ಕರಾವಳಿ

ಜಿಲ್ಲೆಯಲ್ಲಿ ಹೊಸ ಮತದಾರರ ಸೇರ್ಪಡೆ ಬಳಿಕ ಮತದಾರರ ಒಟ್ಟು ಸಂಖ್ಯೆ 17,24,022 : ಜಿಲ್ಲಾಧಿಕಾರಿ

Pinterest LinkedIn Tumblr

ಮಂಗಳೂರು, : ದಕ್ಷಿಣ ಕನ್ನಡ ಲೋಕಸಭೆ ಕ್ಷೇತ್ರದಲ್ಲಿ ಜ.16ರಂದು ಅಂತಿಮವಾಗಿ ಪ್ರಕಟಿಸಿದ ಮತದಾರರ ಪಟ್ಟಿಯಲ್ಲಿ ಒಟ್ಟು 16,97417 ಮಂದಿ ಮತದಾರರಿದ್ದರೆ, ಚುನಾವಣೆ ಹಿನ್ನೆಲೆಯಲ್ಲಿ ನಡೆದ ನಾಮಪತ್ರ ಸೇರ್ಪಡೆ ವೇಳೆ ಮತದಾರರ ಸಂಖ್ಯೆ 26,605 ಹೆಚ್ಚಳವಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಮತ್ತು ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಎಸ್. ಹೇಳಿದ್ದಾರೆ.

ಈ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ವಿವರ ನೀಡಿದ ಅವರು, ಮಾ.16ರ ವರೆಗೆ ಸ್ವೀಕೃತ ಹಕ್ಕು ಮತ್ತು ಆಕ್ಷೇಪಗಳ ಪೈಕಿ ಹೊಸ ಮತದಾರರ ಸೇರ್ಪಡೆ ಬಳಿಕ ಮತದಾರರ ಸಂಖ್ಯೆ 17,24,022ಕ್ಕೆ ಹೆಚ್ಚಿದೆ. ಹೊಸ ಮತದಾರರಿಗೆ ಶೀಘ್ರ ವೋಟರ್ ಐಡಿ ಮುದ್ರಿಸಿ ವಿತರಿಸಲಾಗುವುದು ಎಂದು ತಿಳಿಸಿದ್ದಾರೆ.

ಈ ಬಾರಿ ದ.ಕ. ಕ್ಷೇತ್ರದ ಲೋಕಸಭಾ ಚುನಾವಣೆಯಲ್ಲಿ 2,495 ವಿವಿಪ್ಯಾಟ್‌ಗಳನ್ನು ಬಳಸಲಾವುದು. ಜಿಲ್ಲೆಯಲ್ಲಿ ಚುನಾವಣೆ ನಡೆಸಲು ಇವಿಎಂ/ ವಿವಿ ಪ್ಯಾಟ್‌ಗಳ ಪ್ರಥಮ ಹಂತದ ಪರಿಶೀಲನೆ ನಡೆಸಿ, 1,861 ಮತಗಟ್ಟೆಗಳಿಗೆ 2,236 ಸಿಯು, 2,236 ಬಿಯು ಮತ್ತು 2,495 ವಿವಿಪ್ಯಾಟ್ ಯಂತ್ರಗಳನ್ನು ಮಾನ್ಯತೆ ಪಡೆದ ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಸಮಕ್ಷಮದಲ್ಲಿ ಮಿಶ್ರಣ ಮಾಡಿ, ಮಾ.21ರಂದು ಜಿಲ್ಲೆಯ ಸಹಾಯಕ ಚುನಾವಣಾಧಿಕಾರಿಗಳಿಗೆ ಹಂಚಿಕೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಒಟ್ಟು 1,861 ಮತಗಟ್ಟೆಗಳಿದ್ದು, ಅದರಲ್ಲಿ 640 ಕ್ಲಿಷ್ಟಕರ ಮತ್ತು 1,221 ಸಾಮಾನ್ಯ ಇವೆ. ಕ್ಲಿಷ್ಟಕರ ಮತಗಟ್ಟೆಗಳಿಗೆ ಮೈಕ್ರೊ ವೀಕ್ಷಕರು ಮತ್ತು ವೀಡಿಯೊ ಕ್ಯಾಮೆರಾಗಳನ್ನು ನಿಯೋಜಿಸಿ, ಆಯೋಗದ ನಿರ್ದೇಶನದಂತೆ ಮುಕ್ತ ಹಾಗೂ ಶಾಂತಿಯುತ ಮತದಾನ ದೃಢಪಡಿಸಿಕೊಳ್ಳಲಾಗುವುದು ಎಂದು ಅವರು ಹೇಳಿದ್ದಾರೆ.

ಹೆಚ್ಚುವರಿ ಜಿಲ್ಲಾಧಿಕಾರಿ ಆರ್.ವೆಂಕಟಾಚಲಪತಿ, ಅಧಿಕಾರಿಗಳಾದ ಪ್ರಮೀಳಾ, ಪ್ರಸನ್ನ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Comments are closed.