ಕರಾವಳಿ

ಪ್ರತಿಭಟನೆ ಮುಂದಕ್ಕೆ : ವಿಜಯಬ್ಯಾಂಕ್ ವಿಲೀನ ವಿರೋಧಿಸಿ ಜನವರಿ 31ಕ್ಕೆ ಪ್ರತಿಭಟನೆ

Pinterest LinkedIn Tumblr

ಮಂಗಳೂರು : ವಿಜಯಾಬ್ಯಾಂಕನ್ನು ಬ್ಯಾಂಕ್ ಆಫ್ ಬರೋಡಾದೊಂದಿಗೆ ವಿಲೀನೀಕರಿಸಿದ ಕೇಂದ್ರ ಸರಕಾರದ ನಿರ್ಧಾರವನ್ನು ಹಿಂಪಡೆಯಲು ಒತ್ತಾಯಿಸಿ ಜನವರಿ 20ರಂದು ಮುಲ್ಕಿಯಲ್ಲಿ ನಡೆಸಲು ಉದ್ದೇಶಿಸಿರುವ ಪ್ರತಿಭಟನೆಯನ್ನು ಜನವರಿ 31ಕ್ಕೆ ಮುಂದೂಡಲಾಗಿದೆ. ಜನವರಿ 31ರಂದು ಸಂಜೆ 3.30 ಗಂಟೆಗೆ ಮುಲ್ಕಿ ಕಾರ್ನಾಡಿನ ಗಾಂಧಿ ಮೈದಾನದಲ್ಲಿ ಆಯೋಜಿಸಲಾಗಿದೆ.

ದ.ಕ., ಉಡುಪಿ ಜಿಲ್ಲೆಯ ಎಲ್ಲಾ ನಾಗರಿಕರು, ಸಂಘಟನೆಗಳ ಸಹಕಾರದೊಂದಿಗೆ ಪ್ರತಿಭಟನೆಯನ್ನು ನಡೆಸಲು ನಿರ್ಧರಿಸಲಾಗಿದೆ ಎಂದು ವಿಜಯಾಬ್ಯಾಂಕ್ ಉಳಿಸಿ ಹೋರಾಟ ಸಮಿತಿಯ ಅಧ್ಯಕ್ಷ ದಿನೇಶ್ ಹೆಗ್ಡೆ ಉಳೆಪಾಡಿಯವರು ಪತ್ರಿಕಾಹೇಳಿಕೆ ನೀಡಿರುತ್ತಾರೆ.

ವಿಲೀನಗೊಂಡರೆ ಜನರಿಗೆ ಸಂಕಷ್ಟ : ಸಾಮಾನ್ಯ ಜನರು, ಗ್ರಾಮೀಣ ಪ್ರದೇಶದ ರೈತಾಪಿ ವರ್ಗದವರು ವಿಜಯಬ್ಯಾಂಕಿನ ಗ್ರಾಹಕರಾಗಿರುತ್ತಾರೆ. ವಿಲೀನಗೊಂಡ ನಂತರ ವಿಜಯಾ ಬ್ಯಾಂಕಿನ ಗ್ರಾಮಾಂತರ ಪ್ರದೇಶದ ಎಲ್ಲಾ ಶಾಖೆಗಳು ಮುಚ್ಚುತ್ತೇವೆ. ಬ್ಯಾಂಕ್ ಆಫ್ ಬರೋಡಾ ಕಮರ್ಶಿಯಲ್ ಬ್ಯಾಂಕ್ ಆಗಿರುವುದರಿಂದ ನಗರ ಕೇಂದ್ರೀಕೃತವಾಗಿ ವ್ಯವಹಾರ ನಡೆಸುತ್ತದೆ. ಹಾಗಾಗಿ ಸಾಮಾನ್ಯ, ಮಧ್ಯಮ ವರ್ಗದ ಮತ್ತು ಗ್ರಾಮಾಂತರ ಪ್ರದೇಶದ ಜನರು ಸಂಕಷ್ಟಕ್ಕೆ ಒಳಗಾಗುತ್ತಾರೆ.

ಮುಲ್ಕಿಯಲ್ಲಿ ಪ್ರತಿಭಟನೆ : ತನ್ನ ಶಿಸ್ತುಬದ್ಧತೆಯಿಂದ ವಿಜಯಾಬ್ಯಾಂಕನ್ನು ಬೆಳೆಸಿರುವ ಸುಂದರ್‌ರಾವ್ ಶೆಟ್ಟಿಯವರು ಮುಲ್ಕಿ ಮೂಲದವರು. ಹಾಗಾಗಿ ಅವರ ತವರೂರಾದ ಮುಲ್ಕಿಯಲ್ಲಿ ಈ ಪ್ರತಿಭಟನೆಯನ್ನು ನಡೆಸಲು ಯೋಜಿಸಲಾಗಿದೆ.

