ಕರಾವಳಿ

ಮುಸುಕು ಹಾಕಿಕೊಂಡು ಮಲಗುವ ಅಭ್ಯಾಸ ಆರೋಗ್ಯಕರವಲ್ಲ…ಯಾಕೆ?

Pinterest LinkedIn Tumblr

ನಮ್ಮ ದೇಹದಲ್ಲಿ ಅತ್ಯಂತ ಪ್ರಮುಖವಾದ ಅಂಗ ಎಂದರೆ ಮೆದುಳು. ನಾವು ಈ ಲೋಕದಲ್ಲಿ ಕಣ್ತೆರೆಯುವ ಮುನ್ನವೇ ನಮ್ಮ ಮೆದುಳು ತಾಯಿಯ ಗರ್ಭದಲ್ಲಿಯೇ ದೇಹದ ಹಲವಾರು ಕಾರ್ಯಗಳನ್ನು ನಿರ್ವಹಿಸಲು ಪ್ರಾರಂಭಿಸಿಯಾಗಿರುತ್ತದೆ. ಕೇವಲ ತನ್ನ ದೇಹವನ್ನು ನಿಯಂತ್ರಿಸುವುದು ಮಾತ್ರವಲ್ಲ, ಆಪ್ತರೊಂದಿಗೆ, ಅಕ್ಕಪಕ್ಕದವರೊಂದಿಗೆ ಹೇಗೆ ನಡೆದುಕೊಳ್ಳಬೇಕೆಂಬುದನ್ನೂ ಕಲಿತು ನಿರ್ವಹಿಸಲು ನೆರವಾಗುತ್ತದೆ. ಜೀವವಿದ್ದಷ್ಟೂ ಕಾಲ ಮೆದುಳು ನಿರಂತರವಾಗಿ ಕಾರ್ಯನಿರ್ವಹಿಸುತ್ತಿರುತ್ತದೆ ಹಾಗೂ ಮೆದುಳನ್ನು ಕ್ರಿಯಾತ್ಮಕವಾಗಿರಿಸುವ ಮೂಲಕ ಚಿಂತನೆಯ ಸಾಮರ್ಥ್ಯವನ್ನೂ ಕಡೆಯವರೆಗೆ ಉಳಿಸಿಕೊಳ್ಳಲು ಸಾಧ್ಯವಾಗುತ್ತದೆ.

ಆದರೆ ನಮ್ಮ ದೇಹದ ಎಲ್ಲಾ ಕಾರ್ಯಗಳೂ ನಿಸರ್ಗದ ನಿಯಮಗಳಿಗನುಸಾರವಾಗಿಯೇ ನಡೆಯಬೇಕಾಗಿದ್ದು ಇದನ್ನು ಮೀರಿದಾಗ ಆರೋಗ್ಯದ ಲಯವೂ ತಪ್ಪುತ್ತದೆ. ತಡರಾತ್ರಿಯವರೆಗೆ ಪಾರ್ಟಿ ಎಂದು ಎಚ್ಚರಾಗಿಯೇ ಇರುವುದು, ಒತ್ತಡದಿಂದ ಕೂಡಿದ ಕೆಲಸ, ಸಿದ್ಧ ಆಹಾರಗಳತ್ತ ಒಲವು ಮತ್ತು ಇತರ ಅನಾರೋಗ್ಯಕರ ಅಭ್ಯಾಸಗಳು, ಎಲ್ಲವೂ ಜೊತೆಯಾಗಿ ಮೆದುಳಿನ ಕ್ಷಮತೆಯನ್ನು ಕುಗ್ಗಿಸುತ್ತವೆ. ಇಂದಿನ ದಿನಗಳಲ್ಲಿ ಯಾರಿಗೂ ಸಮಯವೇ ಇಲ್ಲ, ಅಷ್ಟೂ ವ್ಯಸ್ತರಾಗಿಬಿಟ್ಟಿದ್ದೇವೆ. ಯಾವುದರಲ್ಲಿ ವ್ಯಸ್ತರಾಗಿದ್ದೇವೆ? ಇವನ್ನು ಪಟ್ಟಿಮಾಡಹೊರಟರೆ ಹೆಚ್ಚಿನವು ನಿಸರ್ಗ ನಿಯಮಕ್ಕೆ ವಿರುದ್ದವಾಗಿಯೂ ಆರೋಗ್ಯಕ್ಕೆ ಹಾನಿಕರವಾಗಿಯೂ ಇವೆ. ಇವುಗಳಲ್ಲಿ ಮೆದುಳಿಗೆ ಅಪಾರವಾದ ಹಾನಿ ಎಸಗುವ ಕೆಲವು ಅಭ್ಯಾಸಗಳು ಯಾವುವು ಎಂಬುದನ್ನು ನೋಡೋಣ ಹಾಗೂ ತಕ್ಷಣವೇ ಬದಲಿಸಿಕೊಳ್ಳಲು ಪಣ ತೊಡೋಣ….

