ಕರಾವಳಿ

ಕಲಾವಿದರು ಹಿತರಕ್ಷಣೆಗೆ ಸಂಘಟಿತರಾಗಬೇಕು : ಯಕ್ಷಧ್ರುವ ಮಂಗಳೂರು ಘಟಕದ ದ್ವಿತೀಯ ವಾರ್ಷಿಕ ಸಂಭ್ರಮದಲ್ಲಿ ಪಟ್ಲ ಸತೀಶ್

Pinterest LinkedIn Tumblr

ಮಂಗಳೂರು: ರಂಗದಲ್ಲಿ ವಿಜೃಂಬಿಸಿದರೂ ಬಳಿಕ ಸಣ್ಣ ಪುಟ್ಟ ಕಾರಣಗಳಿಗಾಗಿ ಕೇಸ್ ದಾಖಲಾಗುತ್ತಿರುವ ಈ ಸಂಕ್ರಮಣ ಕಾಲದಲ್ಲಿ ಕಲಾವಿದರು ಸಂಘಟಿತರಾಗುವ ಅಗತ್ಯ ಇದೆ ಎಂದು ಯಕ್ಷ ಧ್ರುವ ಪಟ್ಲ ಫೌಂಡೇಶನ್ ಸ್ಥಾಪಕಾಧ್ಯಕ್ಷ ಪಟ್ಲ ಸತೀಶ್ ಶೆಟ್ಡಿ ಹೇಳಿದರು.

ಪುರಭವನದಲ್ಲಿ ಮಂಗಳವಾರ ನಡೆದ ನಡೆದಯಕ್ಷಧ್ರುವ ಪಟ್ಲ ಫೌಂಡೇಶನ್‌ ಟ್ರಸ್ಟ್ ಮಂಗಳೂರು ನಗರ ಘಟಕದ ದ್ವಿತೀಯ ವಾರ್ಷಿಕ ಸಂಭ್ರಮದಲ್ಲಿ‌ ಮಾತನಾಡಿದರು.

ರಂಗದಲ್ಲಿ ಉದ್ದೇಶ ಪೂರ್ವಕವಾಗಿ ಅಲ್ಲದೆ ಪಾತ್ರದ ಓಘದಲ್ಲಿ ಬಂದ ಮಾತುಗಳಿಗಾಗಿ ಕಲಾವಿದರನ್ನು ಗುರಿ ಮಾಡಲಾಗುತ್ತಿದೆ. ಇತ್ತೀಚೆಗೆ ಇಂಥ ಹಲವು ಪ್ರಕರಣಗಳು ನಡೆದಿವೆ.

ದುಬೈಯಲ್ಲಿ ನಡೆದ ವಿಶ್ವ ತುಳು ಸಮ್ಮೇಳದಲ್ಲಿ ಯಕ್ಷ ಹಾಸ್ಯ ನಡೆಸಿ ಕೊಟ್ಟ ಕಲಾವಿದರ ಮೇಲೆ ಒಂದು ತಿಂಗಳ ಬಳಿಕ ರಾಜ್ಯದಲ್ಲಿ 25ಕ್ಕೂ ಹೆಚ್ಚು ದೂರುಗಳು ದಾಖಲಾದವು. ಕಲಾವಿದರು ಮಾತಿನ ಭರದಲ್ಲಿ ಸಮುದಾಯಕ್ಕೆ ನೋವು ಉಂಟಾಗುವ ಹಾಗೆ ಆಗಿತ್ತು. ರಂಗದಲ್ಲಿ ಚಪ್ಪಾಳೆಗಳು ಸಿಗುತ್ತವೆ. ಕೇಸ್ ಆದ ಬಳಿಕ ಕಲಾವಿದನೇ ಒದ್ದಾಡಬೇಕು. ಈ ಪ್ರಕರಣದಲ್ಲಿ ದೊಡ್ಡ ಮನಸ್ಸು ಮಾಡಿ ಕೇಸ್ ವಾಪಸ್ ಪಡೆದರು.

ಇನ್ನು ಮುಂದೆ ಇಂಥ ಸಂದರ್ಭದಲ್ಲಿ ಕಲಾವಿದರ ರಕ್ಷಣೆಗಾಗಿ ಧಾವಿಸುವ ಸಂಘಟನೆ ಅಗತ್ಯ ವಿದೆ. ಉದ್ದೇಶ ಪೂರ್ವಕ ತಪ್ಪು ಮಾಡುವ ಕಲಾವಿದರಿಗೆ ಇದು ಅನ್ವಯಿಸುವುದಿಲ್ಲ ಎಂದರು.