ರಾಜಕೀಯ ಹೇಳಿಕೆಗಿಂತ ರಾಜಕೀಯ ಒಗ್ಗಟ್ಟಿಗೆ ಮನವಿ :

ವಿಜಯಬ್ಯಾಂಕ್ ವಿಲೀನದ ಬಗ್ಗೆ ಯಾರು ನಿರ್ಧಾರ ಕೈಗೊಂಡಿದ್ದರು ಎನ್ನುವುದರ ಬಗ್ಗೆ ರಾಜಕೀಯ ಪಕ್ಷಗಳು ಪರಸ್ಪರ ಆರೋಪಗಳನ್ನು ಮಾಡಿಕೊಂಡು ಪತ್ರಿಕಾ ಹೇಳಿಕೆಗಳನ್ನು ನೀಡುತ್ತಿದ್ದಾರೆ. ವಿಜಯಬ್ಯಾಂಕ್ ವಿಲೀನ ಮಾಡಿರುವ ನಿರ್ಣಯವು ತಪ್ಪು ಎನ್ನುವ ವಿಚಾರವು ಎರಡೂ ಪಕ್ಷಗಳ ಹೇಳಿಕೆಗಳಿಂದ ವ್ಯಕ್ತವಾಗುತ್ತಿದೆ. ಈ ತಪ್ಪು ನಿರ್ಣಯದ ಬಗ್ಗೆ ಕೇಂದ್ರ ಸರಕಾರದ ಗಮನ ಸೆಳೆದ ಈಗಾಗಲೇ ಕೈಗೊಂಡ ಕ್ಯಾಬಿನೆಟ್ ನಿರ್ಧಾರವನ್ನು ವಾಪಾಸು ಪಡೆಯುವರೇ ರಾಜಕೀಯ ನಾಯಕರ ಒಗ್ಗಟ್ಟಿನ ನಿರ್ಧಾರ ಅಗತ್ಯವಿದೆ.
ಆದುದರಿಂದ ಎಲ್ಲಾ ರಾಜಕೀಯ ಪಕ್ಷದವರು ಒಗ್ಗಟ್ಟಾಗಿ ಕೇಂದ್ರ ಸರಕಾರದ ಮನವೊಲಿಸಲು ನಿರ್ಧಾರ ತೆಗೆದುಕೊಳ್ಳಬೇಕೆಂದು ದಿನೇಶ್ ಹೆಗ್ಡೆ ಉಳೆಪಾಡಿಯವರು ಮನವಿ ಮಾಡಿಕೊಂಡಿದ್ದಾರೆ.

ರಾಜಕೀಯ ನಾಯಕರ ಸಮನ್ವಯ ವೇದಿಕೆಗೆ ಪ್ರಯತ್ನ :

ವಿಲೀನೀಕರಣದ ನಿರ್ಧಾರವನ್ನು ವಾಪಾಸು ಪಡೆಯುವರೇ ಕೇಂದ್ರ ಸರಕಾರಕ್ಕೆ ಮನವರಿಕೆ ಮಾಡಲು ಕರಾವಳಿ ಜಿಲ್ಲೆಯ ಎಲ್ಲಾ ಶಾಸಕರು, ಸಂಸದರು, ವಿರೋಧ ಪಕ್ಷದ ನಾಯಕರು ಸಭೆ ಸೇರಿಸಿ ಸಮನ್ವಯ ಸಮಿತಿ ರಚಿಸಿ ಆ ಮೂಲಕ ಒಗ್ಗಟ್ಟಿನ ನಿರ್ಧಾರವನ್ನು ಕೇಂದ್ರ ಸರಕಾರಕ್ಕೆ ತಿಳಿಸುವ ಪ್ರಯತ್ನವನ್ನು ವಿಜಯಾಬ್ಯಾಂಕ್ ಉಳಿಸಿ ಹೋರಾಟ ಸಮಿತಿಯು ಮಾಡಲು ನಿರ್ಧರಿಸಿದೆ ಎಂದು ದಿನೇಶ್ ಹೆಗ್ಡೆ ಉಳೆಪಾಡಿಯವರು ತಿಳಿಸಿರುತ್ತಾರೆ.

ವಿಜಯಬ್ಯಾಂಕ್ ಹೆಸರು ಉಳಿಸಬೇಕಾದರೆ..

ಪ್ರಸ್ತುತ ಕ್ಯಾಬಿನೆಟ್ ತೆಗೆದುಕೊಂಡ ನಿರ್ಣಯದ ಪ್ರಕಾರ ವಿಜಯಾಬ್ಯಾಂಕ್ ಹೆಸರು ಮುಂದುವರಿಸಲು ಕಾನೂನಿನಲ್ಲಿ ಅವಕಾಶವಿಲ್ಲ. ಬ್ಯಾಂಕ್ ಆಫ್ ಬರೋಡಾವನ್ನು ವಿಜಯಾ ಬ್ಯಾಂಕ್‌ನೊಂದಿಗೆ ಸೇರಿಸಿದರೆ ಮಾತ್ರ ವಿಜಯಾಬ್ಯಾಂಕ್ ಹೆಸರು ಮುಂದುವರಿಸಿಕೊಂಡು ನಡೆಸಲು ಮತ್ತು ಯಥಾ ಸ್ಥಿತಿಯಲ್ಲಿ ಗ್ರಾಮೀಣ ಪ್ರದೇಶದ ಜನರಿಗೆ ಮತ್ತು ಸಾಮಾನ್ಯ ಜನರಿಗೆ ಹಿಂದಿನಂತೆಯೇ ಗ್ರಾಹಕರಿಗೆ ಸೇವೆ ನೀಡಲು ಸಾಧ್ಯ. ಹಾಗಾಗಿ ದೇಶದ ಎಲ್ಲಾ ನಾಗರಿಕರ ಹಿತದೃಷ್ಟಿಯಿಂದ ವಿಜಯಾಬ್ಯಾಂಕನ್ನು ಉಳಿಸುವ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ಜನವರಿ ೩೧ರಂದು ನಡೆಯುವ ಈ ಪ್ರತಿಭಟನೆಯಲ್ಲಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಅವರು ವಿನಂತಿಸಿದ್ದಾರೆ.

Comments are closed.