿದ್ದಾರೆ.ಇದೀಗ 2019 ರಿಂದ 2024ರವರ ಅವಧಿಗೆ ಇವರು ಅಧ್ಯಕ್ಷರಾಗಿ ಆಯ್ಕೆಯಾಗಿರುವುದು ದಾಖಲೆಯಾಗಿದೆ.

ಡಾ|ಎಂ.ಎನ್ ರಾಜೇಂದ್ರ ಕುಮಾರ್‌ರವರ ಅಧಿಕಾರ ಅವಧಿಯಲ್ಲಿ ಬ್ಯಾಂಕ್ ಗಣನೀಯ ಪ್ರಗತಿಯನ್ನು ಕಂಡಿದೆ.1994ರಲ್ಲಿ ಇವರು ಬ್ಯಾಂಕಿನ ಅಧಿಕಾರ ವಹಿಸಿಕೊಂಡಾಗ ಬ್ಯಾಂಕಿನ ಒಟ್ಟು ಠೇವಣಾತಿ ರೂ.64ಕೋಟಿ, ಹೊರಬಾಕಿ ಸಾಲ ರೂ.46ಕೋಟಿ, ಲಾಭ ರೂ.40ಲಕ್ಷ ಮಾತ್ರವಿತ್ತು. ಆದರೆ ಇಂದು ಬ್ಯಾಂಕಿನ ಠೇವಣಾತಿ ರೂ.3,886ಕೋಟಿ, ಒಟ್ಟು ರೂ.3,702ಕೋಟಿ ಸಾಲ ವಿತರಿಸಿದ್ದು, ಬ್ಯಾಂಕಿನ ಒಟ್ಟು ವ್ಯವಹಾರ 7,588ಕೋಟಿ ಆಗಿರುತ್ತದೆ. ಕೇವಲ 18 ಶಾಖೆಗಳಿದ್ದ ಈ ಬ್ಯಾಂಕು ಈಗ 106ಶಾಖೆಗಳನ್ನು ಹೊಂದಿದೆ.

ತನ್ನ ಪ್ರಕಾರವಾದ ಪ್ರಗತಿಪರ ದೃಷ್ಠಿಕೋನ, ಅಭಿವೃದ್ಧಿಪೂರಕ ಚಿಂತನೆ, ಜನಪರ ಯೋಜನೆಗಳಿಂದ ಈ ಬ್ಯಾಂಕ್‌ನ್ನು ರಾಷ್ಟ್ರಮಟ್ಟದಲ್ಲಿ ಗುರುತಿಸುವಂತೆ ಮಾಡಿದ ಶ್ರೇಯಸ್ಸು ಎಂ.ಎನ್.ರಾಜೇಂದ್ರ ಕುಮಾರ್‌ರವರದ್ದು. ಸಂಘಟನಾತ್ಮಕ ಸ್ವರೂಪದ ಮೂಲಕ ಸ್ವಸಹಾಯ ಗುಂಪುಗಳ ಸಂಘಟನೆಗೆ ಆರ್ಥಿಕ ಚೈತನ್ಯವನ್ನು ಇವರು ತುಂಬಿದ್ದಾರೆ. ಈ ಮೂಲಕ ಸಹಸ್ರಾರು ಬಡ ಕುಟುಂಬಗಳಿಗೆ ಭದ್ರ ಬದುಕನ್ನು ಕಟ್ಟಿಸಿಕೊಟ್ಟ ಹೆಗ್ಗಳಿಕೆ ಇವರದ್ದು.

ಎಸ್‌ಸಿಡಿಸಿಸಿ ಬ್ಯಾಂಕಿನ ಎಲ್ಲಾ ಶಾಖೆಗಳು ಸಂಪೂರ್ಣ ಗಣಕೀಕರಣಗೊಂಡು ಇಂಟರ್‌ನೆಟ್ ಸಂಪರ್ಕವನ್ನು ಹೊಂದಿ, ಕೋರ್ ಬ್ಯಾಂಕಿಂಗ್ ನಂತಹ ಉತ್ಕೃಷ್ಟ ಸೇವೆಯನ್ನು ನೀಡುತ್ತಿದೆ. ಗ್ರಾಹಕರ ಮನೆ ಬಾಗಿಲಿಗೆ ‘ಬ್ಯಾಂಕ್’ ಎನ್ನುವ ಆಶಯದೊಂದಿಗೆ ಮೊಬೈಲ್ ಬ್ಯಾಂಕಿಂಗನ್ನು ಕಾರ್ಯರೂಪಕ್ಕೆ ತಂದ ಹೆಗ್ಗಳಿಕೆ ಇವರದು. ರೈತರಿಗೆ ಎಸ್‌ಸಿಡಿಸಿಸಿ ಬ್ಯಾಂಕಿನ ಮೂಲಕ ರೂಪೇ ಕಿಸಾನ್ ಕ್ರೆಡಿಟ್ ಕಾರ್ಡನ್ನು ನೀಡುವ ಮೂಲಕ ಚಾರಿತ್ರಿಕ ದಾಖಲೆಯನ್ನು ಇವರು ಗೈದಿದ್ದಾರೆ.

