ಕರಾವಳಿ

ಪೆಟ್ರೋಲ್-ಡಿಸೀಲ್ ಮೇಲೆ ತೆರಿಗೆ ಹೆಚ್ಚಿಸಿರುವ ರಾಜ್ಯ ಸರಕಾರದಿಂದ ಜನವಿರೋಧಿ ನೀತಿ : ಶಾಸಕ ಕಾಮತ್ ಆರೋಪ

Pinterest LinkedIn Tumblr

ಮಂಗಳೂರು : ರಾಜ್ಯ ಸರಕಾರ ಪೆಟ್ರೋಲ್ ಮತ್ತು ಡಿಸೀಲ್ ಮೇಲೆ ಕ್ರಮವಾಗಿ 32% ಮತ್ತು 21% ತೆರಿಗೆಯನ್ನು ಹೆಚ್ಚಿಸುವುದರ ಮೂಲಕ ಜನಸಾಮಾನ್ಯರ ಮೇಲೆ ಬರೆ ಎಳೆದಿದ್ದಾರೆ ಎಂದು ಮಂಗಳೂರು ನಗರ ದಕ್ಷಿಣ ಶಾಸಕ ಡಿ ವೇದವ್ಯಾಸ ಕಾಮತ್ ಹೇಳಿದ್ದಾರೆ.

ಪ್ರಧಾನಿ ನರೇಂದ್ರ ಮೋದಿಯವರು ರಾಜತಾಂತ್ರಿಕ ನಡೆಗಳ ಮೂಲಕ ಅಂತರಾಷ್ಟ್ರೀಯ ಮಟ್ಟದಲ್ಲಿ ಪೆಟ್ರೋಲಿಯಂ ಉತ್ಪನ್ನ ರಾಷ್ಟ್ರಗಳೊಂದಿಗೆ ಮಾತುಕತೆ ನಡೆಸಿ ನಮ್ಮ ದೇಶದ ಜನರಿಗೆ ಪೆಟ್ರೋಲ್, ಡಿಸೀಲ್ ಬೆಲೆ ಇಳಿಕೆಯಾಗುವಂತೆ ದಿಟ್ಟತನದ ಕ್ರಮ ಕೈಗೊಂಡಿದ್ದಾರೆ. ಇಂತಹ ಸಂದರ್ಭದಲ್ಲಿ ರಾಜ್ಯ ಸರಕಾರ ತೆರಿಗೆ ಹೆಚ್ಚಳ ಮಾಡಿ ಪೆಟ್ರೋಲ್, ಡಿಸೀಲ್ ಬೆಲೆ ಹೆಚ್ಚಿಸಿರುವುದು ವಿಪರ್ಯಾಸ.

ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರ ಹಿಂದೆ ಪೆಟ್ರೋಲಿಯಂ ಉತ್ಪನ್ನಗಳ ಖರೀದಿಯಲ್ಲಿ ಬಾಕಿ ಇರಿಸಿದ್ದ 2 ಲಕ್ಷ ಕೋಟಿ ರೂಪಾಯ ಸಾಲದ ಬಾಂಡ್ ಅನ್ನು ತೀರಿಸಿರುವ ನರೇಂದ್ರ ಮೋದಿಯವರ ಕ್ರಮ ಶ್ಲಾಘನೀಯ. ಅದರ ನಂತರ ಈಗ ಪೆಟ್ರೋಲ್, ಡಿಸೀಲ್ ಬೆಲೆ ಇಳಿದಿರುವಾಗ ಪುನ: ಹೆಚ್ಚಳ ಮಾಡಿರುವ ರಾಜ್ಯ ಸರಕಾರ ಇನ್ಯಾವ ಮುಖ ಇಟ್ಟು ಪ್ರತಿಭಟನೆ ಮಾಡುತ್ತದೆ ಎಂದು ಶಾಸಕ ಕಾಮತ್ ಪ್ರಶ್ನಿಸಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯ ಕಾಂಗ್ರೆಸ್ ಜನಪ್ರತಿನಿಧಿಗಳು, ಕಾಂಗ್ರೆಸ್ ಮುಖಂಡರು ಹಿಂದೆ ಪ್ರಧಾನಿಯವರ ಪ್ರತಿಕೃತಿ ದಹಿಸಿದ್ದರು. ಈಗ ಅವರಿಗೆ ಜನರ ಮುಂದೆ ಹೋಗಲು ಯಾವ ನೈತಿಕತೆ ಇದೆ. ಜನರು ಪೆಟ್ರೋಲ್, ಡಿಸೀಲ್ ಖರೀದಿಸಲು ಪೆಟ್ರೋಲ್ ಬಂಕಿಗೆ ಹೋಗುವಾಗ ಮತ್ತೆ ಬೆಲೆ ಹೆಚ್ಚು ಆಗಿರುವುದರಿಂದ ಸಹಜವಾಗಿ ಇದಕ್ಕೆ ಮೋದಿಯವರೇ ಕಾರಣ ಎಂದು ಅಂದುಕೊಂಡು ಮೋದಿ ಹಾಗೂ ಕೇಂದ್ರ ಸರಕಾರವನ್ನು ತಪ್ಪಿತಸ್ಥ ಸ್ಥಾನದಲ್ಲಿ ನಿಲ್ಲಿಸಬೇಕು ಎನ್ನುವ ಷಡ್ಯಂತ್ರ ರಾಜ್ಯ ಸರಕಾರದಿಂದ ನಡೆಯುತ್ತಿದೆ. ಇದು ಜನರಿಗೆ ಗೊತ್ತಾಗುತ್ತದೆ ಎಂದು ಶಾಸಕ ಕಾಮತ್ ಹೇಳಿದ್ದಾರೆ.

ಪೆಟ್ರೋಲ್, ಡಿಸೀಲ್ ಮೇಲಿನ ತೆರಿಗೆಯಲ್ಲಿ ಕೇಂದ್ರಕ್ಕೆ ಹೋಗುವ ತೆರಿಗೆಗಿಂತ ದ್ವಿಗುಣ ತೆರಿಗೆ ರಾಜ್ಯ ಸರಕಾರಕ್ಕೆ ಬರುತ್ತದೆ. ಹಾಗಿರುವಾಗ ತೆರಿಗೆ ಇಳಿಸಬೇಕಾಗಿರುವ ರಾಜ್ಯ ಸರಕಾರ ಏಕಾಏಕಿ ಇಷ್ಟು ಪ್ರಮಾಣದಲ್ಲಿ ತೆರಿಗೆ ಹೆಚ್ಚಿಸಿರುವುದರಿಂದ ಬರುವ ದಿನಗಳಲ್ಲಿ ಮಂಗಳೂರು ಮಹಾನಗರ ಪಾಲಿಕೆ ಮತ್ತು ಲೋಕಸಭಾ ಚುನಾವಣೆಯಲ್ಲಿ ಜನ ಅದಕ್ಕೆ ಉತ್ತರ ನೀಡಲಿದ್ದಾರೆ ಎಂದು ಶಾಸಕ ಕಾಮತ್ ಹೇಳಿದ್ದಾರೆ.

Comments are closed.