ಯಕ್ಷಗಾನ ಉಳಿಸಿ,ಬೆಳೆಸಲು ಅಶಕ್ತ ಕಲಾವಿದರನ್ನು ಪ್ರೋತ್ಸಾಹಿಸಿ, ಹಿರಿಯರನ್ನು ಗೌರವಿಸಿ, ಯುವ ಪ್ರತಿಭೆಗಳನ್ನು ಪುರಸ್ಕರಿಸಿ, ಮಕ್ಕಳಿಗೆ ಕಲಿಸಿ ಯಕ್ಷಗಾನವನ್ನು ಪಸರಿಸುವ ಕೆಲಸ ಮಾಡಬೇಕು. ಇದನ್ನು ಯಕ್ಷಧ್ರುವ ನಗರ ಘಟಕ ಅಚ್ಚುಕಟ್ಟಾಗಿ ಮಾಡುತ್ತಿದೆ ಎಂದರು .

ಉದ್ಯಮಿ ಜಯರಾಮ ಶೇಖ ಮತ್ತು ಪದ್ಮಾವತಿ ಜಯರಾಮ ಶೇಖ ದಂಪತಿ ಕಾರ್ಯಕ್ರಮ ಉದ್ಘಾಟಿಸಿ ಶುಭಹಾರೈಸಿದರು.

ಶ್ರೀದೇವಿ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಎ.ಸದಾನಂದ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಸ್ಥಾಪಕಾಧ್ಯಕ್ಷ ಪಟ್ಲ ಸತೀಶ್ ಶೆಟ್ಟಿ, ಉದ್ಯಮಿ ಚಂದ್ರಹಾಸ ಶೆಟ್ಟಿ, ಲಯನ್ಸ್ ಕ್ಲಬ್ ಕೊಡಿಯಾಲ್‌ಬೈಲ್ ಅಧ್ಯಕ್ಷ ದಿನಕರ ಸುವರ್ಣ, ಬಜಾಲ್ ಸ್ವಸ್ತಿಕ್ ಕಲಾ ಕೇಂದ್ರ ಸಂಚಾಲಕ ಕೆ.ಸಿ.ಹರಿಶ್ಚಂದ್ರ ರಾವ್, ಉದ್ಯಮಿ ದಿವಾಕರ ದಾಸ್, ಬಂಟ್ಸ್ ವೆಲ್ಫೇರ್ ಟ್ರಸ್ಟ್ ಯುವ ವಿಭಾಗ ಅಧ್ಯಕ್ಷ ದೇವಿಚರಣ್ ಶೆಟ್ಟಿ, ಉದ್ಯಮಿ ರವಿರಾಜ್ ಶೆಟ್ಟಿ ನಿಟ್ಟೆ ಗುತ್ತು, ಉದ್ಯಮಿ ನಿತ್ಯಾನಂದ ಶೆಟ್ಟಿ, ಕೇಂದ್ರ ಸಮಿತಿ ಕಾರ್ಯದರ್ಶಿ ಪುರುಷೋತ್ತಮ ಭಂಡಾರಿ, ಖಜಾಂಚಿ ಸುದೇಶ್ ರೈ, ಕದ್ರಿ ನವನೀತ್ ಶೆಟ್ಟಿ, ಮಹಿಳಾ ವಿಭಾಗ ಅಧ್ಯಕ್ಷೆ ಪೂರ್ಣಿಮಾ ರೈ ಇದ್ದರು. ನಗರ ಘಟಕ ಅಧ್ಯಕ್ಷ ಪ್ರದೀಪ್ ಆಳ್ವ ಕದ್ರಿ ಸ್ವಾಗತಿಸಿದರು.

ಭವ್ಯಶ್ತೀ ಕುಲ್ಕುಂದ ಪ್ರಾರ್ಥಿಸಿದರು. ರವಿ ಶೆಟ್ಟಿ ಅಶೋಕನಗರ ಪ್ರಸ್ತಾವಿಸಿದರು. ಸತೀಶ್ ಶೆಟ್ಟಿ ಕೊಡಿಯಾಲ್‌ಬೈಲ್, ಸಾಹಿಲ್ ರೈ ನಿರೂಪಿಸಿದರು. ಕೃಷ್ಣ ಶೆಟ್ಡಿ ತಾರೆಮಾರ್ ವಂದಿಸಿದರು.

ಸನ್ಮಾನ-ಗೌರವ: ಹಿರಿಯ ಯಕ್ಷನಾಟ್ಯಗುರು ಅಶೋಕ್ ಬೋಳೂರು ಅವವನ್ನು ಸನ್ಮಾನಿಸಲಾಯಿತು.

Comments are closed.