ನಿದ್ರಿಸುವಾಗ ತಲೆಗೆ ಮುಸುಕು ಹಾಕಿಕೊಳ್ಳುವುದು
ಕೆಲವರಿಗೆ ಮುಸುಕು ಹಾಕಿಕೊಂಡು ಮಲಗಿಕೊಳ್ಳುವ ಅಭ್ಯಾಸವಿರುತ್ತದೆ. ವಿಶೇಷವಾಗಿ ಚಳಿ ಇರುವ ದಿನಗಳಲ್ಲಿ ದಪ್ಪನೆಯ ಕಂಬಳಿಯಿಂದ ಇವರು ಮುಸುಕು ಹೊದ್ದು ಮಲಗುತ್ತಾರೆ. ಒಂದು ವೇಳೆ ನೀವು ಈ ಅಭ್ಯಾಸ ಇರುವ ವ್ಯಕ್ತಿಯಾಗಿದ್ದರೆ ತಕ್ಷಣವೇ ಈ ಅಭ್ಯಾಸವನ್ನು ಬಿಡಬೇಕಾಗಿರುವುದು ಅನಿವಾರ್ಯ. ಏಕೆಂದರೆ ಈ ಮೂಲಕ ತಾಜಾ ಹವೆ ಉಸಿರಾಟಕ್ಕೆ ಲಭಿಸದೇ ಹೋಗಬಹುದು ಹಾಗೂ ಆಮ್ಲಜನಕದ ಕೊರತೆ ಎದುರಾಗಬಹುದು. ಮೆದುಳಿಗೆ ಸತತವಾಗಿ ಆಮ್ಲಜನಕಯುಕ್ತ ರಕ್ತದ ಅವಶ್ಯಕತೆ ಇದ್ದು ನಿದ್ದೆಯ ಸಮಯದಲ್ಲಿ ಮುಸುಕು ಹಾಕಿಕೊಳ್ಳುವುದರಿಂದ ಉಸಿರಾಟದಲ್ಲಿ ನೀವು ಉಸಿರಾಡಿ ಬಿಟ್ಟಿದ್ದ ಗಾಳಿಯನ್ನೇ ಮತ್ತೆ ಉಸಿರಿನಿಂದ ಒಳಗೆಳೆದುಕೊಳ್ಳಬೇಕಾಗುತ್ತದೆ ಹಾಗೂ ನಿಃಶ್ವಾಸದ ಗಾಳಿಯಲ್ಲಿ ಅಧಿಕ ಪ್ರಮಾಣದ ಇಂಗಾಲದ ಡೈ ಆಕ್ಸೈಡ್ ಇರುತ್ತದೆ. ಈ ಅನಿಲವನ್ನು ನಾವು ಬಲವಂತವಾಗಿ ಉಸಿರೆಳೆದುಕೊಳ್ಳುವುದರಿಂದ ರಕ್ತದಲ್ಲಿ ಸೇರುತ್ತದೆ ಹಾಗೂ ನರಗಳನ್ನು ಘಾಸಿಗೊಳಿಸುತ್ತದೆ. ಆದರೆ ಇದುವರೆಗೆ ಮುಸುಕು ಹಾಕಿಕೊಂಡೇ ಮಲಗುತ್ತಿದ್ದೇವಲ್ಲಾ,

ಇದುವರೆಗೇನೂ ಆಗಿಲ್ಲ ಎಂದು ಕೊಂಕು ಮಾತು ತೆಗೆಯುವವರಿಗೆ ಸೂಕ್ತ ವಿವರಣೆ ನೀಡಲು ಇನ್ನೂ ಸಂಶೋಧನೆಗಳು ಮುಂದುವರೆಯುತ್ತಿವೆ. ಏನೇ ಆದರೂ ಮುಸುಕು ಹಾಕಿಕೊಂಡು ಮಲಗುವ ಅಭ್ಯಾಸ ಆರೋಗ್ಯಕರವಲ್ಲ!

