ಕರಾವಳಿ

ವಿದ್ಯಾರ್ಥಿಗಳಿಗೆ ಮೀನು ಕೃಷಿ ಉದ್ಯಮ ಶೀಲತೆ ಅಭಿವೃದ್ದಿ ತರಬೇತಿ

Pinterest LinkedIn Tumblr

ಮಂಗಳೂರು  : ನಿಸರ್ಗದಲ್ಲಿನ ಯಾವುದೇ ಜೀವಿ ಆರೋಗ್ಯದಿಂದಿರಲು ಅದರ ಸುತ್ತಮುತ್ತಲಿನ ಪರಿಸರ ಯೋಗ್ಯವಾಗಿರಬೇಕು ಅಥವಾ ಆ ಜೀವಿ ವಾತಾವರಣಕ್ಕೆ ತಕ್ಕಂತೆ ಹೊಂದಿಕೊಳ್ಳುವಂತಿರಬೇಕು. ಅಂತೆಯೇ, ಜಲಚರ ಪ್ರಾಣಿಗಳಿಗೂ ಈ ನಿಯಮ ಅನ್ವಯಿಸುತ್ತದೆ. ಆರೋಗ್ಯಕರ ಜಲಚರ ಪ್ರಾಣಿ ಅರ್ಥಾತ್ ಮೀನು, ನೀರಿನಲ್ಲಿ ಆರೋಗ್ಯದಿಂದಿರಬೇಕಾದರೆ ನೀರಿನ ಗುಣಮಟ್ಟ ಸಮತೋಲನದಲ್ಲಿಡ ಬೇಕಾಗುತ್ತದೆ.

ಜಲಕೃಷಿ ಕೈಗೊಳ್ಳುವಾಗ ಮೀನಿಗೆ ತಗಲುವ ರೋಗಗಳಿಗೆ ಚಿಕಿತ್ಸೆ ಮತ್ತು ಮೀನು ಸಾಕಣೆಯಲ್ಲಿ ಉದ್ಯಮ ಶೀಲತೆ ಅಭಿವೃದ್ದಿ ಕಾರ್ಯಕ್ರಮ ಕುರಿತು ತರಬೇತಿಯನ್ನು ಇತ್ತೀಚೆಗೆ ಮೀನುಗಾರಿಕಾ ಕಾಲೇಜಿನ ಆವರಣದಲ್ಲಿ ನಡೆಸಲಾಯಿತು. ಒಂದು ತಿಂಗಳವರೆಗೆ ನಡೆಸಲಾದ ಈ ತರಬೇತಿಗೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಎಸ್. ರವರು ಚಾಲನೆ ನೀಡಿದ್ದರು.

ತರಬೇತಿ ಕಾರ್ಯಾಗಾರವು ಹೈದರಾಬಾದ್‍ನ ರಾಷ್ಟ್ರೀಯ ಕೃಷಿ ವಿಸ್ತರಣೆ ನಿರ್ವಹಣಾ ಸಂಸ್ಥೆ (ಮ್ಯಾನೇಜ್) ಮತ್ತು ರಾಷ್ಟ್ರೀಯ ಮೀನುಗಾರಿಕಾ ಅಭಿವೃದ್ದಿ ಮಂಡಳಿಗಳ (ಎನ್.ಎಫ್.ಡಿ.ಬಿ) ಧನ ಸಹಾಯದೊಂದಿಗೆ ಆಯೋಜಿಸಲಾಗಿತ್ತು ಎಂದು ಕಾಲೇಜಿನ ಡೀನ್ ಹಾಗೂ ತರಬೇತಿಯ ನೋಡಲ್ ಅಧಿಕಾರಿ ಡಾ. ಹೆಚ್. ಶಿವಾನಂದ ಮೂರ್ತಿ ರವರು ಸಮಾರೋಪ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದರು.

ತರಬೇತಿಯಿಂದ ಕಲಿತ ಅಭ್ಯರ್ಥಿಗಳು ಇದರ ಸದೂಪಯೋಗದಿಂದ ಸ್ವಉದ್ಯೋಗಿಗಳಾಗಲು ಡೀನ್ ಕರೆನೀಡಿದರು. ಪ್ರಸ್ತುತ ಪರಿಸ್ಥಿತಿಯಲ್ಲಿ ಸರ್ಕಾರಿ ನೌಕರಿಗಾಗಿ ಪೈಪೋಟಿ ನಡೆಯುತ್ತಿರುವ ಇಂದಿನ ಕಾಲದಲ್ಲಿ ಇಂತಹ ತರಬೇತಿಗಳು ಯುವಕರಿಗೆ ಪ್ರೋತ್ಸಾಹ ನೀಡಿದಂತಾಗುತ್ತದೆಂದು ಹೇಳಿದರು. ಅಲ್ಲದೇ, ಪ್ರಾಯೋಗಿಕವಾಗಿ ಯೋಜನೆ ತಯಾರಿಕೆಯ ಮೂಲಕ ಜ್ಞಾನಾಭಿವೃದ್ದಿ ಪಡೆಯುವ ಪ್ರಯತ್ನ ಇಂತಹ ತರಬೇತಿಗಳಿಂದ ಸಾಧ್ಯವಾಗಲಿವೆಯೆಂದು ಅಭಿಪ್ರಾಯ ವ್ಯಕ್ತಪಡಿಸಿದರು.

