ಕರಾವಳಿ

ಚಿರತೆ ಚರ್ಮದ ಡೀಲ್‌ಗೆ ಕುಂದಾಪುರಕ್ಕೆ ಬಂದು ಜೈಲು ಸೇರಿದ 10 ಮಂದಿ ಆರೋಪಿಗಳು

Pinterest LinkedIn Tumblr

ಕುಂದಾಪುರ: ಮಾರುಕಟ್ಟೆಯಲ್ಲಿ ಲಕ್ಷಾಂತರ ರೂ. ಬೆಲೆಬಾಳುತ್ತದೆಯೆನ್ನಲಾದ ಚಿರತೆ ಚರ್ಮವದ ಕ್ರಯ-ವಿಕ್ರಯಕ್ಕಾಗಿ ಬಂದ ಹತ್ತು ಮಂದಿ ಆರೋಪಿಗಳನ್ನು ಮಿಂಚಿನ ಕಾರ್ಯಾಚರಣೆ ನಡೆಸಿ ಬಂಧಿಸಲಾಗಿದೆ. ಮಾರಾಟ ಹಾಗೂ ಖರೀದಿ ಕುರಿತು ಖಚಿತ ಮಾಹಿತಿ ಮೇರೆಗೆ ಕುಂದಾಪುರದ ವಲಯ ಅರಣ್ಯಾಧಿಕಾರಿ ಹಾಗೂ ಬೆಂಗಳೂರಿನ ಅರಣ್ಯ ಸಿ‌ಐಡಿ ಇನ್ಸ್‌ಪೆಕ್ಟರ್ ನೇತೃತ್ವದ ತಂಡ ಶುಕ್ರವಾರ ಕುಂದಾಪುರದ ಶಾಸ್ತ್ರಿ ಸರ್ಕಲ್ ಬಳಿ ಎರಡು ಕಾರು ಹಾಗೂ ಚಿರತೆ ಚರ್ಮ ಸಮೇತ ಹತ್ತು ಜನರನ್ನು ವಶಕ್ಕೆ ಪಡೆದಿದ್ದಾರೆ.

ಕಾರವಾರದ ಸೂರಜ್ (34), ಭಟ್ಕಳದ ರಾಘು (30), ನಾಗರಾಜ (25), ಪ್ರವೀಣ್ ರಾಮ ದೇವಾಡಿಗ, ಮೋಹನ್ ಜಿ. ನಾಯ್ಕ್ (24), ಸಂಜೀವ ಪೂಜಾರಿ , ಸುಬ್ರಹ್ಮಣ್ಯ (34), ಹೊನ್ನಾವರದ ಜಾನ್ಸನ್ (32), ತಗ್ಗರ್ಸೆಯ ವೀರೇಂದ್ರ ಶೆಟ್ಟಿ (35), ಬೈಂದೂರಿನ ನಾಗರಾಜ (28) ಬಂಧಿತರು.

ಭಟ್ಕಳ, ಬೈಂದೂರು ಭಾಗದಿಂದ ಒಂದಷ್ಟು ಮಂದಿ ಮಾರಾಟಕ್ಕೆ ಈ ಚಿರತೆ ಚರ್ಮ ತಂದಿದ್ದು ಅದನ್ನು ಖರೀದಿಸಲು ಕೆಲವರು ಬಂದಿದ್ದರು. ಕುಂದಾಪುರದ ಶಾಸ್ತ್ರಿ ಸರ್ಕಲ್ ಬಳಿ ವ್ಯಾಪಾರದ ಡೀಲ್ ಕುದುರಿಸುತ್ತಿದ್ದ ವೇಳೆ ಕಾರ್ಯಾಚರಣೆ ನಡೆಸಿದ ಅರಣ್ಯಾಧಿಕಾರಿಗಳ ನೇತೃತ್ವದ ತಂಡ ಚಿರತೆ ಚರ್ಮ, 1 ಮಾರುತಿ ಕಾರು, 1 ಹೋಂಡಾ ಅಮೇಜ್ ಕಾರು, 11 ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ಜಾಗತಿಕ ಮಾರುಕಟ್ಟೆಯಲ್ಲಿ ಚಿರತೆ ಚರ್ಮದ ಅಂದಾಜು ಮೌಲ್ಯ 40 ಲಕ್ಷ ಆಗುತ್ತದೆಯೆಂದು ವಿಚಾರಣೆ ವೇಳೆ ಆರೋಪಿಗಳು ಬಾಯ್ಬಿಟ್ಟಿದ್ದಾರೆನ್ನಲಾಗಿದೆ.

ಬೆಂಗಳೂರಿನ ಅರಣ್ಯ ಸಿ‌ಐಡಿ ಇನ್ಸ್‌ಪೆಕ್ಟರ್ ರವಿಕುಮಾರ್ ಹಾಗೂ ಸಿಬ್ಬಂದಿಗಳು, ಕುಂದಾಪುರ ವಲಯ ಅರಣ್ಯಾಧಿಕಾರಿ ಪ್ರಭಾಕರ ಕುಲಾಲ್ ಹಾಗೂ ತಂಡ ಕಾರ್ಯಾಚರಣೆಯಲ್ಲಿದ್ದರು. ಉಪ ಅರಣ್ಯ ಸಂರಕ್ಷಣಾಧಿಕಾರಿ ಪ್ರಭಾಕರನ್ ಮಾರ್ಗದರ್ಶನದಲ್ಲಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಜಿ. ಲೋಹಿತ್ ಮುಂದುವರಿದ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

ಕಳೆದ ವಾರವಷ್ಟೇ ಅರಣ್ಯ ಇಲಾಖೆಯ ಈ ತಂಡ ಲಕ್ಷಾಂತರ ಮೌಲ್ಯದ ಜಿಂಕೆ ಕೊಂಬುಗಳನ್ನು ವಶಪಡಿಸಿಕೊಂಡಿತ್ತು.

(ವರದಿ- ಯೋಗೀಶ್ ಕುಂಭಾಸಿ)

Comments are closed.