ಧೂಮಪಾನ
‘ಧೂಮಪಾನ ಆರೋಗ್ಯಕ್ಕೆ ಹಾನಿಕರ’ ಎಂಬ ಮಾತು ಇತರರಿಗಿಂತಲೂ ಧೂಮಪಾನಿಗಳಿಗೇ ಚೆನ್ನಾಗಿ ಗೊತ್ತು. ಆದರೂ ಇವರು ಯಾವುದೇ ಹೆದರಿಕೆಯಿಲ್ಲದೇ ಇನ್ನಷ್ಟು ಸೇದುತ್ತಾರೆ. ಧೂಮಪಾನದಿಂದ ಆಗುವ ಅಪಾಯಗಳು ಎಷ್ಟು ಎಂದು ಪಟ್ಟಿ ಮಾಡಿದರೆ ಸುಮಾರು ಐನೂರಕ್ಕೂ ಹೆಚ್ಚು ವಿವರಗಳನ್ನು ತಜ್ಞರು ನೀಡುತ್ತಾರೆ. ಇವುಗಳಲ್ಲಿ ಪ್ರಮುಖವಾದವು ಎಂದರೆ ರಕ್ತದಲ್ಲಿ ಕೊಲೆಸ್ಟ್ರಾಲ್ ಮಟ್ಟವನ್ನು ಏರಿಸುವುದು ಹಾಗೂ ಈ ರಕ್ತ ಮೆದುಳಿಗೆ ತಲುಪಿದಾಗ ಮೆದುಳಿನಲ್ಲಿ ಅನಾರೋಗ್ಯಕರ ಕೊಬ್ಬು ತುಂಬಿಕೊಳ್ಳುವಂತೆ ಮಾಡುವುದು. ಹೀಗೆ ತುಂಬಿಕೊಂಡ ಕೊಬ್ಬು ರಕ್ತನಾಳಗಳನ್ನು ಕಿರಿದಾಗಿಸಿ ಮೆದುಳಿಗೆ ತಲುಪುವ ರಕ್ತದ ಪ್ರಮಾಣ ಕಡಿಮೆಯಾಗುವಂತೆ ಮಾಡುತ್ತವೆ. ಕೆಲವೊಮ್ಮೆ ಕೊಬ್ಬು ತೀರಾ ಹೆಚ್ಚಾಗಿ ರಕ್ತಸಂಚಾರಕ್ಕೆ ಪೂರ್ಣ ತಡೆಯುಂಟಾಗಲೂಬಹುದು. ಹೀಗಾದರೆ ಇದು ಮೆದುಳಿನ ಸ್ತಂಭನಕ್ಕೆ ಕಾರಣವಾಗುತ್ತದೆ. ಈ ಸ್ಥಿತಿ ಸಾವಿಗೆ ಸಮಾನ.

ಅತಿ ಹೆಚ್ಚು ಸಕ್ಕರೆಯ ಸೇವನೆ
ದಿನಕ್ಕೆ ಪುರುಷರಿಗೆ 37.5 ಮತ್ತು ಮಹಿಳೆಯರಿಗೆ 25 ಗ್ರಾಂ ಸಕ್ಕರೆ ಗರಿಷ್ಟ ಪ್ರಮಾಣದಲ್ಲಿ ಸೇವಿಸಬಹುದು, ಇದಕ್ಕೂ ಮೀರಿದರೆ ಅಪಾಯ ಎಂದು ತಜ್ಞರು ಎಚ್ಚರಿಸುತ್ತಲೇ ಬಂದಿದ್ದಾರೆ. ಈ ಬಗ್ಗೆ ನಡೆದ ಅಧ್ಯಯನದಲ್ಲಿ ರಕ್ತದಲ್ಲಿ ಕೊಂಚವೂ ಸಕ್ಕರೆ ಹೆಚ್ಚಾದರೂ ಇದು ಮೆದುಳಿಗೆ ಹಾನಿಯುಂಟುಮಾಡಬಹುದು ಹಾಗೂ ತನ್ಮೂಲಕ ಸ್ಮರಣಶಕ್ತಿ ಮತ್ತು ಚಿಂತನಾಸಾಮರ್ಥ್ಯವನ್ನು ಕಳೆದು ಕೊಳ್ಳುತ್ತದೆ ಎಂದು ಕಂಡುಕೊಳ್ಳಲಾಗಿದೆ. Journal of Depression and Anxiety ಎಂಬ ಇನ್ನೊಂದು ಪತ್ರಿಕೆಯಲ್ಲಿ ಪ್ರಕಟವಾದ ವರದಿಯ ಪ್ರಕಾರ ಸಕ್ಕರೆಯ ಪ್ರಮಾಣ ಹೆಚ್ಚಿದಷ್ಟೂ ಖಿನ್ನತೆ ಆವರಿಸುವ ಪ್ರಮಾಣವೂ ಹೆಚ್ಚುತ್ತದೆ ಎಂದು ವಿವರಿಸ ಲಾಗಿದೆ.

