ಕರಾವಳಿ

ಬಿಲ್ಲವರ ಶಕ್ತಿ ಪ್ರದರ್ಶನಕ್ಕೆ ಸಾಕ್ಷಿಯಾದ ಬ್ರಹ್ಮಾವರ: ಬಿಲ್ಲವ ಮಹಾ ಸಮಾವೇಶದಲ್ಲಿ ಜನಸಾಗರ

Pinterest LinkedIn Tumblr

ಉಡುಪಿ: ಬಿಲ್ಲವರು ಶ್ರೇಷ್ಠ ಸಂಸ್ಕಾರ, ಸಹನೆ, ತಾಳ್ಮೆಯೊಂದಿಗೆ ವಿಶ್ವ ಮಾನವತ್ವದ ಪರಿಕಲ್ಪನೆಯೊಂದಿಗೆ ಸಂಘಟನಾ ಶಕ್ತಿ ಹೆಚ್ಚಿಸಿಕೊಂಡು ತಾಳ್ಮೆಯಿಂದ ಮುನ್ನಡೆದುತಮ್ಮ ಹಕ್ಕುಗಳನ್ನು ಪಡೆಯಬೇಕು. ಕೋಟಿ ಚೆನ್ನಯರನ್ನು ಆರಾಧ್ಯ ದೇವರನ್ನಾಗಿ ಹೊಂದಿರುವ, ನಾರಾಯಣ ಗುರುಗಳಂತಹ ಶ್ರೇಷ್ಠರು ಸಮಾಜದಲ್ಲಿರುವಾಗ ಬಿಲ್ಲವರಿಗೆ ಭಯವೆಂಬುದು ಅಗತ್ಯವಿಲ್ಲ ಎಂದು ಧರ್ಮಸ್ಥಳ ಕನ್ಯಾಡಿ ಶ್ರೀರಾಮ ಕ್ಷೇತ್ರದ ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಹೇಳಿದರು.

ಬಿಲ್ಲವ ಮುಂದಾಳು ಬಿ.ಎನ್‌.ಶಂಕರ ಪೂಜಾರಿ ಸಾರಥ್ಯದಲ್ಲಿ ಉಡುಪಿ ಜಿಲ್ಲಾ ಬಿಲ್ಲವ ಯುವ ವೇದಿಕೆಯ ನೇತೃತ್ವದ‌ಲ್ಲಿ ಭಾನುವಾರ ಬ್ರಹ್ಮಾವರ ಗಾಂಧಿ ಮೈದಾನದಲ್ಲಿ ಜರಗಿದ ‘ಉಡುಪಿ ಜಿಲ್ಲಾ ಬಿಲ್ಲವ ಮಹಾ ಸಮಾವೇಶ -2019’ರಲ್ಲಿ ಅವರು ಆಶೀರ್ವಚನ ನೀಡಿದರು.

ಸಮಾವೇಶ ಉದ್ಘಾಟಿಸಿ ಮಾತನಾಡಿದ ಸಚಿವೆ ಡಾ| ಜಯಮಾಲಾ, ಸರ್ಕಾರ ಅನೇಕ ಯೋಜನೆಗಳನ್ನು ಹೊರತರುತ್ತಿದೆ. ಯೋಜನೆಗಳ ಸವಲತ್ತುಗಳನ್ನು ಪಡೆದುಕೊಳ್ಳುವುದು ಎಲ್ಲರ ಕರ್ತವ್ಯ ಮತ್ತು ಜಾಣತನ. ಬಿಲ್ಲವ ಸಮಾಜದ ಶ್ರೇಯೋಭಿವೃದ್ಧಿಗಾಗಿ ಹಿಂದುಳಿದ ವರ್ಗ ಮೀಸಲಾತಿಯನ್ನು ಪ್ರವರ್ಗ 2ಎ ಯಿಂದ ಪ್ರವರ್ಗ 1ಕ್ಕೆ ಮಾರ್ಪಾಡು ಮಾಡುವ ಸಲುವಾಗಿ ಎಲ್ಲರೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿ ಅವರಿಗೆ ತಿಳಿಸುವ ಪ್ರಯತ್ನ ಮಾಡುತ್ತೇನೆ ಎಂದರು.

ವಿಧಾನಪರಿಷತ್‌ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಅವರು ಮಾತನಾಡಿ ನಾರಾಯಣ ಗುರುಗಳ ಹೆಸರಿನಲ್ಲಿ ನಿಗಮ ಸ್ಥಾಪಿಸಬೇಕು. ವಿಧಾನ ಸೌಧದ ಆವರಣದಲ್ಲಿ ನಾರಾಯಣ ಗುರುಗಳ ಪ್ರತಿಮೆ ಸ್ಥಾಪಿಸಬೇಕು ಎಂಬ ಬೇಡಿಕೆಯನ್ನು ಮುಂದಿಟ್ಟಿದ್ದೇನೆ’ ಎಂದರು.