ವಿನಯಕುಮಾರ್ ಸೂರಿಂಜೆ

ಎಸ್‌ಸಿಡಿಸಿಸಿ ಬ್ಯಾಂಕಿನ ಉತ್ಕೃಷ್ಟ ಸಾಧನೆಗಾಗಿ 18 ಬಾರಿ ರಾಜ್ಯ ಅಪೆಕ್ಸ್ ಬ್ಯಾಂಕ್ ಪ್ರಶಸ್ತಿ, ಸ್ವಸಹಾಯ ಸಂಘಗಳ ಕಾರ್ಯನಿರ್ವಹಣೆ ಗೆಗಾಗಿ 16 ಬಾರಿ ನಬಾರ್ಡ್ ರಾಜ್ಯ ಪ್ರಶಸ್ತಿ, ಅಲ್ಲದೆ ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಹಲವು ಪ್ರಶಸ್ತಿಗಳನ್ನು ಎಸ್‌ಸಿಡಿಸಿಸಿ ಬ್ಯಾಂಕ್ ತನ್ನದಾಗಿಸಿಕೊಳ್ಳುವಲ್ಲಿ ರಾಜೇಂದ್ರ ಕುಮಾರ್‌ರವರ ಪಾತ್ರ ಹಿರಿದು.

ಪ್ರಸ್ತುತ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳದ ಅಧ್ಯಕ್ಷರಾಗಿರುವ ಇವರು ಇಪ್ಕೋ ರಾಷ್ಟೀಯ ಸಂಸ್ಥೆ, ಕರ್ನಾಟಕ ರಾಜ್ಯ ಸಹಕಾರಿ ಅಪೆಕ್ಸ್ ಬ್ಯಾಂಕಿನ ನಿರ್ದೇಶಕರಾಗಿಯೂ ಸಹಕಾರ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.

ಕರ್ನಾಟಕ ರಾಜ್ಯ ಸಹಕಾರಿ ಅಪೆಕ್ಸ್ ಬ್ಯಾಂಕಿನ ಅಧ್ಯಕ್ಷರಾಗಿ 2005 ರಿಂದ 2010ರವರೆಗೆ ಕಾರ್ಯನಿರ್ವಹಿಸಿ ಬ್ಯಾಂಕಿನ ಸರ್ವಾಂಗೀಣ ಪ್ರಗತಿಗೆ ಶ್ರಮಿಸಿದ್ದಾರೆ.

ಆಡಳಿತ ಮಂಡಳಿ ಸಭೆಯಲ್ಲಿ ಬ್ಯಾಂಕಿನ ಉಪಾಧ್ಯಕ್ಷರಾಗಿ ಆಯ್ಕೆಗೊಂಡ ಶ್ರೀ ವಿನಯಕುಮಾರ್ ಸೂರಿಂಜೆ, ನಿರ್ದೇಶಕರುಗಳಾದ ಶ್ರೀ ಬಿ.ನಿರಂಜನ್ , ಶ್ರೀ ಟಿ.ಜಿ.ರಾಜರಾಮ ಭಟ್, ಶ್ರೀ ಭಾಸ್ಕರ್ ಎಸ್ ಕೋಟ್ಯಾನ್, ಶ್ರೀ ಎಂ.ವಾದಿರಾಜ ಶೆಟ್ಟಿ, ಶ್ರೀ ಕೆ.ಎಸ್.ದೇವರಾಜ್, ಶ್ರೀ ರಾಜು ಪೂಜಾರಿ, ಶ್ರೀ ಶಶಿಕುಮಾರ್ ರೈ, ಬಿ, ಶ್ರೀ ದೇವಿಪ್ರಸಾದ್ ಶೆಟ್ಟಿ, ಬೆಳಪು, ಶ್ರೀ ಎಸ್.ಬಿ ಜಯರಾಮ್ ರೈ, ಶ್ರೀ ಮೋನಪ್ಪ ಶೆಟ್ಟಿ ಎಕ್ಕಾರು, ಶ್ರೀ ಬಿ.ಅಶೋಕ್ ಕುಮಾರ್ ಶೆಟ್ಟಿ, ಶ್ರೀ ಮಹೇಶ್ ಹೆಗ್ಡೆ, ಶ್ರೀ ಕೆ.ಹರಿಶ್ಚಂದ್ರ, ಶ್ರೀ ಕೆ.ಜೈರಾಜ್ ಬಿ.ರೈ, ಅಪೆಕ್ಸ್ ಬ್ಯಾಂಕ್ ಪ್ರತಿನಿಧಿ ಶ್ರೀ ಸದಾಶಿವ ಉಳ್ಳಾಲ್, ಸಹಕಾರ ಸಂಘಗಳ ಉಪನಿಬಂಧಕರಾದ ಶ್ರೀ ಸುರೇಶ್ ಗೌಡ, ಬ್ಯಾಂಕಿನ ಸಿ‌ಇ‌ಓ ಶ್ರೀ ರವೀಂದ್ರ ಬಿ, ಸಹಕಾರ ಸಂಘಗಳ ಸಹಾಯಕ ನಿಬಂಧಕರಾದ ಶ್ರೀ ಮಂಜುನಾಥ್ ಸಿಂಗ್,ಬ್ಯಾಂಕಿನ ಮಹಾ ಪ್ರಬಂಧಕರಾದ ಶ್ರೀ ಗೋಪಿನಾಥ್ ಭಟ್, ಸಹಕಾರ ಸಂಘಗಳ ಅಭಿವೃದ್ಧಿ ಅಧಿಕಾರಿ ಶ್ರೀಮತಿ ತ್ರಿವೇಣಿ ರಾವ್ ಇವರು ಉಪಸ್ಥಿತರಿದ್ದರು.

Comments are closed.