ಮಿತಿಮೀರಿದ ಆಹಾರ ಸೇವನೆ
ಆಹಾರ ರುಚಿಯಾಗಿದ್ದರೆ ಇನ್ನಷ್ಟು ತಿನ್ನುವುದು ನಮಗೆಲ್ಲಾ ಒಗ್ಗಿ ಹೋಗಿರುವ ಅಭ್ಯಾಸ. ಆದರೆ ಮಿತಿಮೀರಿದ ಆಹಾರ ಸೇವನೆಯಿಂದ ಕೇವಲ ದೇಹಕ್ಕೆ ಮಾತ್ರವಲ್ಲ ಮೆದುಳಿಗೂ ತೊಂದರೆ ಇದೆ ಎಂದು ಮೌಂಟಿ ಸಿನಾಯ್ ಮೆಡಿಕಲ್ ಸೆಂಟರ್ ನ ಸಂಶೋಧನೆಯೊಂದು ತಿಳಿಸುತ್ತದೆ. “ಅತಿಯಾದ ಆಹಾರಸೇವನೆ

ಮೆದುಳಿನಲ್ಲಿರುವ ಕೊಬ್ಬನ್ನು ಒಡೆಯುವ ಇನ್ಸುಲಿನ್ ಕ್ಷಮತೆಯನ್ನು ಉಡುಗಿಸುತ್ತದೆ, ಮೂಲತಃ ಅತಿಯಾದ ಆಹಾರಸೇವನೆಯಿಂದ ಮೆದುಳಿನಲ್ಲಿರುವ ನರಗಳು ಪೆಡಸಾಗುತ್ತವೆ ಹಾಗೂ ಪೂರ್ಣಪ್ರಮಾಣದ ರಕ್ತ ಒದಗಿಸಲು ಸಾಧ್ಯಾವಾಗು ವುದಿಲ್ಲ. ಅಲ್ಲದೇ ಅತಿಯಾದ ಆಹಾರ ಸೇವನೆಯಿಂದ ಹೃದಯಸಂಬಂಧಿ ರೋಗಗಳು, ಸ್ಥೂಲಕಾಯ ಮೊದಲಾದ ಇತರ ತೊಂದರೆಗಳೂ ಎದುರಾಗುತ್ತವೆ” ಎಂದು ವಿವರಿಸಲಾಗಿದೆ.

ಮೆದುಳಿಗೆ ಅತಿ ಹೆಚ್ಚು ಕೆಲಸ ನೀಡುವುದು
ನೀವು ಉದ್ಯೋಗದಲ್ಲಿರುವ ಸಂಸ್ಥೆಗೆ ನೀವು ಹೆಚ್ಚು ಕೆಲಸ ಮಾಡಿದಷ್ಟೂ ಲಾಭವೇ ಆಗಿದ್ದರೂ ನಿಮ್ಮ ಮೆದುಳಿಗೆ ಮಾತ್ರ ನಷ್ಟವೇ ಸರಿ. ಅತಿಯಾದ ಮೆದುಳಿನ ಒತ್ತಡದಿಂದ ದಿನಗಳೆದಂತೆ ಮೆದುಳಿನ ಸಾಮರ್ಥ್ಯವೂ ಕುಗ್ಗುತ್ತಾ ಹೋಗುತ್ತದೆ ಹಾಗೂ ಚಿಂತನೆ, ತರ್ಕಬದ್ದ ಚಿಂತನೆ, ಸ್ಮರಣಶಕ್ತಿ ಮೊದಲಾದ ಮೆದುಳಿನ ಕ್ಷಮತೆಗಳು ಕುಗುತ್ತಾ ಹೋಗುತ್ತವೆ ಎಂದು American Journal of Epidemiology ಎಂಬ ಪತ್ರಿಕೆಯಲ್ಲಿ ಪ್ರಕಟವಾದ ವರದಿಯಲ್ಲಿ ತಿಳಿಸಲಾಗಿದೆ. ಅಲ್ಲದೇ ಆರೋಗ್ಯ ಸರಿ ಇಲ್ಲದಿದ್ದಾಗಲೂ ನೀವು ಅತಿಯಾಗೆ ಮೆದುಳಿಗೆ ಒತ್ತಡ ನೀಡಬಾರದು, ಇದರಿಂದಲೂ ಮೆದುಳಿನ ಸಾಮಾನ್ಯ ಕಾರ್ಯನಿರ್ವಹಣೆಗೆ ತೊಂದರೆಯಾಗುತ್ತದೆ.

Comments are closed.