ರಾಜ್ಯಸಭಾ ಸದಸ್ಯ ಬಿ.ಕೆ. ಹರಿಪ್ರಸಾದ್‌, ಸಂಸದೆ ಶೋಭಾ ಕರಂದ್ಲಾಜೆ, ಪ್ರ. ಸಂಚಾಲಕ ಅಚ್ಯುತ ಅಮೀನ್‌ ಕಲ್ಮಾಡಿ ಮಾತನಾಡಿದರು. ಕಾರ್ಕಳ ಬೊಲ್ಯೊಟ್ಟು ಶ್ರೀ ಗುರುದೇವಾಶ್ರಮದ ಶ್ರೀ ವಿಖ್ಯಾತಾನಂದ ಸ್ವಾಮೀಜಿ ಆಶೀರ್ವಚನ ನೀಡಿದರು. ಮಹಾ ಸಮಾವೇಶದ ಅಧ್ಯಕ್ಷ ಬಿ.ಎನ್‌.ಶಂಕರ ಪೂಜಾರಿ ಅಧ್ಯಕ್ಷತೆ ವಹಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ಸಾಹಿತಿ ಬಾಬು ಶಿವ ಪೂಜಾರಿ ದಿಕ್ಸೂಚಿ ಭಾಷಣ ಮಾಡಿದರು. ಶಾಸಕರಾದ ಸುನಿಲ್‌ ಕುಮಾರ್‌, ಉಮಾನಾಥ ಕೋಟ್ಯಾನ್‌, ರಘುಪತಿ ಭಟ್, ಸುಕುಮಾರ ಶೆಟ್ಟಿ, ಮಾಜಿ ಶಾಸಕರಾದ ಗೋಪಾಲ ಪೂಜಾರಿ,ವಿನಯ ಕುಮಾರ್‌ ಸೊರಕೆ, ಬಸವರಾಜ್‌, ಜೆ.ಡಿ.ನಾೖಕ್‌, ಮಧು ಬಂಗಾರಪ್ಪ, ಉದ್ಯಮಿಗಳಾದ ಸುರೇಶ್‌ ಪೂಜಾರಿ,ಎನ್‌.ಟಿ. ಪೂಜಾರಿ, ನವೀನ್‌ಚಂದ್ರ ಡಿ. ಸುವರ್ಣ, ವೇದ ಕುಮಾರ್‌, ಚಂದ್ರಶೇಖರ ಪೂಜಾರಿ, ಚಿತ್ತರಂಜನ್‌, ಸತ್ಯಜಿತ್‌ ಸುರತ್ಕಲ್‌, ಪೀತಾಂಬರ ಹೆರಾಜೆ, ವಿಶ್ವನಾಥ ಸನಿಲ್‌, ಜನಾರ್ದನ ತೋನ್ಸೆ, ಡಿ.ಆರ್‌.ರಾಜು, ಎಸ್‌.ಕೆ.ಸಾಲ್ಯಾನ್‌, ವಿ.ಕೆ. ಮೋಹನ್‌, ಹರಿಕೃಷ್ಣ ಬಂಟ್ವಾಳ,ಸರಸು ಡಿ.ಬಂಗೇರ, ಗೀತಾಂಜಲಿ ಸುವರ್ಣ, ಸಾಯಿರಾಮ್‌,ನಿತ್ಯಾನಂದ ಕೋಟ್ಯಾನ್‌, ರಾಜಶೇಖರ ಕೋಟ್ಯಾನ್‌, ಅಶೋಕ್‌ ಪೂಜಾರಿ, ಪ್ರೀತಿ ಉಪಸ್ಥಿತರಿದ್ದರು.

ಸಮಾವೇಶದ ಕಾರ್ಯಾಧ್ಯಕ್ಷ ಪ್ರವೀಣ್‌ ಎಂ.ಪೂಜಾರಿ ಬೇಡಿಕೆ ಪಟ್ಟಿ ವಾಚಿಸಿದರು. ರವೀಂದ್ರ ಕುಮಾರ್‌ ಕೋಟ ಕಾರ್ಯಕ್ರಮ ನಿರೂಪಿಸಿ ವಿಶ್ವನಾಥ್‌ ವಂದಿಸಿದರು.

ಬೇಡಿಕೆಗಳು:
ಬಿಲ್ಲವ ಸಮಾಜ ಹಿಂದುಳಿದ ಪ್ರವರ್ಗ 2ರಲ್ಲಿ ಬರುವುದರಿಂದ ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳಿಗೆ ಉನ್ನತ ಶಿಕ್ಷಣ, ಸರಕಾರಿ ಸೌಲಭ್ಯಕ್ಕೆ ಆದಾಯ ಮಿತಿ ನಿರ್ಬಂಧದಿಂದ ಕಷ್ಟ ಸಾಧ್ಯವಾಗಿದೆ. ಆದ್ದರಿಂದ ಬಿಲ್ಲವರನ್ನು ಪ್ರವರ್ಗ 1ಕ್ಕೆ ಸೇರಿಸಬೇಕು. ಬ್ರಹ್ಮಶ್ರೀ ನಾರಾಯಣಗುರು ಯೋಜನೆ ನಿಗಮ ಸ್ಥಾಪಿಸಬೇಕು, ಮಹಿಳಾ ಸ್ವ ಸಹಾಯ ಸಂಘಗಳ ಸದಸ್ಯರಿಗೆ, ಬಿಲ್ಲವ ಜನಾಂಗದ ಕಸುಬಾದ ಕೃಷಿ ಹಾಗೂ ಇನ್ನಿತರ ಸ್ವ ಉದ್ಯೋಗ ಚಟುವಟಿಕೆಗಳಿಗೆ ಬಡ್ಡಿ ರಹಿತ ಸಾಲ ಸೌಲಭ್ಯ ನೀಡಬೇಕು, ಶ್ರೀ ಬ್ರಹ್ಮ ಬೈದೇರುಗಳ ಗರೋಡಿ ಅರ್ಚಕರಿಗೆ ಮಾಸಾಶನ ಸೌಲಭ್ಯ, ಪ್ರಸ್ತುತ ಗರಡಿ ಇರುವ ಸ್ಥಳದ ಪಹಣಿ ಪತ್ರ ಆಯಾಯ ಗರಡಿಗಳ ಹೆಸರಿನಲ್ಲಿಯೇ ನೋಂದಾಯಿಸಬೇಕೆನ್ನುವ ಪ್ರಮುಖ ಬೇಡಿಕೆಗಳನ್ನು ಸಭೆಯಲ್ಲಿ ಕೇಳಿಬಂತು.

Comments are closed.