ತರಬೇತಿಯ ಅವಧಿಯಲ್ಲಿ, ವಿವಿಧ ನುರಿತ ವಿಜ್ಞಾನಿಗಳಿಂದ ಜಲಕೃಷಿ, ಮತ್ಸ್ಯ ಸಂಪನ್ಮೂಲ ಮತ್ತು ಜಲಪರಿಸರ ನಿರ್ವಹಣೆ, ಜಲಚರಗಳಿಗೆ ತಗಲುವ ರೋಗಗಳ ಹತೋಟಿ, ಜಲಕೃಷಿಯ ತಾಂತ್ರಿಕತೆ, ಮೀನಿನಿಂದ ಮೌಲ್ಯವರ್ಧಿತ ಆಹಾರ ತಯಾರಿಕಾ ಉದ್ಯಮಶೀಲತೆ, ಪಂಜರದಲ್ಲಿ ಮೀನು ಸಾಕಣೆ, ಅಲಂಕಾರಿಕಾ ಮೀನುಗಳ ಉತ್ಪಾದನೆ ಮತ್ತು ಅವುಗಳ ಜೋಪಾಸಣೆ, ಕಪ್ಪೆಚಿಪ್ಪಿನಿಂದ ಮುತ್ತು ಉತ್ಪಾದನೆ, ಜಲಕೃಷಿಯಲ್ಲಿ ನೀರಿನ ಮರುಬಳಕೆಯ ಪದ್ದತಿಗಳು, ಕೃಷಿ-ಜಲಕೃಷಿ ಸಮಗ್ರ ಬೇಸಾಯ ಪದ್ದತಿಗಳು, ಬಯೋಫ್ಲಾಕ್ ಸಿಗಡಿ ಕೃಷಿ, ಉದ್ಯಮಶೀಲತೆ ಯೋಜನೆ ತಯಾರಿಕೆ, ಮೀನು ಉತ್ಪನ್ನ ರಫ್ತುಗಾರಿಕೆ, ಮೀನಿನ ಆಹಾರ ತಯಾರಿಕೆ, ನೈಸರ್ಗಿಕ ಆಹಾರ ಉತ್ಪತ್ತಿ, ಕೃತಕ ಆಹಾರ ತಯಾರಿಕೆ, ಸಾವಯವ ಜಲಕೃಷಿ, ಕೃಷಿಯಲ್ಲಿ ಮಣ್ಣು ಮತ್ತು ನೀರಿನ ಗುಣಮಟ್ಟ ಕಾಪಾಡುವಿಕೆ, ಮೀನುಗಾರಿಕೆಯಲ್ಲಿಯಾ ಯಶೋಗಾಥೆಗಳು, ಸಮಗ್ರ ಕೃಷಿಯಲ್ಲಿ ಮಹಿಳೆಯರ ಪಾತ್ರ, ಸಿಹಿನೀರು ಸಿಗಡಿ-ಮೀನು ತಳಿಗಳ ಆಯ್ಕೆ ಮತ್ತು ಸಾಕಣೆ, ಇತ್ಯಾದಿಗಳ ಬಗ್ಗೆ ಉಪನ್ಯಾಸ ಮತ್ತು ಕ್ಷೇತ್ರಗಳ ಭೇಟಿಗಳನ್ನು ನಡೆಸಲಾಯಿತು.

ತರಬೇತಿಯ ಅವಧಿಯಲ್ಲಿ ವಿವಿಧ ಸಂಪನ್ಮೂಲ ವ್ಯಕ್ತಿಗಳಿಂದ ಉಪನ್ಯಾಸ ನಡೆಸಲಾಯಿತು. ಕಾಲೇಜಿನ ಪ್ರಾಧ್ಯಾಪಕರುಗಳಲ್ಲದೇ, ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳು ಮತ್ತು ಆವ್ಹಾನಿತ ಉಪನ್ಯಾಸಕರುಗಳಾದ ಡಾ. ಮಧುಸೂದನ್ ಕುರೂಪ್, ಡಾ. ಪ್ರವೀಣ್ ಪುತ್ರನ್, ಡಾ. ಪ್ರತಿಭಾ ರೋಹಿತ್, ಡಾ. ಲಕ್ಷ್ಮೀನಾರಾಯಣ, ಡಾ. ಬಿ.ವಿ. ಕೃಷ್ಣ ಮೂರ್ತಿ, ಮುಂತಾದವರು ಉಪಸ್ಥಿತರಿದ್ದರು.

Comments are closed.