ರಾಷ್ಟ್ರೀಯ

ಮುಸ್ಲಿಂ ಮಹಿಳೆಯ ಮದುವೆಯಾಗಲು ಮತಾಂತರ ಹೊಂದಿದ್ದ ಯುವಕ ಆತ್ಮಹತ್ಯೆ

Pinterest LinkedIn Tumblr


ರಾಜ್‌ಕೋಟ್: ಮುಸ್ಲಿಂ ಮಹಿಳೆಯನ್ನು ಮದುವೆಯಾಗಲು ಇಸ್ಲಾಂ ಧರ್ಮಕ್ಕೆ ಪರಿವರ್ತನೆಯಾಗಿದ್ದ ಗುಜರಾತ್‌ನ ರಾಜ್‌ಕೋಟ್‌ ಮೂಲದ ಯುವಕ ಪಿಯೂಶ್ ಸೋಲಂಕಿ ಎಂಬಾತ ಆಕೆಗಾಗಿ ತನ್ನ ಜೀವವನ್ನೇ ಕಳೆದುಕೊಂಡಿದ್ದಾನೆ. 22 ವರ್ಷದ ಪಿಯೂಶ್ ಸೋಲಂಕಿ ಅಲಿಯಾಸ್‌ ಸಲೀಂ, ಸಲೀನಾಳನ್ನು ಮದುವೆಯಾದ ಬಳಿಕ ಆತ್ಮಹತ್ಯೆಗೆ ಶರಣಾಗಿದ್ದಾನೆ. ಗುಜರಾತ್‌ನ ಜಾಮ್‌ನಗರ ಜಿಲ್ಲೆಯ ಧ್ರೋಲ್‌ನ ಗಾಯತ್ರಿನಗರದಲ್ಲಿ ಜನವರಿ 14ರ ಸಂಜೆ ಮನೆಯ ಫ್ಯಾನ್‌ಗೆ ಆತ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಿಳಿದುಬಂದಿದೆ.

ಆತ್ಮಹತ್ಯೆಗೆ ಕಾರಣವೇನು ಗೊತ್ತಾ?
ಸಲೀನಾಳ ಹಳೆಯ ಗೆಳೆಯ ಇದಿರಿಸ್ ( 22 ), ತನ್ನ ಹಾಗೂ ಸಲೀನಾ ನಡುವಿನ ಅಶ್ಲೀಲ ಫೋಟೋಗಳನ್ನು ತೋರಿಸಿ, ಸಲೀನಾಳನ್ನು ಬಿಟ್ಟು ಬಿಡುವಂತೆ ಸಲೀಂಗೆ ಎಚ್ಚರಿಕೆ ನೀಡಿದ್ದಾನೆ ಎಂದು ತಿಳಿದುಬಂದಿದೆ. ಹೀಗಾಗಿ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದ ಮೇರೆಗೆ ಇದಿರಿಸ್‌ ವಿರುದ್ದ ಪತ್ನಿ ಸಲೀನಾ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾಳೆ. ಈ ಸಂಬಂಧ ಮಾಹಿತಿ ನೀಡಿರುವ ಧ್ರೋಲ್ ಪೊಲೀಸ್ ಠಾಣೆಯ ಎಎಸ್‌ಐ ಕೆ.ಎಸ್‌. ಡಲ್ಸಾನಿಯಾ, ”ಇದಿರಿಸ್ ವಿರುದ್ಧ ಬುಧವಾರ ರಾತ್ರಿ ಸಲೀನಾ ದೂರು ನೀಡಿದ್ದಾಳೆ” ಎಂದು ತಿಳಿಸಿದ್ದಾರೆ.

ಅಲ್ಲದೆ, ”ಕಳೆದ 3 ವರ್ಷಗಳ ಹಿಂದೆ ಸಲೀನಾ ಮುಸ್ಲಿಂ ಧರ್ಮದ ಪುರುಷನೊಬ್ಬನನ್ನು ಮೊದಲ ಮದುವೆಯಾಗಿದ್ದಳು. ಆ ವೇಳೆಯೂ ಅವರಿಬ್ಬರ ಅಶ್ಲೀಲ ಫೋಟೋಗಳನ್ನು ಪತಿಗೆ ತೋರಿಸಿ ಮದುವೆಯಾದ ಕೇವಲ 15 ದಿನಗಳಲ್ಲಿ ವಿಚ್ಛೇದನ ನೀಡುವಂತೆ ಇದಿರಿಸ್ ಮಾಡಿದ್ದ” ಎಂದು ಸಹ ಪೊಲೀಸರು ತಿಳಿಸಿದ್ದಾರೆ. ”ಬಳಿಕ ಸಲೀನಾ ಜೊತೆಗೆ ಪ್ರೀತಿಯ ಬಲೆಯಲ್ಲಿ ಬಿದ್ದಿದ್ದ ಸೋಲಂಕಿ, ಆಕೆಯನ್ನು ಮದುವೆಯಾಗಲು ಮುಸ್ಲಿಂ ಧರ್ಮಕ್ಕೆ ಪರಿವರ್ತನೆಯಾಗಲು ನಿರ್ಧರಿಸಿದ್ದ. ನಂತರ, ಸಲೀನಾ ಹಾಗೂ ಪಿಯೂಶ್ ಸೋಲಂಕಿ ಅಲಿಯಾಸ್‌ ಸಲೀಂ, 2017ರಲ್ಲಿ ಮದುವೆಯಾಗಿದ್ದರು” ಎಂದು ಎಎಸ್‌ಐ ಕೆ.ಎಸ್‌. ಡಲ್ಸಾನಿಯಾ ಮಾಹಿತಿ ನೀಡಿದ್ದಾರೆ.

ಇನ್ನು, ಆರೋಪಿ ಇದಿರಿಸ್‌ಗಾಗಿ ಪೊಲೀಸರು ಶೋಧ ಕಾರ್ಯಾಚರಣೆ ನಡೆಸುತ್ತಿದ್ದು, ಗುಜರಾತ್‌ನ ಧ್ರೋಲ್ ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದಾರೆ.

Comments are closed.